ಚಿಕ್ಕಮಗಳೂರು: ಸಿ.ಟಿ.ರವಿ ಆಯೋಜಿಸಿರುವ ಆರೋಗ್ಯ ಮೇಳಕ್ಕೆ ಜಿಲ್ಲಾಡಳಿತದಿಂದ ಪ್ರಚಾರ; ಆರೋಪ
ಆರೋಗ್ಯ ಮೇಳದ ಕೆಲಸಕ್ಕೆ ನಗರಸಭೆ, ಗ್ರಾಪಂ ಸಿಬ್ಬಂದಿ ಬಳಕೆಗೆ ವಿರೋಧ
ಚಿಕ್ಕಮಗಳೂರು: ಶಾಸಕ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಾಧಾನ ಕಾರ್ಯದರ್ಶಿ ಸಿ.ಟಿ.ರವಿ ನೇತೃತ್ವದಲ್ಲಿ ಎ.10ರಂದು ನಗರದಲ್ಲಿ ಬೃಹತ್ ಉಚಿತ ಆರೋಗ್ಯ ಮೇಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಈ ಆರೋಗ್ಯ ಮೇಳ ಕಾರ್ಯಕ್ರಮ ಸಿ.ಟಿ.ರವಿ ಅವರು ಖಾಸಗಿಯಾಗಿ ನಡೆಸುತ್ತಿದ್ದರೂ ಇದಕ್ಕೆ ಸರಕಾರದ ವಿವಿಧ ಇಲಾಖೆಗಳ ಸಿಬ್ಬಂದಿಯನ್ನು ಕಾರ್ಯಕ್ರಮದ ಪ್ರಚಾರ ಸೇರಿದಂತೆ ಸಾರ್ವಜನಿಕರ ನೋಂದಣಿಯಂತಹ ಕೆಲಸಗಳಿಗೆ ಬಳಸಿಕೊಂಡು ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಉಚಿತ ಆರೋಗ್ಯ ಮೇಳದಂತ ಕಾರ್ಯಕ್ರಮಗಳು ಪ್ರತೀ ವರ್ಷ ನಡೆಯುತ್ತಿವೆ. ಇಂತಹ ಕಾರ್ಯಕ್ರಮಗಳನ್ನು ಖಾಸಗಿ ಆಸ್ಪತ್ರೆಗಳು, ಸಂಘಸಂಸ್ಥೆಗಳು, ದಾನಿಗಳು ಆಯೋಜಿಸುತ್ತಿದ್ದು, ಇಂತಹ ಕಾರ್ಯಕ್ರಮಗಳಿಗೂ ಸರಕಾರ ಅಥವಾ ಜಿಲ್ಲಾಡಳಿತಕ್ಕೆ ಯಾವುದೇ ಸಂಬಂಧ ಇರುವುದಿಲ್ಲ. ಆದರೆ ಶಾಸಕ ಸಿ.ಟಿ.ರವಿ ಕಳೆದ ವರ್ಷ ನಗರದಲ್ಲಿ ಪ್ರಥಮ ಬಾರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಿದ್ದರು. ಈ ಶಿಬಿರ ಪ್ರಯೋಜನವನ್ನು ತಾಲೂಕಿನಲ್ಲಿ ಸಾವಿರಾರು ಜನರು ಪಡೆದುಕೊಂಡಿದ್ದರು. ಈ ಕಾರ್ಯಕ್ರಮದ ಯಶಸ್ವಿನ ಹಿನ್ನೆಲೆಯಲ್ಲಿ ಅವರು ಪ್ರತೀ ವರ್ಷ ನಗರದಲ್ಲಿ ಆರೋಗ್ಯ ಮೇಳ ನಡೆಸುವುದಾಗಿ ಹೇಳಿಕೆಯನ್ನೂ ನೀಡಿದ್ದರು.
ಅದರಂತೆ ಈ ಬಾರಿ ಚಿಕ್ಕಮಗಳೂರು ನಗರದ ಎಐಟಿ ಕಾಲೇಜು ಆವರಣದಲ್ಲಿ ಎ.10ರಂದು ಒಂದು ದಿನದ ಬೃಹತ್ ಉಚಿತ ಆರೋಗ್ಯ ಮೇಳ ಕಾರ್ಯಕ್ರಮ ಆಯೋಜಿಸಿದ್ದು, ಇದನ್ನು ಅವರು ಖಾಸಗಿಯಾಗಿ ಏರ್ಪಡಿಸಿದ್ದಾರೆ. ಆದರೆ ಈ ಕಾರ್ಯಕ್ರಮದ ಪ್ರಚಾರ ಸೇರಿದಂತೆ ಶಿಬಿರದಲ್ಲಿ ಭಾಗವಹಿಸುವ ಸಾರ್ವಜನಿಕರ ನೋಂದಣಿ ಮತ್ತಿತರ ಕೆಲಸ ಕಾರ್ಯಗಳನ್ನು ಸರಕಾರದ ವಿವಿಧ ಇಲಾಖೆಗಳ ಮೂಲಕ ಮಾಡಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.
ಎರಡು ದಿನಗಳ ಹಿಂದೆ ಜಿಪಂ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಪತ್ರಿಕಾಗೋಷ್ಠಿ ನಡೆಸಿ ಆರೋಗ್ಯ ಮೇಳದ ರೂಪುರೇಷೆ, ನೋಂದಣಿ ಬಗ್ಗೆ ಮಾಹಿತಿ ನೀಡಿದ್ದು, ಆರೋಗ್ಯ ಮೇಳ ಕಾರ್ಯಕ್ರಮ ಸರಕಾರದ್ದಲ್ಲ, ಬದಲಿಗೆ ಶಾಸಕ ಸಿ.ಟಿ.ರವಿ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮವಾಗಿದೆ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಜಿಲ್ಲಾಡಳಿತ ಇದಕ್ಕೆ ಸಹಕಾರ ನೀಡುತ್ತಿದೆ ಎಂದು ತಿಳಿಸಿದ್ದರು. ಅಲ್ಲದೇ ಈ ಆರೋಗ್ಯ ಮೇಳ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾರ್ವಜನಿಕರ ನೋಂದಣಿಗೆ ಗ್ರಾಪಂ ಪಿಡಿಒಗಳಿಗೆ ಹಾಗೂ ನಗರಸಭೆಯ ಅಧಿಕಾರಿ, ಸಿಬ್ಬಂದಿಗೆ ಸೂಚನೆ ನೀಡಿರುವುದಾಗಿಯೂ ತಿಳಿಸಿದ್ದರು.
ಸಿ.ಟಿ.ರವಿ ಅವರು ತಮ್ಮ ಕ್ಷೇತ್ರದ ಜನರಿಗಾಗಿ ಖಾಸಗಿಯಾಗಿ ಆಯೋಜಿಸಿರುವ ಉಚಿತ ಆರೋಗ್ಯ ಮೇಳ ಕಾರ್ಯಕ್ರಮವನ್ನು ಜಿಲ್ಲಾಡಳಿತ ಸರಕಾರಿ ಕಾರ್ಯಕ್ರಮ ಎಂಬಂತೆ ಬಿಂಬಿಸುತ್ತಿರುವುದಲ್ಲದೇ ಸರಕಾರಿ ಇಲಾಖೆಯ ಸಿಬ್ಬಂದಿಗೆ ಸಿ.ಟಿ.ರವಿ ಅವರ ಖಾಸಗಿ ಕಾರ್ಯಕ್ರಮದ ಜವಾಬ್ದಾರಿ ನೀಡಿರುವುದು ಸರಿಯಲ್ಲ. ಇದರಿಂದ ಸರಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ತೊಂದರೆಯಾಗಲಿದೆ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.
ಸಿ.ಟಿ.ರವಿ ಆರೋಗ್ಯ ಮೇಳ ಆಯೋಜಿಸುತ್ತಿರುವುದಕ್ಕೆ ನಮ್ಮ ಅಭ್ಯಂತರ ಏನೂ ಇಲ್ಲ. ಇದೊಂದು ಒಳ್ಳೆಯ ಕಾರ್ಯಕ್ರಮ, ಇಂತಹ ಕಾರ್ಯಕ್ರಮವನ್ನು ಅವರು ಪ್ರತಿದಿನ ನಡೆಸಿದರೂ ನಮ್ಮ ವಿರೋಧವಿಲ್ಲ. ಆದರೆ ಶಾಸಕ ಸಿ.ಟಿ.ರವಿ ಅವರು ಈ ಆರೋಗ್ಯ ಮೇಳವನ್ನು ಮುಂದಿನ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಏರ್ಪಡಿಸಿದ್ದಾರೆಂಬುದು ಎಳೆಯ ಮಕ್ಕಳಿಗೂ ತಿಳಿದಿದೆ. ಇಂತಹ ಚುನಾವಣೆ ಹಿನ್ನೆಲೆಯ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಸುದ್ದಿಗೋಷ್ಠಿ ನಡೆಸಿ ಪ್ರಚಾರ ನೀಡುತ್ತಿರುವುದಲ್ಲದೇ ನಗರಸಭೆ, ಗ್ರಾಪಂ ಅಧಿಕಾರಿ ಸಿಬ್ಬಂದಿಯನ್ನು ಶಾಸಕರು ಖಾಸಗಿಯಾಗಿ ಆಯೋಜಿಸಿರುವ ಕಾರ್ಯಕ್ರಮದ ಕೆಲಸಕ್ಕೆ ನೇಮಿಸಿರುವುದಕ್ಕೆ ನಮ್ಮ ವಿರೋಧವಿದೆ. ಜಿಲ್ಲಾಡಳಿತ ಸಿ.ಟಿ.ರವಿ ಅವರ ಏಜೆಂಟ್‍ನಂತೆ ಕಾರ್ಯನಿರ್ವಹಿಸುತ್ತಿದೆ. ಇದು ಉತ್ತಮ ಬೆಳವಣಿಗೆಯಲ್ಲ.
- ದಂಟರಮಕ್ಕಿ ಶ್ರೀನಿವಾಸ್, ದಸಂಸ ಸಂಚಾಲಕ







