ಫೆಮಾ ಉಲ್ಲಂಘನೆ ಆರೋಪ: ಜಾರಿ ನಿರ್ದೇಶನಾಲಯದಿಂದ ಮಂಗಳೂರಿನ ಉದ್ಯಮಿಯ ಮನೆ ಜಪ್ತಿ

ಬೆಂಗಳೂರು, ಎ.1: ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಉಲ್ಲಂಘಿಸಿ ಆಸ್ತಿ ಸಂಪಾದಿಸಿದ ಆರೋಪದ ಮೇಲೆ ಜಾರಿ ನಿರ್ದೇಶನಾಲ)ಯವು ಮಂಗಳೂರಿನ ಅತ್ತಾವರದ ಇಕ್ಬಾಲ್ ಅಹ್ಮದ್ ಎಂಬವರಿಗೆ ಸೇರಿದ 8.3 ಕೋಟಿ ರೂ. ಮೌಲ್ಯದ ಮನೆಯನ್ನು ಗುರುವಾರ ಜಪ್ತಿ ಮಾಡಿದ್ದಾರೆ.
ಇನ್ಫ್ರಾ ಪ್ರಾಜೆಕ್ಟ್ ಪ್ರೈವೇಟ್ ಲಿ. ಮತ್ತು ಶರೀಫ್ ಮರೈನ್ ಪ್ರಾಡಕ್ಟ್ಸ್ ಪ್ರೈ.ಲಿ.ನ ವ್ಯವಸ್ಥಾಪಕ ನಿರ್ದೇಶಕರಾಗಿರುವ ಇಕ್ಬಾಲ್ ಅಹ್ಮದ್ ಅವರು ಫೆಮಾ ಕಾಯ್ದೆ ಉಲ್ಲಂಘಿಸಿ ವಿದೇಶದಲ್ಲಿ ಅಕ್ರಮವಾಗಿ ಆಸ್ತಿ ಸಂಪಾದಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು. ದುಬೈ, ಯುಎಇನಲ್ಲಿ 53.09 ಲಕ್ಷ ರೂ.ಯುಎಇ ದಿರ್ಹಂಗಳ (ಭಾರತದ 8.03 ಕೋಟಿ ರೂ.ಗೆ ಸಮಾನ) ಸ್ಥಿರಾಸ್ತಿ ಸಂಪಾದಿಸಿರುವುದಾಗಿ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಅವರ ಮನೆಯನ್ನು ಗುರುವಾರ ಜಪ್ತಿ ಮಾಡಲಾಗಿದೆ ಎಂದು ಈಡಿ ಮಾಹಿತಿ ನೀಡಿದೆ.
ಫೆಮಾ ಕಾಯ್ದೆ ಉಲ್ಲಂಘಿಸಿ ವಿದೇಶದಲ್ಲಿ ಸ್ಥಿರಾಸ್ತಿ ಸಂಪಾದಿಸಿದ್ದರೆ, ಅಲ್ಲಿನ ಮೌಲ್ಯಕ್ಕೆ ಸಮಾನವಾಗಿ ಭಾರತದಲ್ಲಿರುವ ಆರೋಪಿತ ವ್ಯಕ್ತಿಯ ಆಸ್ತಿಯನ್ನು ಜಪ್ತಿ ಮಾಡುವ ಅಧಿಕಾರ ಇದೆ ಎಂದು ಈಡಿ ತಿಳಿಸಿದೆ.