ಅನಿಲ್ ದೇಶಮುಖ್ ಪ್ರಕರಣ: ಕೋರ್ಟ್ ಮೇಲ್ವಿಚಾರಣೆ ತನಿಖೆಗೆ ಮಹಾರಾಷ್ಟ್ರ ಸರಕಾರ ಸಲ್ಲಿಸಿದ ಅರ್ಜಿ ತಿರಸ್ಕರಿಸಿದ ಸುಪ್ರೀಂ

ಹೊಸದಿಲ್ಲಿ: ಮಹಾರಾಷ್ಟ್ರದ ಮಾಜಿ ಸಚಿವ ಅನಿಲ್ ದೇಶಮುಖ್ ಅವರ ವಿರುದ್ಧದ ಆರೋಪಗಳ ಕುರಿತಂತೆ ಕೋರ್ಟ್ ಮೇಲ್ವಿಚಾರಣೆಯ ತನಿಖೆ ನಡೆಸಬೇಕೆಂದು ಕೋರಿ ಮಹಾರಾಷ್ಟ್ರ ಸರಕಾರ ಸಲ್ಲಿಸಿದ್ದ ಅರ್ಜಿಯನ್ನು ಇಂದು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆಯಲ್ಲದೆ ಸಿಬಿಐ ತನಿಖೆ ಮುಂದುವರಿಯಲಿದೆ ಎಂದು ಹೇಳಿದೆ. "ಈ ವಿಚಾರವನ್ನು ನಾವು ಮುಟ್ಟುವುದೂ ಇಲ್ಲ" ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ತನ್ನ ಸಚಿವರು ಹಾಗೂ ನಾಯಕರನ್ನು ಟಾರ್ಗೆಟ್ ಮಾಡಲು ಕೇಂದ್ರ ಸರಕಾರ ಸಿಬಿಐ ಮುಂತಾದ ಕೇಂದ್ರೀಯ ಏಜನ್ಸಿಗಳನ್ನು ಬಳಸುತ್ತಿದೆ ಎಂದು ಆರೋಪಿಸುತ್ತಿರುವ ಮಹಾರಾಷ್ಟ್ರ ಸರಕಾರಕ್ಕೆ ಸುಪ್ರೀಂ ಕೋರ್ಟಿನ ಇಂದಿನ ನಿರ್ಧಾರ ದೊಡ್ಡ ಹಿನ್ನಡೆಯಾಗಿದೆ.
ಅನಿಲ್ ದೇಶಮುಖ್ ಅವರ ವಿರುದ್ಧದ ಭ್ರಷ್ಟಾಚಾರ ಆರೋಪ ಕುರಿತು ಸಿಬಿಐ ತನಿಖೆ ಬದಲು ಕೋರ್ಟ್ ಮೇಲ್ವಿಚಾರಣೆಯ ಎಸ್‍ಐಟಿ ಮೂಲಕ ತನಿಖೆ ನಡೆಸಬೇಕೆಂದು ಮಹಾರಾಷ್ಟ್ರ ಸರಕಾರ ಕೋರಿತ್ತಲ್ಲದೆ ಸಿಬಿಐ ನೇತೃತ್ವವನ್ನು ಮಹಾರಾಷ್ಟ್ರದ ಮಾಜಿ ಪೊಲೀಸ್ ಮುಖ್ಯಸ್ಥರಾಗಿರುವ ಸುಬೋಧ್ ಕುಮಾರ್ ಜೈಸ್ವಾಲ್ ಅವರು ವಹಿಸಿರುವುದರಿಂದ ತನಿಖೆ ನಿಷ್ಪಕ್ಷಪಾತವಾಗದು ಎಂದು ತನ್ನ ಅರ್ಜಿಯಲ್ಲಿ ತಿಳಿಸಿತ್ತು.
ದೇಶಮುಖ್ ಅವರು ಮಹಾರಾಷ್ಟ್ರ ಗೃಹ ಸಚಿವರಾಗಿದ್ದ ವೇಳೆ ಪೊಲೀಸರ ವರ್ಗಾವಣೆಗಳು ಮತ್ತು ಪೋಸ್ಟಿಂಗ್‍ಗಳಿಗೆ ಲಂಚ ಸ್ವೀಕರಿಸುತ್ತಿದ್ದರು ಎಂಬ ಆರೋಪ ಎದುರಿಸುತ್ತಿದ್ದಾರೆ.







