ಟಿಪ್ಪು ಸುಲ್ತಾನ್‌ರ ಕೀರ್ತಿಗೆ ಅಪಕೀರ್ತಿ ಬೇಡ: ಮುಸ್ಲಿಂ ಲೀಗ್ ಮನವಿ

ಮಂಗಳೂರು : ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ್ದ ಟಿಪ್ಪು ಸುಲ್ತಾನ್‌ರ ಬಗ್ಗೆ ಪಠ್ಯಪುಸ್ತಕದಲ್ಲಿರುವ ವಿಷಯಕ್ಕೆ ಕತ್ತರಿಪ್ರಯೋಗ ಮಾಡಬಾರದು ಅಥವಾ ರದ್ದುಪಡಿಸಬಾರದು. ಅವರ ಕೀರ್ತಿಗೆ ಅಪಕೀರ್ತಿ ತರುವ ಪ್ರಯತ್ನವನ್ನೂ ಮಾಡಬಾರದು ಎಂದು ದ.ಕ.ಜಿಲ್ಲಾ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್‌ನ ನಿಯೋಗವು ದ.ಕ.ಜಿಲ್ಲಾಧಿಕಾರಿಯನ್ನು ಶುಕ್ರವಾರ ಭೇಟಿ ಮಾಡಿ ಮನವಿ ಸಲ್ಲಿಸಿತು.
ಟಿಪ್ಪು ಸುಲ್ತಾನ್ ಸರ್ವದರ್ಮ ಸಹಿಷ್ಣುತೆಯುಳ್ಳವರಾಗಿದ್ದರು. ದೇವಾಲಯಗಳಿಗೆ ನೀಡಿದ ಹಲವು ಕೊಡುಗೆಗಳ ಪ್ರತೀಕವಾಗಿ ಇಂದಿಗೂ ಕೆಲವು ದೇವಸ್ಥಾನಗಳಲ್ಲಿ ಟಿಪ್ಪುವಿಗೆ ಗೌರವ ನೀಡಲಾಗುತ್ತದೆ. ಟಿಪ್ಪು ಸುಲ್ತಾನ್‌ರ ಕೊಡುಗೆಯನ್ನು ನಾಡಿನ ಗಣ್ಯರು ಕೊಂಡಾಡುತ್ತಿ ದ್ದಾರೆ. ಹಾಗಾಗಿ ಟಿಪ್ಪುವಿಗೆ ಅಪಕೀರ್ತಿಯನ್ನುಂಟು ಮಾಡುವ ಯಾವುದೇ ಪ್ರಯತ್ನವನ್ನು ಮಾಡಬಾರದು ಎಂದು ಆಗ್ರಹಿಸಿದ್ದಾರೆ.
ಮುಸ್ಲಿಂ ಲೀಗ್ ಜಿಲ್ಲಾಧ್ಯಕ್ಷ ಕೆ.ಎಂ. ಫಯಾಝ್, ಉಪಾಧ್ಯಕ್ಷ ಪಿ.ಕೆ. ಸಯ್ಯದ್ ಬಂಗೇರುಕಟ್ಟೆ ಬೆಳ್ತಂಗಡಿ, ಪ್ರಧಾನ ಕಾರ್ಯದರ್ಶಿ ಟಿ. ಯು. ಇಸ್ಮಾಯಿಲ್ ಬಂಟ್ವಾಳ, ಖಜಾಂಚಿ ಪಿ.ಕೆ. ಅಶ್ರಫ್ ಸಾಲ್ಮರ, ಕಾರ್ಯದರ್ಶಿ ರಿಯಾಝ್ ಹರೇಕಳ, ಅಬ್ದುಲ್ ಖಾದರ್ ಜೆಪ್ಪು, ರಶೀದ್ ಹಾಜಿ ಪರ್ಲಡ್ಕ, ಕೆ.ಎಚ್. ಅಬ್ದುಲ್ಲತೀಫ್ ಕರಾಯ, ಮೆಹರಾಝ್ ಪಿ.ಕೆ, ಆಸಿಫ್ ಬಂಗೇರುಕಟ್ಟೆ, ಹಮೀದ್ ಬಂಗೇರುಕಟ್ಟೆ, ಇಕ್ಬಾಲ್ ಪಿ.ಕೆ ನಿಯೋಗದಲ್ಲಿದ್ದರು.