ಕರ್ತವ್ಯ ಲೋಪ ಆರೋಪ: ಗಾಜಿಯಾಬಾದ್ ಎಸ್ಎಸ್ಪಿಯನ್ನು ಅಮಾನತುಗೊಳಿಸಿದ ಉತ್ತರ ಪ್ರದೇಶ ಸರ್ಕಾರ

Photo: twitter/vivekkhaiwal
ಲಕ್ನೋ: ಕರ್ತವ್ಯ ಲೋಪ ಮತ್ತು ಅಪರಾಧ ನಿಯಂತ್ರಣದಲ್ಲಿ ವೈಫಲ್ಯವನ್ನು ಆರೋಪಿಸಿ ಘಾಜಿಯಾಬಾದ್ ಹಿರಿಯ ಎಸ್ಪಿ ಪವನ್ ಕುಮಾರ್ ರನ್ನು ಉತ್ತರಪ್ರದೇಶ ಸರ್ಕಾರ ಅಮಾನತುಗೊಳಿಸಿದೆ. ತಕ್ಷಣವೇ ಜಾರಿಗೆ ಬರುವಂತೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ಅವನೀಶ್ ಅವಸ್ತಿ ಅವರು ಆದೇಶ ಹೊರಡಿಸಿದ್ದಾರೆ ಎಂದು thehindu.com ವರದಿ ಮಾಡಿದೆ.
ಜಿಲ್ಲೆಯ ಮನ್ಸುರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕಿನಲ್ಲಿ ಬಂದ ಮೂವರು ದರೋಡೆಕೋರರು ಪೆಟ್ರೋಲ್ ಪಂಪ್ ಸಿಬ್ಬಂದಿಗಳಿಂದ 25 ಲಕ್ಷ ರೂ ಲೂಟಿ ಮಾಡಿದ ಮೂರು ದಿನಗಳ ಬಳಿಕ ಪವನ್ ಕುಮಾರ್ ರನ್ನು ಅಮಾನತು ಮಾಡಲಾಗಿದೆ.
2009 ರ ಐಪಿಎಸ್ ಬ್ಯಾಚಿನ ಅಧಿಕಾರಿಯಾಗಿರುವ ಪವನ್ ಕುಮಾರ್ ರನ್ನು ಕಳೆದ ವರ್ಷ ಆಗಸ್ಟ್ ನಲ್ಲಿ ಗಾಜಿಯಾಬಾದ್ ಗೆ ನಿಯೋಜಿಸಲಾಗಿತ್ತು. ನಿಯೋಜನೆಗೊಂಡ ಆರಂಭದಲ್ಲೇ ವಿವಾದಿತ ಅರ್ಚಕ ಯತಿ ನರಸಿಂಗಾನಂದ್ ಸರಸ್ವತಿಯ ವಿರುದ್ಧ ಗೂಂಡಾ ಕಾಯ್ದೆ ದಾಖಲಿಸಲು ಶಿಫಾರಸ್ಸು ಮಾಡಿ ಸುದ್ದಿಯಾಗಿದ್ದರು.
ಅಲ್ಲದೆ, ಅಪ್ರಾಪ್ತ ಬಾಲಕ ಸೇರಿದಂತೆ ಏಳು ಜನ ಮುಸ್ಲಿಮರಿಗೆ ಗುಂಡಿಕ್ಕಿದ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿದ್ದ ಲೋನಿ ಠಾಣಾಧಿಕಾರಿಯನ್ನು ಗೌಪ್ಯತಾ ಕಾಯ್ದೆ ಉಲ್ಲಂಘಿಸಿದ ಕಾರಣಕ್ಕಾಗಿ ಅಮಾನತುಗೊಳಿಸಿ ಸ್ಥಳೀಯ ಬಿಜೆಪಿ ಶಾಸಕ ಹಾಗೂ ಸಂಘಪರಿವಾರದ ವಿರೋಧವನ್ನು ಪವನ್ ಕುಮಾರ್ ಕಟ್ಟಿದ್ದರು. ಲೋನಿ ಠಾಣಾಧಿಕಾರಿ ರಾಜೇಂದ್ರ ಕುಮಾರ್ ತ್ಯಾಗಿ ಅಮಾನತು ವಿರುದ್ಧ ಲೋನಿ ಶಾಸಕ ಹಾಗೂ ಸಂಘಪರಿವಾರ ಪ್ರತಿಭಟನೆಗಳನ್ನು ನಡೆಸಿದ್ದವು. ಇದು ಬಾರೀ ಸುದ್ದಿಯಾಗಿದ್ದವು.
ಇತ್ತೀಚೆಗೆ, ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಮತಗಳ ಎಣಿಕೆ ದಿನದಂದು (ಮಾರ್ಚ್ 10 ರಂದು) ಬಿಜೆಪಿ ರಾಜ್ಯಸಭಾ ಸದಸ್ಯ, ಗಾಜಿಯಾಬಾದ್ನ ಮೇಯರ್ ಮತ್ತು ನಗರಾಧ್ಯಕ್ಷರನ್ನು ಮತ ಎಣಿಕೆ ಕೇಂದ್ರಕ್ಕೆ ಪ್ರವೇಶಿಸದಂತೆ ಪೊಲೀಸರು ತಡೆದು, ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ದು ನಾಲ್ಕು ಗಂಟೆಗಳ ನಂತರ ಬಿಡುಗಡೆ ಮಾಡಲಾಯಿತು. ಈ ವೇಳೆ ಕರ್ತವ್ಯದಲ್ಲಿದ್ದ ಅಧಿಕಾರಿಗಳನ್ನು ವಜಾಗೊಳಿಸುವಂತೆ ಮುಖಂಡರು ಆಗ್ರಹಿಸಿದಾಗ, ಯಾರನ್ನೂ ಮತಗಟ್ಟೆಯ ಒಳಗೆ ಪ್ರವೇಶಿಸಲು ಬಿಡಬಾರದೆಂದು ತಾನು ಆದೇಶ ಹೊರಡಿಸಿದ್ದೆ ಎಂದು ಹೇಳಿಕೆ ನೀಡಿ ಪವನ್ ಕುಮಾರ್ ಮತ್ತೆ ಸುದ್ದಿಯಾಗಿದ್ದರು.
ಭಾರತೀಯ ಜನತಾ ಪಾರ್ಟಿಯ ನಗರ ಅಧ್ಯಕ್ಷ ಸಂಜೀವ್ ಶರ್ಮಾ ಅವರು ಎಸ್ಎಸ್ಪಿ ಅವರ ವರ್ತನೆಯ ವಿರುದ್ಧ ದೂರು ದಾಖಲಿಸಿರುವುದಾಗಿ ಸ್ವತಃ ಒಪ್ಪಿಕೊಂಡಿದ್ದಾರೆ. ಅಧಿಕಾರಿ ವಿರುದ್ಧ ಸರಣಿ ದೂರುಗಳು ಬಂದಿವೆ ಎಂದು ಬಿಜೆಪಿ ನಗರ ಅಧ್ಯಕ್ಷ ಹೇಳಿದ್ದಾರೆ.
ಏನಾದರೂ, ಗುರುವಾರ ಪವನ್ ಕುಮಾರ್ ಅವರ ಅಮಾನತು ಆದೇಶ ಬಂದಾಗ ಅಧಿಕಾರ ವರ್ಗಕ್ಕೆ ಆಘಾತವಾಗಿದೆ. “ಮಿ. ಪವನ್ ಕುಮಾರ್ ಓರ್ವ ನೇರ ಅಧಿಕಾರಿ, ಯುವ ಅಧಿಕಾರಿಗಳಿಗೆ ಪ್ರೇರಣೆಯಾಗಿದ್ದವರು. ನಾವು ಈ ನಿರ್ಧಾರದಿಂದ ಆಶ್ಚರ್ಯಗೊಂಡಿದ್ದೇವೆ. ದೊಡ್ಡವರ ಅಹಂಗಳಿಗೆ ಅವರು ನೊವುಂಟು ಮಾಡಿದ್ದಾರೆ ಎಂದು ತೋರುತ್ತದೆ” ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ.







