ಸರಕಾರಿ ವೈದ್ಯಕೀಯ ಕಾಲೇಜಿಗೆ ಆಗ್ರಹ: ಮಲ್ಪೆಯಿಂದ ಮಣಿಪಾಲದವರೆಗೆ ಪಾದಯಾತ್ರೆ
'ಪಿಪಿಪಿ ಮಾದರಿಗೆ ವಿರೋಧ'

ಉಡುಪಿ : ಉಡುಪಿ ಜಿಲ್ಲೆಗೆ ಸರಕಾರಿ ವೈದ್ಯಕೀಯ ಕಾಲೇಜು ಒದಗಿ ಸುವಂತೆ ಆಗ್ರಹಿಸಿ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಪಿಪಿಪಿ ಮಾದರಿಯ ಕಾಲೇಜು ವಿರೋಧಿಸಿ ಉಡುಪಿಯ ಕರಾವಳಿ ಯೂತ್ ಕ್ಲಬ್ ನೇತೃತ್ವದಲ್ಲಿ ಶುಕ್ರವಾರ ಮಲ್ಪೆಯಿಂದ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿವರೆಗೆ ಒಟ್ಟು 11 ಕಿ.ಮೀ. ದೂರದ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು.
ಬೆಳಗ್ಗೆ ೮.೧೫ಕ್ಕೆ ಮಲ್ಪೆ ಕಡಲ ತೀರದಲ್ಲಿರುವ ಗಾಂಧಿ ಪ್ರತಿಮೆಯಿಂದ ಹೊರಟ ಪಾದಯಾತ್ರೆಯು ಮಲ್ಪೆ ಪೇಟೆ, ಆದಿಉಡುಪಿ, ಕರಾವಳಿ ಬೈಪಾಸ್, ಸಿಟಿ ಬಸ್ ನಿಲ್ದಾಣ, ಕಡಿಯಾಳಿ, ಇಂದ್ರಾಳಿ, ಲಕ್ಷ್ಮೀಂದ್ರನಗರ ಮಾರ್ಗವಾಗಿ ಮಣಿಪಾಲದಲ್ಲಿರುವ ಉಡುಪಿ ಜಿಲ್ಲಾಧಿಕಾರಿ ಕಚೇರಿಗೆ ೧೧.೧೫ಕ್ಕೆ ತಲುಪಿತು.
ಬಳಿಕ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಮನೋ ವೈದ್ಯ ಡಾ.ಪಿ.ವಿ. ಭಂಡಾರಿ, ಕಳೆದ ೨೫ವರ್ಷಗಳಿಂದ ಜಿಲ್ಲೆಯ ವಿವಿಧ ಪಕ್ಷದ ಜನಪ್ರತಿನಿಧಿಗಳು, ಸರಕಾರಿ ವೈದ್ಯಕೀಯ ಕಾಲೇಜು ವಿಚಾರದಲ್ಲಿ ಜಿಲ್ಲೆಯ ಜನತೆಯನ್ನು ಮೂರ್ಖ ರನ್ನಾಗಿ ಮಾಡಿದ್ದಾರೆ. ಆದುದರಿಂದ ಇಂದು ನಮ್ಮ ದಿನಾಚರಣೆ. ನಮ್ಮ ಬೇಡಿಕೆ ಜಿಲ್ಲೆಗೆ ಸುಸಜ್ಜಿತವಾದ ಸರಕಾರಿ ವೈದ್ಯಕೀಯ ಕಾಲೇಜು ನೀಡಬೇಕೆ ಹೊರತು ಖಾಸಗಿ ಸಹಭಾಗಿತ್ವದ ಪಿಪಿಪಿ ಮಾದರಿ ಬೇಡ ಎಂದರು.
ನಮಗೆ ಸಂಪೂರ್ಣ ಸರಾಕಾರಿ ವೈದ್ಯಕೀಯ ಕಾಲೇಜು ಒದಗಿಸಬೇಕು. ನಮ್ಮ ಧ್ವನಿಯನ್ನು ಶಾಸಕರು ಸರಕಾರಕ್ಕೆ ಮುಟ್ಟಿಸುವ ಕಾರ್ಯ ಮಾಡಬೇಕು. ಪಿಪಿಪಿ ಮಾದರಿಯ ಕಾಲೇಜನ್ನು ನಾವು ಯಾವುದೇ ಕಾರಣಕ್ಕೂ ಒಪ್ಪುದಿಲ್ಲ. ಇದರ ವಿರುದ್ಧ ತೀವ್ರ ಹೋರಾಟ ನಡೆಸಲಾಗುವುದು. ಅಲ್ಲದೇ ಮುಂದೆ ಪ್ರತಿ ತಾಲೂಕಿ ನಲ್ಲಿಯೂ ಪ್ರತಿಭಟನೆ ಮಾಡಲಾಗುವುದೆಂದು ಅವರು ಎಚ್ಚರಿಕೆ ನೀಡಿದರು.
ಕರ್ನಾಟಕ ರಾಷ್ಟ್ರ ಪಕ್ಷದ ಸ್ಥಾಪಕ ರವಿಕೃಷ್ಣ ರೆಡ್ಡಿ ಮಾತನಾಡಿ, ಅವಿಭಿಜತ ದಕ್ಷಿಣ ಕನ್ನಡ ಜಿಲ್ಲೆಯ ಸ್ಥಿತಿವಂತರಿಗೆ ಉತ್ತಮ ಚಿಕಿತ್ಸಾ ಸೌಲಭ್ಯ ಹಾಗೂ ಆರೋಗ್ಯ ಸೇವೆಗಳಿವೆ. ಆದರೆ ಬಡವರಿಗೆ, ಮಾಧ್ಯಮದವರಿಗೆ ಯಾವುದೇ ವ್ಯವಸ್ಥೆ ಇಲ್ಲ. ಇಲ್ಲಿ ಖಾಸಗಿ ಮೆಡಿಕಲ್ ಕಾಲೇಜುಗಳು ಮತ್ತು ಕಾರ್ಪೊರೇಟ್ ಆಸ್ಪತ್ರೆಗಳೇ ಹೆಚ್ಚಾಗಿ ಇರುವುದು. ಆದುದರಿಂದ ಈ ಸಾಮಾಜಿಕ ಅಸಮಾನತೆ ಯನ್ನು ದೂರ ಮಾಡಲು ಕೂಡಲೇ ಸರಕಾರಿ ವೈದ್ಯಕೀಯ ಕಾಲೇಜನ್ನು ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.
ಉಡುಪಿ, ಮಂಗಳೂರು ಸೇರಿದಂತೆ ರಾಜ್ಯದ ೧೨ ಜಿಲ್ಲೆಗಳಲ್ಲಿ ಸರಕಾರಿ ವೈದ್ಯಕೀಯ ಕಾಲೇಜುಗಳಿಲ್ಲ. ಕರಾವಳಿ ಜನ ಮೂಲಭೂತ ಸೌರ್ಕಯ ಹಾಗೂ ಜನಪರ ವಿಚಾರಗದಳಿಗೆ ಧ್ವನಿ ಎತ್ತುವ ಬದಲು ಕ್ಷುಲ್ಲಕ ವಿಚಾರಕ್ಕಾಗಿ ಬೀದಿ ಯಲ್ಲಿ ಹೊಡೆದಾಟ ನಡೆಸುವುದೇ ಹೆಚ್ಚು ಎಂದು ಅವರು ತಿಳಿಸಿದರು.
ನಂತರ ಈ ಕುರಿತ ಮನವಿಯನ್ನು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಸಲ್ಲಿಸಲಾಯಿತು. ಮನವಿಯನ್ನು ಉಡುಪಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಪ್ರತಿಭಾ ಆರ್. ಸ್ವೀಕರಿಸಿದರು. ರಾಮಾಂಜಿ ಮನವಿಯನ್ನು ವಾಚಿಸಿದರು.
ಈ ಸಂದರ್ಭದಲ್ಲಿ ಕರಾವಳಿ ಯೂತ್ ಕ್ಲಬ್‌ನ ಅಧ್ಯಕ್ಷ ಅಶೋಕ್ ಆಚಾರ್ಯ, ಕಾರ್ಯದರ್ಶಿ ಸಂದೇಶ್ ಶೆಟ್ಟಿ, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಸಿಐಟಿಯು ಮುಖಂಡ ವೆಂಕಟೇಶ್ ಕೋಣಿ, ಆಮ್ ಆದ್ಮಿ ಪಕ್ಷದ ಜಿಲ್ಲಾ ಸಂಘಟಕರಾದ ಎಸ್.ಆರ್.ಲೋಬೊ, ವಿಜಯಾನಂದ ಪಾಂಗಾಳ, ಸುರೇಶ್ ಭಂಡಾರಿ, ರಮೇಶ್ ಕೋಟ್ಯಾನ್, ಕರ್ನಾಟಕ ರಾಷ್ಟ್ರ ಪಕ್ಷದ ಜಿಲ್ಲಾಧ್ಯಕ್ಷ ಅಶೋಕ್‌ರಾಜ್ ಕಾಡಬೆಟ್ಟು, ಸಾಮಾಜಿಕ ಕಾರ್ಯಕರ್ತ ರಾದ ವಿಶು ಶೆಟ್ಟಿ ಅಂಬಲಪಾಡಿ, ಅನ್ಸಾರ್ ಅಹ್ಮದ್, ಎಸ್‌ಐಓ ಮುಖಂಡ ರಾದ ಫಹೀಮ್, ಅಯಾನ್, ಬಿಲಾಲ್ ಮಲ್ಪೆ ಮೊದಲಾದವರು ಉಪಸ್ಥಿತರಿದ್ದರು.
