ಸಿದ್ದಗಂಗಾ ನೆಲದ ಸ್ಪರ್ಷದಿಂದ ಮನಸ್ಸಿಗೆ ಶಾಂತಿ, ಬದುಕಿಗೆ ಸ್ಪೂರ್ತಿ: ಸಿಎಂ ಬೊಮ್ಮಾಯಿ

ತುಮಕೂರು: ಸಿದ್ದಗಂಗಾ ಶ್ರೀಗಳು ತಮ್ಮ ಬದುಕನ್ನು ಹಗಲಿರುಳೆನ್ನದೆ ಶ್ರೀಮಠದ ಬೆಳವಣಿಗೆಗೆ ಮುಡಿಪಾಗಿಟ್ಟವರು. ಅವರು ಓಡಾಡಿದ ಈ ನೆಲ ಸ್ಪರ್ಷ ಮಾಡುವುದರಿಂದ ಮನಸ್ಸಿಗೆ ಶಾಂತಿ ಮತ್ತು ಬದುಕಿಗೆ ಸ್ಪೂರ್ತಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಸಿದ್ದಗಂಗಾ ಮಠದಲ್ಲಿ ಡಾ.ಶ್ರೀ ಶಿವಕುಮಾರಸ್ವಾಮೀಜಿಗಳ 115ನೇ ಗುರುವಂಧನಾ ಕಾರ್ಯಕ್ರಮದಲ್ಲಿ ನುಡಿನಮನ ಸಲ್ಲಿಸಿ ಮಾತನಾಡುತ್ತಿದ್ದ ಅವರು, ಅವರ ಶ್ರದ್ದೆ, ಪರಿಶ್ರಮ, ನಿಷ್ಠೆಯನ್ನು ನಾವೆಲ್ಲರೂ ಪಾಲಿಸಬೇಕಿದೆ. ಅವರು ಮೃತರಾಗಿದ್ದರೂ, ಇಷ್ಟೊಂದು ಭಕ್ತರ ಮೂಲಕ ನಮ್ಮ ಹೃದಯದಲ್ಲಿ ನೆಲೆಸಿದ್ದಾರೆ. ಅಕ್ಷರ ದಾಸೋಹದ ಬಿಸಿಯೂಟ ಯೋಜನೆಗೆ ಸಿದ್ದಗಂಗಾ ಶ್ರೀಗಳ ಹೆಸರಿಡುವಂತೆ ಮನವಿ ಬಂದಿದೆ. ಶೀಘ್ರದಲ್ಲಿಯೇ ಬಿಸಿಯೂಟ ಯೋಜನೆಗೆ ಸಿದ್ದಗಂಗಾ ಶ್ರೀಗಳ ಹೆಸರಿಟ್ಟು, ಸರಕಾರಿ ಆದೇಶ ಹೊರಡಿಸಲಾಗುವುದು ಎಂದರು.
ನಾಲ್ಕು ಕೋಟಿ ರೂ. ವೆಚ್ಚದ ಸಿದ್ದಗಂಗಾ ಪಾರ್ಮಸಿ ಕಾಲೇಜಿಗೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಕೇಂದ್ರದ ಮಂತ್ರಿ ಪ್ರಹ್ಲಾದ್ ಜೋಷಿ, ಶೂನ್ಯದಿಂದ ಸೃಷ್ಟಿಸಿದ ಸಿದ್ದಗಂಗಾ ಶ್ರೀಗಳು, ಡಾ.ಶ್ರೀಶಿವಕುಮಾರಸ್ವಾಮೀಜಿಗಳ ಆಶಯದಂತೆ ಸರಕಾರ ನಡೆದುಕೊಳ್ಳುವ ಕೆಲಸ ಮಾಡುತ್ತಿದೆ. ಆಹಾರ ಭದ್ರತೆ ನೀಡಿದೆ. 80 ಕೋಟಿಗೂ ಹೆಚ್ಚು ಜನರಿಗೆ ಆಹಾರ ನೀಡಿದೆ. ಬಡವರಿಗೆ ನೆರವಾಗಿದೆ ಎಂದರು.
ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಜಿ.ಪರಮೇಶ್ವರ್ ಮಾತನಾಡಿ, ಅನೇಕ ಮಹಾಪುರುಷ ಭಾರತ ಕಂಡಿದೆ. 12ನೇ ಶತಮಾನದ ಶರಣರು ಸಮಾನತೆಯ ಪ್ರತಿಪಾದನೆ ಮಾಡಿದವರು. ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವದ ಮಾದರಿ ಪ್ರಪಂಚಕ್ಕೆ ತೋರಿಸಿದ್ದಾರೆ. ಥೇಮ್ಸ್ ನದಿ ದಡದಲ್ಲಿ ಬಸವಣ್ಣನವರ ಪ್ರತಿಮೆ ಸ್ಥಾಪಿಸುವ ಮೂಲಕ ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವಕ್ಕೂ ಮಾದರಿಯಾಗಿದೆ. ಇಡೀ ಭಾರತ ಬಸವಣ್ಣನವರ ಸಮಾನತೆ ಮತ್ತು ಭಾತೃತ್ವದ ಬಸವ ಭಾರತ ಅಗತ್ಯವಿದೆ. ಇದು ಸ್ವಾಮೀಜಿಯವರ ಕಲ್ಪನೆ ಆಗಿತ್ತು. ಗ್ರಾಮೀಣ ಭಾರತ ಶೈಕ್ಷಣಿಕ ಅಭಿವೃದ್ಧಿ, ಅನ್ನ, ಅಕ್ಷರ, ಆಶ್ರಯ ನೀಡಿ ಬಡವರು, ನಿರ್ಗತಿಕರ ಸೇವೆ ಮಾಡಿದವರು. ಶ್ರೀಗಳ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೊಣ್ಣ ಎಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಕನ್ನಡ ನಾಡಿಗೆ ಇಂದು ಸೌಭಾಗ್ಯದ ದಿನ. ಸ್ವಾಮೀಜಿಗಳು ಗಂಗಾನದಿಯಷ್ಟು ಪವಿತ್ರರು. ಸಿದ್ದಗಂಗಾ ಶ್ರೀಗಳು ಭಕ್ತಿ, ವಿರಕ್ತಿಗಳ ಪ್ರತಿರೂಪ. ಜಾತಿ ಭೇದ ವಿಲ್ಲದೆ ಪ್ರತಿನಿತ್ಯ 8-10 ಸಾವಿರ ಮಕ್ಕಳಿಗೆ ಅನ್ನ ಅಕ್ಷರ ನೀಡಿದವರು. ಭಕ್ತರ ಕಾಣಿಕೆಯಿಂದ ಮಠ ನಡೆಸಿದ ಶ್ರೀಗಳು, ತಮ್ಮ ನಡೆಗಳಿಂದ ಶಾಂತಿಯ ಸಂದೇಶ ನೀಡಿದವರು. ಇಂದು ಮಠ ಅದೇ ದಾರಿಯಲ್ಲಿ ಮುನ್ನೆಡೆಯುತ್ತಿದೆ ಎಂಬುದು ಸಂತೋಷದ ವಿಚಾರ ಎಂದರು.
ಸುತೂರು ಜಗದ್ಗುರು ದೇಶಿಕೇಂದ್ರ ಸ್ವಾಮೀಜಿಗಳು ಮಾತನಾಡಿ, ಸಿದ್ದಗಂಗಾ ಶ್ರೀಗಳು ಬದುಕಿದ್ದಾಗಲೇ ದಂತಕಥೆಯಾಗಿದ್ದರು. ಅವರ ಸರಳ ಜೀವನ, ನಡೆನುಡಿಯಲ್ಲಿ ಒಂದೇ ಅಗಿದ್ದವರು. ಇಡೀ ಜೀವನ ಮಠಕ್ಕೆ ಧಾರೆ ಎರೆದಿದ್ದಾರೆ. ಹಳೆ ಬೇರು ಸಂಪ್ರದಾಯವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಲೇ ಅಧುನಿಕತೆಗೆ ತೆರದುಕೊಂಡವರು ಎಂದರು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಸಿದ್ದಗಂಗಾ ಮಠಾಧ್ಯಕ್ಷ ಶ್ರೀಶ್ರೀ ಸಿದ್ದಲಿಂಗ ಮಹಾಸ್ವಾಮಿಜೀ ಮಾತನಾಡಿ, ಇದು ಭಕ್ತಿಯ ಸಂಗಮ. ಶ್ರೀಗಳ ಕಾರ್ಯವನ್ನು ಮರೆಯುವ ಸಾಧ್ಯವೇ ಇಲ್ಲ. ಭಕ್ತರ ಹೃದಯದಲ್ಲಿ ಅವರನ್ನು ಕಾಣುತ್ತಿದ್ದವೆ. ಹಗಲಿರುಳು ತಮ್ಮ ಬದುಕನ್ನು ಶ್ರೀ ಮಠಕ್ಕೆ ಅರ್ಪಿಸಿಕೊಂಡವರು. ಲಕ್ಷಾಂತರ ಮಂದಿಯ ಬದುಕು ಹಸನು ಮಾಡುವ ಮೂಲಕ ಅವರು ಮನೆಯ ಜೋತಿ ಬೆಳಗುವಂತೆ ಮಾಡಿದವರು ಎಂದರು.
ವೇದಿಕೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವಾರು ಕೇಂದ್ರ, ರಾಜ್ಯ ಸಚಿವರು ವೇದಿಕೆಯಲ್ಲಿದ್ದರು.







