ಪುತ್ತಿಗೆಶ್ರೀಗಳಿಗೆ ಗೋಡಂಬಿ, ಬಾದಾಮಿಯ ಪೇಟ ತೊಡಿಸಿದ ಪೇಜಾವರಶ್ರೀ

ಉಡುಪಿ : ಭಾವಿ ಪರ್ಯಾಯ ಪೀಠಾಧಿಪತಿ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥರಿಗೆ 60 ವರ್ಷ ಪೂರ್ಣಗೊಂಡ ನಿಮಿತ್ತ ಅವರ ಅಭಿಮಾನಿಗಳು ಹಾಗೂ ಶಿಷ್ಯರು ಬೆಂಗಳೂರಿನ ಬಸವನಗುಡಿ ರಾಮಕೃಷ್ಣ ಆಶ್ರಮದ ಸಮೀಪದ ಗುರುನರಸಿಂಹ ಕಲ್ಯಾಣಮಂಟಪದಲ್ಲಿ ಆಯೋಜಿಸಿದ್ದ ‘ಗುರು ವಂದನೋತ್ಸವ’ ಕಾರ್ಯಕ್ರಮದಲ್ಲಿ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥರು ಶ್ರೀಕೃಷ್ಣನಿಗೆ ಅಲಂಕರಿಸಿದ್ದ ಗೋಡಂಬಿ ಬಾದಾಮಿಗಳಿಂದ ಸಿದ್ಧಪಡಿಸಿದ ಪೇಟವನ್ನು ತೊಡಿಸಿ ಗೌರವಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥರು, ಪುತ್ತಿಗೆಶ್ರೀಗಳು ನಡೆದಾಡುವ ಭಗವದ್ಗೀತೆ. ಭಗವಂತನ ಸಂದೇಶವನ್ನು ವಿದೇಶದ ಭಕ್ತರಿಗೂ ಸಾರಿದವರು. ಶ್ರೀಗಳದ್ದು ಮೇರು ವ್ಯಕ್ತಿತ್ವ. ಅವರ ಮುಂದೆ ನಾವೆಲ್ಲರೂ ಕುಬ್ಜರಾಗಿ ಕಾಣುತ್ತೇವೆ. ಸುಜ್ಞಾನೇಂದ್ರತೀರ್ಥರ ನಂತರ ಮಠವನ್ನು ಸಮರ್ಥವಾಗಿ ನಿರ್ವಹಿಸಿದವರು ಇವರು ಎಂದರು.
ಆದರ್ಶ ಗುರು ಶಿಷ್ಯರು: ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪುತ್ತಿಗೆ ಮಠಾಧೀಶರು, ಪೇಜಾವರ ಮಠದ ಶ್ರೀವಿಶ್ವೇಶತೀರ್ಥರು ಹಾಗೂ ವಿಶ್ವಪ್ರಸನ್ನರು ಆದರ್ಶ ಗುರುಶಿಷ್ಯರು. ಮೊದಲ ಬಾರಿಗೆ ಪರ್ಯಾಯ ಪೀಠಾರೋಹಣ ಅವಕಾಶ ಸಿಕ್ಕಾಗ, ತಮ್ಮ ಗುರುಗಳ ಪಂಚಮ ಪರ್ಯಾಯ ಪೂರ್ಣ ಆಗಬೇಕು ಅನ್ನುವ ಅಭಿಲಾಷೆಯನ್ನು ಹೊಂದಿದ್ದರು. ಅದರಂತೆ ಅವರು ನಡೆದುಕೊಂಡರು. ಆ ಮೂಲಕ ಇಡೀ ಗುರು-ಶಿಷ್ಯ ಪರಂಪರೆಗೆ ಮಾದರಿಯಾಗಿದ್ದಾರೆ ಎಂದರು.
ಇನ್ಫೋಸಿಸ್ ಫೌಂಡೇಶನ್‌ನ ಮಾಜಿ ಅಧ್ಯಕ್ಷೆ ಸುಧಾಮೂರ್ತಿ ಮಾತನಾಡಿ, ಹೊಸ ವಿಚಾರವನ್ನು ಅಳವಡಿಸಿಕೊಳ್ಳಲು ನಾವು ಕೆಲವೊಮ್ಮೆ ಧಾರ್ಮಿಕ ಕಟ್ಟುಪಾಡುಗಳನ್ನು ಮೀರಬೇಕಾಗುತ್ತದೆ. ಅಂತಹ ಮಹತ್ವದ ಕೆಲಸಕ್ಕೆ ಪುತ್ತಿಗೆ ಶ್ರೀಪಾದರು ಕೈ ಹಾಕಿದ್ದಾರೆ. ಸನಾತನ ಧರ್ಮದಲ್ಲಿ ವಿದೇಶ ಪ್ರಯಾಣಕ್ಕೆ ನಿಷೇಧವಿದೆ. ಆದರೆ ಶ್ರೀಗಳು ಈ ಧಾರ್ಮಿಕ ಕಟ್ಟುಪಾಡುಗಳನ್ನು ಬದಿಗಿಟ್ಟು ಶ್ರೀಕೃಷ್ಣನ ಸಂದೇಶವನ್ನು ಜಗತ್ತಿನಾದ್ಯಂತ ಸಾರಿದವರು ಎಂದರು.
ಇದೇ ಸಂದರ್ಭದಲ್ಲಿ ಪುತ್ತಿಗೆ ಶ್ರೀಗಳಿಗೆ ಗೌರವ ಸಮರ್ಪಣೆ ಮಾಡಲಾಯಿತು. ಡಾ.ಶತಾವಧಾನಿ ಉಡುಪಿ ರಾಮನಾಥ ಆಚಾರ್ಯ ಸಂಪಾದಕತ್ವದಲ್ಲಿ ‘ಅರವತ್ತು’ ಕೃತಿಯನ್ನು ಬಿಡುಗಡೆಗೊಳಿಸಲಾಯಿತು.
ಶಾಸಕ ಎಲ್.ರವಿಸುಬ್ರಹ್ಮಣ್ಯ, ವಿಧಾನ ಪರಿಷತ್ ಸದಸ್ಯ ವೆಂಕಟೇಶ್, ರಾಜ್ಯ ಹಿಂದುಳಿದ ವರ್ಗಗಳ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ, ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ, ಶ್ರೀಪಾದರ ಬೆಂಗಳೂರು ಅಭಿಮಾನಿಗಳ ಸಂಘದ ಅಧ್ಯಕ್ಷ ಪ್ರೊ.ಕೆ.ಇ.ರಾಧಾಕೃಷ್ಣ ಉಪಸ್ಥಿತರಿದ್ದರು.







