"ಎಲ್ಲ ಸಮುದಾಯದವರೊಂದಿಗೂ ವ್ಯಾಪಾರ ಮಾಡಿ": ಮುಸ್ಲಿಂ ಧರ್ಮ ಗುರುಗಳಿಂದ ಧರ್ಮ ಸಹಿಷ್ಣುತೆಯ ಸಂದೇಶ

ಬೆಂಗಳೂರು, ಎ.1: ಪ್ರಸ್ತುತ ಸಮಾಜದಲ್ಲಿ ಕೋಮುದ್ವೇಷವನ್ನು ಹರಡುವ ಕೆಲಸ ಮಾಡಲಾಗುತ್ತಿದೆ. ಹಾಗಾಗಿ ಮುಸ್ಲಿಮರು ಈ ದ್ವೇಷದ ವಾತಾವರಣದಿಂದ ನಿರಾಶರಾಗಬಾರದು. ಎಲ್ಲಾ ಧರ್ಮದವರು ಧರ್ಮ ಸಹಿಷ್ಣುತೆಯನ್ನು ಪ್ರತಿಪಾದಿಸಬೇಕು ಎಂದು ಮುಸ್ಲಿಂ ಧರ್ಮಗುರುಗಳು ಕರೆ ನೀಡಿದ್ದಾರೆ.
ಶುಕ್ರವಾರ ಪ್ರೆಸ್‍ಕ್ಲಬ್‍ನಲ್ಲಿ ಮುಫ್ತಿ ಇಫ್ತೆಖಾರ್ ಅಹ್ಮದ್ ಕಾಸ್ಮಿ ಅವರು ಮಾತನಾಡಿ, ಕೆಲವು ತಿಂಗಳುಗಳ ಹಿಂದೆ ಜನರ ಸಮಸ್ಯೆಗಳನ್ನು ಬಿಟ್ಟು ಇಲ್ಲದ ವಿಷಯಗಳ ಮೇಲೆ ಅಂದರೆ, ಉತ್ಸವಗಳಲ್ಲಿ ವ್ಯಾಪಾರಿಗಳನ್ನು ಬಹಿಷ್ಕರಿಸುವುದು ಅಥವಾ ಹಲಾಲ್ ವಿಷಯದಲಿ ಸುಳ್ಳು ಮತ್ತು ಸಂಬಂಧವಿಲ್ಲದ ಚರ್ಚೆಯನ್ನು ಮಾಡಿ ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ. ಇದು ಖಂಡನೀಯವಾದ್ದು. ಸಮಾಜದಲ್ಲಿ ದ್ವೇಷ ಹರಡುವವರು ಮುಸಲ್ಮಾನರೇ ಆಗಿರಲಿ ಅಥವಾ ಯಾರೇ ಆಗಿರಲಿ ಅವರ ಮಾತುಗಳಿಗೆ ಮರುಳಾಗಬಾರದು ಎಂದು ಕರೆ ನೀಡಿದರು.
ರಮಝಾನ್ ತಿಂಗಳು ಬರುತ್ತಿದ್ದು, ರಮಝಾನ್ ನಲ್ಲಿ ಮಸೀದಿಗಳ ಸಮೀಪ ಯಾವುದೇ ಧರ್ಮದ ವ್ಯಾಪಾರಿಗಳು ಹಣ್ಣಗಳನ್ನು ಮಾರಾಟ ಮಾಡುತ್ತಿದ್ದರೆ ಯಾವುದೇ ಧರ್ಮ ಭೇದವಿಲ್ಲದೆ, ಎಲ್ಲಾ ಸಮುದಾಯಗಳ ವ್ಯಾಪಾರಸ್ಥರ ಜೊತೆ ವ್ಯಾಪಾರ ಮಾಡಬೇಕು ಎಂದು ಅವರು ಸಂದೇಶ ರವಾನೆ ಮಾಡಿದರು.
ಗೋಷ್ಠಿಯಲ್ಲಿ ವಹೀದುದ್ದೀನ್ ಖಾನ್, ಮೌಲಾನಾ ಸಯ್ಯದ್ ಶಬ್ಬೀರ್ ಅಹ್ಮದ್ ನದ್ವಿ, ಮೌಲಾನಾ ಮಕ್ಸೂದ್ ಇಮ್ರಾನ್ ರಷಾದಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.







