ಅಮಾನತ್ ಬ್ಯಾಂಕ್ ವಂಚನೆ ಪ್ರಕರಣ: ಈಡಿಯಿಂದ 243.93 ಕೋಟಿ ರೂ.ಮೌಲ್ಯದ ಆಸ್ತಿ ಜಪ್ತಿ
ಬೆಂಗಳೂರು, ಎ.1: ಅಮಾನತ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ 243.93 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ(ಈಡಿ) ಮುಟ್ಟುಗೋಲು ಹಾಕಿಕೊಂಡಿದೆ.
ಬೆಂಗಳೂರಿನ ಎನ್.ಆರ್.ರಸ್ತೆಯಲ್ಲಿದ್ದ ಅಮಾನತ್ ಕೋ-ಆಪರೇಟಿವ್ ಬ್ಯಾಂಕ್ ಲಿ. ಆರೋಪಿಗಳು 79.30 ಕೋಟಿ ರೂ.ನಷ್ಟು ಅವ್ಯವಹಾರ ನಡೆಸಿದ್ದರು. ಈ ಹಿನ್ನೆಲೆಯಲ್ಲಿ 2006ರಲ್ಲಿ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ನಂತರ ಸಿಐಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು.
ಈ ವೇಳೆ ಅಕ್ರಮ ಹಣ ವರ್ಗಾವಣೆ ನಡೆದಿದೆ ಎಂಬ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಈಡಿ ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‍ಎ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು.
ಈ ವೇಳೆ ಬ್ಯಾಂಕ್‍ನ ಮಾಜಿ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ಅಸಾದುಲ್ಲಾ ಮತ್ತು ಶಾಖಾ ವ್ಯವಸ್ಥಾಪಕ ಎ.ಶಫೀವುಲ್ಲಾ ಮತ್ತು ಅಕೌಂಟೆಂಟ್ ಕೆ.ಹಿದಾಯತ್ ಉಲ್ಲಾ ಮೂವರು ಸೇರಿ ಬ್ಯಾಂಕ್‍ಗೆ ಸೇರಿದ 68.43 ಕೋಟಿ ರೂ.ಅನ್ನು ದುರುಪಯೋಗಪಡಿಸಿಕೊಂಡು ತಮ್ಮ ಸಂಬಂಧಿಕರು ಮತ್ತು ಅವರ ಸಂಸ್ಥೆಗಳ ಹೆಸರಿನಲ್ಲಿ ಓವರ್ ಡ್ರಾಫ್ಟ್ ತೆರೆದು ವಂಚಿಸಿದ್ದರು ಎಂಬುದು ಗೊತ್ತಾಗಿತ್ತು.
ಹೆಚ್ಚಿನ ತನಿಖೆ ನಡೆಸಿದಾಗ ಆರೋಪಿಗಳು 1997ರಿಂದ 2002ರ ಅವಧಿಯಲ್ಲಿ ಇಬ್ಬರು ಆರೋಪಿಗಳು, ತಮ್ಮ ಸಂಬಂಧಿಕರು, ಅವರ ಸಂಸ್ಥೆಗಳ ಹೆಸರಿನಲ್ಲಿ 50 ಓವರ್ ಡ್ರಾಫ್ಟ್ ಖಾತೆಗಳು ತೆರೆದಿದ್ದರು. ಅಲ್ಲದೆ, ಎಂಟು ರಿಯಲ್ ಎಸ್ಟೇಟ್ ಖಾತೆಗಳು ಮತ್ತು 165 ಗೃಹ ಸಾಲ ಖಾತೆಗಳನ್ನು ತೆರೆದಿದ್ದರು. ಈ ಮೂಲಕ 50 ಒಡಿ ಖಾತೆಗಳ ಪೈಕಿ 40 ಖಾತೆಗಳನ್ನು ಮುಚ್ಚುವಲ್ಲಿ ಯಶಸ್ವಿಯಾಗಿದ್ದರು. ಅಲ್ಲದೆ, ಇತ್ತೀಚಿನ ಬ್ಯಾಂಕ್ ಸಲ್ಲಿಸಿದ ಮಾಹಿತಿಗಳ ಪ್ರಕಾರ, ಒಟ್ಟು ಸಾಲ ಮತ್ತು ಬಡ್ಡಿ ಸೇರಿ 79.30 ಕೋಟಿ ರೂ.ಅನ್ನು ಆರೋಪಿಗಳು ಅಕ್ರಮವಾಗಿ ದುರುಪಯೋಗಪಡಿಸಿಕೊಂಡಿದ್ದಾರೆ.
ಈ ಹಣದಿಂದ ಬೆಂಗಳೂರಿನ ಎನ್.ಎಸ್.ಪಾಳ್ಯದಲ್ಲಿ 243.93 ಕೋಟಿ ರೂ.ಮೌಲ್ಯದ ಎಂಟು ಎಕರೆ ಜಮೀನು ಹಾಗೂ ಇತರೆ ಆಸ್ತಿ ಖರೀದಿಸಿದ್ದರು. ಈ ಆಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂದು ಈಡಿ ತಿಳಿಸಿದೆ.







