ಸಿದ್ಧಗಂಗಾ ಶ್ರೀಗಳಿಗೆ ಭಾರತರತ್ನ ನೀಡಲು ಕೋರಿ ಸಲ್ಲಿಸಿದ್ದ ಅರ್ಜಿ ಹೈಕೋರ್ಟ್‍ನಿಂದ ವಜಾ

ಬೆಂಗಳೂರು, ಎ.1: ಸಿದ್ಧಗಂಗಾ ಮಠದ ಶಿವಕುಮಾರ ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಸರಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಈ ಕುರಿತು ರೆಹಾನ್ ಖಾನ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಗೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ಅರ್ಜಿಯನ್ನು ವಜಾಗೊಳಿಸಿದೆ.
ಶಿವಕುಮಾರ ಶ್ರೀಗಳಿಗೆ ಭಾರತರತ್ನ ನೀಡುವಂತೆ ಪ್ರಧಾನಮಂತ್ರಿಗಳಿಗೆ ನಿರ್ದೇಶನ ನೀಡಲು ಸಾಧ್ಯವಿಲ್ಲ. ಪ್ರಶಸ್ತಿ ನೀಡುವ ಕುರಿತು ರಾಷ್ಟ್ರಪತಿಗಳು ಸರಕಾರದೊಂದಿಗೆ ಚರ್ಚಿಸಿ ಈ ಬಗ್ಗೆ ನಿರ್ಧರಿಸುತ್ತಾರೆ. ಪ್ರಶಸ್ತಿ ನೀಡುವಂತೆ ಕೋರ್ಟ್ ನಿರ್ದೇಶಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾ ಮಾಡಿದೆ.
ಸಿದ್ಧಗಂಗಾ ಮಠದಲ್ಲಿ ಲಕ್ಷಾಂತರ ಮಂದಿ ಬದುಕಿಗೆ ಬೆಳಕಾದ ಶಿವಕುಮಾರ ಸ್ವಾಮೀಜಿ ಅವರು ಭಾರತರತ್ನ ಪ್ರಶಸ್ತಿದೆ ಎಲ್ಲ ರೀತಿಯಲ್ಲೂ ಅರ್ಹರಿದ್ದಾರೆ. ಆದರೆ, ಸರಕಾರ ಅವರಿದ್ದಾಗಲೂ ಭಾರತ ರತ್ನ ಪ್ರಶಸ್ತಿ ನೀಡಲಿಲ್ಲ. ಹೀಗಾಗಿ, ಅವರ ಸೇವೆ ಪರಿಗಣಿಸಿ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡುವಂತೆ ಪ್ರಧಾನಮಂತ್ರಿ ಅವರಿಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದರು.





