ನೈಜ ಪರಿಶಿಷ್ಟರ ಬೆಂಬಲಕ್ಕೆ ನಿಲ್ಲದ ಸರ್ಕಾರ: ತುಳಸಿದಾಸ್ ಪಾವಸ್ಕರ್ ಆರೋಪ
ʼಉ.ಕ. ಜಿಲ್ಲೆಯ ಮೊಗೇರ್ ಜಾತಿಯವರಿಗೆ ಪ.ಜಾ ಪ್ರಮಾಣಪತ್ರ ನೀಡಿದರೆ ನೈಜ ಪರಿಶಿಷ್ಠರಿಗೆ ಅನ್ಯಾಯʼ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಮೊಗೇರರು ಪರಿಶಿಷ್ಟ ಜಾತಿಗೆ ಸೇರಿದ ಮೊಗೇರರೇ ಅಲ್ಲ, ಅವರು ಹಿಂದುಳಿದ ಪ್ರವರ್ಗ-1ರಲ್ಲಿ ಬರುವ ಮೊಗೇರರಾಗಿದ್ದು ಅವರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವುದರಿಂದ ನೈಜ ಪರಿಶಿಷ್ಟರಿಗೆ ಅನ್ಯಾಯವಾಗುತ್ತದೆ ಎಂದು ಉತ್ತರ ಕನ್ನಡ ಜಿಲ್ಲಾ ನೈಜ ಪರಿಶಿಷ್ಟ ಜಾತಿ/ಪಂಗಡಗಳ ಸಾಂವಿಧಾನಿಕ ಹಕ್ಕುಗಳ ರಕ್ಷಣಾ ಒಕ್ಕೂಟದ ವತಿಯಿಂದ ಮನವಿ ಸಲ್ಲಿಸಲಾಯಿತು.
ಬಾಬಾಸಾಹೇಬ್ ಅಂಬೇಡ್ಕರ್ ಭಾವಚಿತ್ರದೊಂದಿಗೆ ಡೊಳ್ಳು ತಮಟೆಗಳನ್ನು ಬಾರಿಸುತ್ತ ಮೆರವಣೆಗೆ ಮೂಲಕ ಸಹಾಯಕ ಅಯುಕ್ತರ ಕಚೇರಿಗೆ ಆಗಮಿಸಿದ ನೈಜ ಪರಿಶಿಷ್ಠ ಜಾತಿಗೆ ಸೇರಿದ ನೂರಾರು ಮಂದಿ ಮಹಿಳೆಯರು, ಮಕ್ಕಳು ಭಟ್ಕಳ ಉಪವಿಭಾಗದ ಸಹಾಯಕ ಆಯುಕ್ತೆ ಮಮತಾ ದೇವಿಯವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಮುಖಂಡ ತುಳಸಿದಾಸ್ ಪಾವಸ್ಕರ್, ಸರ್ಕಾರ ನೈಜಪರಿಶಿಷ್ಠರ ಬೆಂಬಲಕ್ಕೆ ನಿಲ್ಲುತ್ತಿಲ್ಲ. ಪ್ರತಿಯೊಂದು ಕ್ಷೇತ್ರದಲ್ಲೋ ಮೇಲ್ವರ್ಗದಿಂದ ದೌರ್ಜನ್ಯಕ್ಕೊಳಗಾಗುತ್ತಿದ್ದರೂ ಸರ್ಕಾರ ಮತ್ತು ಸ್ಥಳೀಯ ಆಡಳಿತ ನಮ್ಮನ್ನು ಕಡೆಗಣಿಸುತ್ತಿದೆ ಎಂದು ಆರೋಪಿಸಿದರು.
ಮನವಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಮೀನುಗಾರ ವೃತ್ತಿಯ ಪ್ರವರ್ಗ-1ರ ಯಾದಿಯಲ್ಲಿನ ಮೊಗೇರ ಸಮಾಜದವರು ಭಟ್ಕಳದಲ್ಲಿ ಎಸ್ಸಿ ಪ್ರಮಾಣ ಪತ್ರಕ್ಕಾಗಿ ಧರಣಿ ಸತ್ಯಾಗ್ರಹ ನಡೆಸುತ್ತಿರುವುದು ಜಿಲ್ಲೆಯ ನೈಜ ಪರಿಶಿಷ್ಟರಾದ ಸಮಗಾರ, ಕೊರಾರ, ಭಂಗಿ, ಝಾಡಮಾಲಿ, ಹಳ್ಳೇರ, ಹಸ್ಲರ, ಬಾಕಡ, ಮುಕ್ರಿ, ಅಗೇರ ಹುಲಸ್ವಾರ ಇತ್ಯಾದಿ ಜನತೆಯಲ್ಲಿ ಆತಂಕ ಮನೆ ಮಾಡಿದ್ದು ನಮ್ಮ ಸಾಂವಿಧಾನಿಕ ಹಕ್ಕನ್ನು ಮೇಲ್ಜಾತಿಯವರು ಕಬಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
1976ರ ಪ್ರಾದೇಶಿಕ ನಿರ್ಭಂದ ತೆಗೆದು ಹಾಕಿದ ನಂತರ ಪರಿಶಿಷ್ಟ ಜಾತಿ ಯಾದಿಗೆ ಯಾವುದೇ ಹೊಸ ಜಾತಿಯನ್ನು ಸೇರಿಸಿಲ್ಲ. ಪ್ರಾದೇಶಿಕ ನಿರ್ಭಂದ ತೆಗೆದ ನಂತರ ಯಾವುದೇ ಹೊಸ ಜಾತಿಯನ್ನು ಪರಿಶಿಷ್ಟ ಜಾತಿ ಯಾದಿಗೆ ಸೇರಿಸಿರುವುದಿಲ್ಲ, ಅದರ ದುರ್ಲಾಭ ಪಡೆದು ಕೆಲವು ಸಮಾನ ಜಾತಿ ಸೂಚಕ ಹೆಸರಿನಿಂದ ರಾಜಕೀಯ ಮತ್ತು ಹಣ ಬಲದಿಂದ ಎಸ್ಸಿ ಪ್ರಮಾಣ ಪತ್ರ ಪಡೆದಯುತ್ತಿದ್ದಾರೆ.
ಮಾ.30ರಂದು ವಿಧಾನ ಸಭೆಯಲ್ಲಿ ಶಾಸಕ ಸುನಿಲ್ ನಾಯ್ಕ ಅವರು ಕೇಳಿದ ಪ್ರಶ್ನೆಗೆ ಸಮಾಜ ಕಲ್ಯಾಣ ಇಲಾಖೆಯ ಸಚಿವರು ಲಿಖಿತ ಉತ್ತರವನ್ನು ನೀಡುತ್ತಾ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ 101 ಜಾತಿಗಳು ನಮೂದಾಗಿದ್ದು ಕ್ರ.ಸಂ.78ರಲ್ಲಿ ಮೊಗೇರ ಜಾತಿಯನ್ನು ನಮೂದಿಸಲಾಗಿದೆ. ಅವರು ಎಸ್ಸಿ ಪ್ರಮಾಣ ಪತ್ರವನ್ನು ಪಡೆಯುತ್ತಿದ್ದಾರೆ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಪಟ್ಟಿಯ ಪ್ರವರ್ಗ-1ರ ಕ್ರಮ ಸಂಖ್ಯೆ 6(ಎಇ) ಮತ್ತು (ಎಡಿ) ಅಡಿಯಲ್ಲಿ ಮೊಗವೀರ ಹಾಗೂ ಮೊಗೇರ್ ಜನಾಂಗದವರು ಹಿಂದುಳಿದ ವರ್ಗಗಳ ಜಾತಿಯ ಪಟ್ಟಿಯ ಪ್ರವರ್ಗ-1ರಲ್ಲಿ ಜಾತಿ ಪ್ರಮಾಣ ಪತ್ರವನ್ನು ಪಡೆದುಕೊಳ್ಳುತ್ತಿದ್ದಾರೆ. ತಹಸೀಲ್ದಾರ್ ನೀಡಿರುವ ಪ್ರಮಾಣ ಪತ್ರದಿಂದ ಭಾದಿತನಾದ ವ್ಯಕ್ತಿಯು ಸಂಭಂಧಪಟ್ಟ ಉಪ ವಿಭಾಗದ ಅಸಿಸ್ಟೆಂಟ್ ಕಮಿಷನರ್ ಅವರಲ್ಲಿ ಮನವಿ ಸಲ್ಲಿಸಲು ಸೆ.4(ಬಿ) ಅಡಿಯಲ್ಲಿ ಅವಕಾಶವಿದೆ ಎಂದು ಉತ್ತರ ನೀಡಿದ್ದಾರೆ. ಅಲ್ಲದೇ ಗೋವಿಂದ ಕಾರಜೋಳ ಅವರು ಉತ್ತರ ನೀಡಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಸಂವಿಧಾನದ ನಿಬಂಧನೆಗೆ ಒಳಪಟ್ಟು ನೀಡಬೇಕಾಗುತ್ತದೆ. ಕೇವಲ ಧರಣಿ ಮಾಡಿದ ಮಾತ್ರಕ್ಕೆ ಎಲ್ಲರಿಗೂ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಲು ಬರುವುದಿಲ್ಲ ಎಂದು ಶಾಸಕರ ಬೇಡಿಕೆಯನ್ನು ತಿರಸ್ಕರಿಸಿದ್ದಾರೆ ಎಂದೂ ತಿಳಿಸಲಾಗಿದೆ.
ಅಲ್ಲದೇ ಉತ್ತರ ಕನ್ನಡ ಜಿಲ್ಲೆಯ ಮೀನುಗಾರ ವೃತ್ತಿಯ ಪ್ರವರ್ಗ-1ರ ಯಾದಿಯಲ್ಲಿರುವ ಮೊಗೇರ್ ಜಾತಿ ಇಂತಹ ಯಾವುದೇ ಸಾಮಾಜಿಕ ಪಿಡುಗಿಗೆ ಗುರಿಯಾದ ಸಮಾಜವಲ್ಲ. ಸಮಾಜ ಬ್ರಾಹ್ಮರಷ್ಟೇ ಗೌರವ ಹೊಂದಿದ ಸಮಾಜವಾಗಿದ್ದು ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಗುರುಗಳನ್ನು ಆರಾಧಿಸುವ ಸಮಾಜವಾಗಿದ್ದು ಸರಕಾರವು ಸ್ವಯಂ ಪ್ರೇರಿತವಾಗಿ ಮಾನವ ಶಾಸ್ತ್ರ ಅಧ್ಯಯನ ನಡೆಸಿ ವರದಿ ಪಡೆದು ವರದಿಯಲ್ಲಿನ ಮೊಗೇರ್ ಕರ್ನಾಟಕ ಸರಕಾರದ ಪರಿಶಿಷ್ಟ ಜಾತಿ ಯಾದಿ ನಂ.78ರಲ್ಲಿನ ಮೊಗೇರ ಜಾತಿಯವರಲ್ಲ ಎಂದು ತೀರ್ಮಾನಕ್ಕೆ ಬಂದು ಕಳೆದ 12 ವರ್ಷಗಳಿಂದ ಎಸ್ಸಿ ಪ್ರಮಾಣ ಪತ್ರ ನೀಡುವುದನ್ನು ನಿಲ್ಲಿಸಿದೆ. ಯಾವುದೇ ಜಾತಿ/ಜನಾಂಗದ ಪ್ರಮಾಣ ಪತ್ರ ನೀಡುವಂತೆ ಆದೇಶಿಸುವ ಅಧಿಕಾರಿ ಉಚ್ಚ/ಸರ್ವೋಚ್ಚ ನ್ಯಾಯಾಲಯ, ರಾಜ್ಯ ಸರಕಾರ, ರಾಷ್ಟ್ರಪತಿಗಳಿಗೆ ಇಲ್ಲ. ಕೇಂದ್ರ ಸಂಸತ್ತು ಮಾತ್ರ ವಿಸ್ತ್ರತ ಚರ್ಚೆ ಮಾಡಿ ಅಂಗೀಕರಿಸಿದಲ್ಲಿ ಮಾತ್ರ ಜಾತಿ ಪ್ರಮಾಣ ಪತ್ರವನ್ನು ನೀಡಲು ಅವಕಾಶವಿದೆ ಎಂದೂ ತಮ್ಮ ಮನವಿಯಲ್ಲಿ ಹೇಳಿದ್ದಾರೆ.
ಕಳೆದ 12 ವರ್ಷಗಳಿಂದ ಎಸ್ಸಿ ಪ್ರಮಾಣ ನಿಲ್ಲಿಸಿದ್ದರೂ ಸಹ ಹಳೆಯ ಪ್ರಮಾಣ ಪತ್ರವನ್ನೇ ಇಟ್ಟುಕೊಂಡು ಸ್ಥಳೀಯ ಸಂಸ್ಥೆಗಳ ಚುನಾವಣೆ, ಸಹಕಾರಿ ಸಂಘಗಳ ಚುನಾವಣೆಗಳಿಗೆ ಸ್ಪರ್ಧಿಸಿ ನೈಜ ಪರಿಶಿಷ್ಟರ ಮೇಲೆ ದೌರ್ಜನ್ಯವಾಗುತ್ತಿದ್ದು ಇದನ್ನು ಸಹ ತಡೆಯಬೇಕು ಎಂದೂ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ತುಳಸೀದಾಸ ಪಾವಸ್ಕರ್, ನಾರಾಯಣ ಶಿರೂರು, ಎನ್. ಆರ್. ಮುಕ್ರಿ, ಅಶೋಕ ಹಸ್ಲರ್, ಕಿರಣ್ ಶಿರೂರು, ಮಾದೇವ ಬಾಕಡ್, ವೆಂಕಟೇಶ ಹಳ್ಳೇರ, ಗಣೇಶ ಹಳ್ಳೇರ ಸೇರಿದಂತೆ ಮಹಿಳೆಯರು, ಮಕ್ಕಳು ಇದ್ದರು.












