ಪರಿಶಿಷ್ಟರ ಹೆಸರಿನಲ್ಲಿ ಕಾಮಗಾರಿ ಹಣ ದುರ್ಬಳಕೆ; ತನಿಖೆಗೆ ಆಗ್ರಹಿಸಿ ಸಮಾಜ ಕಲ್ಯಾಣ ಸಚಿವರಿಗೆ ಮನವಿ

ಕುಂದಾಪುರ : ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮ ಘರ್ಜನೆ ವತಿಯಿಂದ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ವಿವಿಧ ಬೇಡಿಕೆಗಳ ಮನವಿಯನ್ನು ಶುಕ್ರವಾರ ಕುಂದಾಪುರದಲ್ಲಿ ಸಲ್ಲಿಸ ಲಾಯಿತು.
ಶಂಕರನಾರಾಯಣದಲ್ಲಿ ಪರಿಶಿಷ್ಟರ ಹೆಸರಿನಲ್ಲಿ ಒಟ್ಟು ಮೂರು ಕೋಟಿ ಹಣ ಕಾಮಗಾರಿ ಹೆಸರಿನಲ್ಲಿ ದುರ್ಬಳಕೆ ಆದ ಬಗ್ಗೆ ತನಿಖೆ ನಡೆಸಬೇಕು. ತಲ್ಲೂರು ಗೋಮಾಳ ಜಾಗವನ್ನು ಸಡಿಲಿಸಿ ನಿವೇಶನ ಮಾಡಿಕೊಡಬೇಕು. ಸೌಕೂರು ಏತ ನೀರಾವರಿ ಯೋಜನೆಯಲ್ಲಿ ತಲ್ಲೂರು ಗ್ರಾಮವನ್ನು ಮರು ಸೇರಿಸಬೇಕು. ತಾಲೂಕಿನ ಹೃದಯ ಭಾಗದಲ್ಲಿ ಅಂಬೇಡ್ಕರ್ ಅಧ್ಯಯನದ ಹಾಲ್ ರಚಿಸ ಬೇಕು.
ತಾಲೂಕಿನಲ್ಲಿ ಸಚಿವರ ಅಧ್ಯಕ್ಷತೆಯಲ್ಲಿ ದಲಿತರ ಕುಂದು ಕೊರತೆ ಸಭೆ ಕರೆದು ಸಮಸ್ಯೆಗೆ ಧ್ವನಿಯಾಗಬೇಕು. ಕುಂದಾಪುರ ಆಶ್ರಮ ಶಾಲೆಯಲ್ಲಿ ಒಂದರಿಂದ ಐದನೆ ತರಗತಿ ಓದುತ್ತಿರುವ ಮಕ್ಕಳಿಗೆ ಪ್ರತ್ಯೇಕ ಹಾಸ್ಟೆಲ್ ಕಲ್ಪಿಸಬೇಕು. ಪರಿಶಿಷ್ಟ ಜಾತಿ, ಪಂಗಡಗಳಿಗೆ ಐದು ಲಕ್ಷ ವೆಚ್ಚದ ಮನೆ ಮಂಜೂರು ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ(ಭೀಮ ಘರ್ಜನೆ)ಯ ರಾಜ್ಯ ಸಂಚಾಲಕ ಉದಯ್ ಕುಮಾರ್ ತಲ್ಲೂರು ನೇತೃತ್ವದಲ್ಲಿ ನೀಡಲಾಯಿತು. ಈ ವೇಳೆ ದಲಿತ ಮುಖಂಡರಾದ ವಿಜಯ್ ಕೆ.ಎಸ್, ಚಂದ್ರಮ ತಲ್ಲೂರು, ಮಂಜುನಾಥ ಗುಡ್ಡೆಯಂಗಡಿ, ರಾಮ ಬೆಳ್ಳಾಲ, ಸುಕಾನಂದ ತಲ್ಲೂರು, ಉಪಸ್ಥಿತರಿದ್ದರು.