ವರ್ಷದಲ್ಲಿ ಏಳು ಬಾರಿ ಪರಿಷ್ಕರಣೆಗೊಳಗಾದ ವಿಮಾನ ಇಂಧನ ಬೆಲೆಗಳು ಸಾರ್ವಕಾಲಿಕ ಎತ್ತರಕ್ಕೆ !

Photo credit:Reuters
ಹೊಸದಿಲ್ಲಿ,ಎ.1: ವಿಮಾನ ಇಂಧನ (ಎಟಿಎಫ್)ಗಳ ಬೆಲೆಗಳನ್ನು ಶುಕ್ರವಾರ ಶೇ.2ರಷ್ಟು ಹೆಚ್ಚಿಸಲಾಗಿದೆ. ಇದು ಈ ವರ್ಷದಲ್ಲಿ ಸತತ ಏಳನೇ ಏರಿಕೆಯಾಗಿದ್ದು,ಸಾರ್ವಕಾಲಿಕ ಎತ್ತರವನ್ನು ತಲುಪಿವೆ.
ದಿಲ್ಲಿಯಲ್ಲಿ ಎಟಿಎಫ್ ಬೆಲೆಯನ್ನು ಪ್ರತಿ ಸಾವಿರ ಲೀ.ಗೆ 2,258.54 ರೂ. ಅಥವಾ ಶೇ.2ರಷ್ಟು ಹೆಚ್ಚಿಸಲಾಗಿದೆ. ಪ್ರತಿ ಸಾವಿರ ಲೀ.ಎಟಿಎಫ್ ಬೆಲೆ ಈಗ 1,12,924.83 ರೂ. ಆಗಿದೆ ಎಂದು ಸರಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಹೇಳಿಕೆಯಲ್ಲಿ ತಿಳಿಸಿವೆ.ಆದಾಗ್ಯೂ ಶುಕ್ರವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಪರಿಷ್ಕರಿಸಲಾಗಿಲ್ಲ. ಇದು ಕಳೆದ 11 ದಿನಗಳಲ್ಲಿ ಏರಿಕೆಗೆ ಎರಡನೇ ವಿರಾಮವಾಗಿದ್ದು,ಈ ಅವಧಿಯಲ್ಲಿ ಇಂಧನಗಳ ಬೆಲೆಗಳು ಪ್ರತಿ ಲೀ.ಗೆ 6.40 ರೂ.ಏರಿಕೆಯಾಗಿವೆ.ಮಾ.16ರಂದು ಎಟಿಎಫ್ ಬೆಲೆಯನ್ನು ಪ್ರತಿ ಸಾವಿರ ಲೀ.ಗೆ ಶೇ.18.3ರಷ್ಟು (17,135.63 ರೂ.) ಹೆಚ್ಚಿಸಲಾಗಿದ್ದು,ಹಿಂದೆಂದೂ ಅಷ್ಟೊಂದು ತೀವ್ರ ಪ್ರಮಾಣದಲ್ಲಿ ಏರಿಕೆಯಾಗಿರಲಿಲ್ಲ.ಹಿಂದಿನ 15 ದಿನಗಳ ಅವಧಿಯಲ್ಲಿನ ಕಚ್ಚಾ ತೈಲಗಳ ಜಾಗತಿಕ ಬೆಲೆಗಳನ್ನು ಆಧರಿಸಿ ಪ್ರತಿ ತಿಂಗಳು 1 ಮತ್ತು 16ರಂದು ವಿಮಾನ ಇಂಧನ ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ.
ವಿಮಾನಯಾನ ಸಂಸ್ಥೆಯನ್ನು ನಡೆಸಲು ಅಗತ್ಯ ವೆಚ್ಚಗಳಲ್ಲಿ ವಿಮಾನ ಇಂಧನವು ಶೇ.40ರಷ್ಟು ಪಾಲು ಹೊಂದಿದ್ದು,ಈ ವರ್ಷ ಬೆಲೆಗಳು ಹೊಸ ಎತ್ತರಕ್ಕೆ ಏರಿವೆ.2022ರ ಆರಂಭದಿಂದ ಪ್ರತಿ 15 ದಿನಗಳಿಗೆ ಎಟಿಎಫ್ ಬೆಲೆಗಳನ್ನು ಪರಿಷ್ಕರಿಸಲಾಗುತ್ತಿದೆ. ಜ.1ರಿಂದ ಮೊದಲ್ಗೊಂಡು ಒಟ್ಟು ಏಳು ಏರಿಕೆಗಳಲ್ಲಿ ಎಟಿಎಫ್ ಬೆಲೆ ಪ್ರತಿ ಸಾವಿರ ಲೀ.ಗೆ 38,902.92 ರೂ.(ಸುಮಾರು ಶೇ.50)ಗಳಷ್ಟು ಹೆಚ್ಚಾಗಿದೆ.





