ಗೋಡಂಬಿ ಉತ್ಪಾದನೆಯಲ್ಲಿ ಭಾರತ ಸ್ವಾವಲಂಬಿಯಾಗುವುದು ಅಗತ್ಯ: ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್

ಪುತ್ತೂರು: ಆತ್ಮ ನಿರ್ಭರ ಭಾರತವಾಗುವತ್ತ ಸಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ನಮ್ಮ ದೇಶವು ಕಚ್ಚಾ ಗೋಡಂಬಿ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಬೇಕು ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದರು.
ಅವರು ಶುಕ್ರವಾರ ಪುತ್ತೂರು ಗೇರು ಸಂಶೋಧನಾ ನಿರ್ದೇಶನಾಲಯದ ರಜತ ಮಹೋತ್ಸವ ಭವನವನ್ನು ವರ್ಚುವಲ್ ಮೋಡ್ ಉದ್ಘಾಟಿಸಿ ಮಾತನಾಡಿದರು.
ದೇಶವು 7.5 ಲಕ್ಷ ಟನ್ ಕಚ್ಚಾ ಗೋಡಂಬಿ ಉತ್ಪಾದಿಸುತ್ತಿದ್ದರೂ, ಸಂಸ್ಕರಣಾ ಕೈಗಾರಿಕೆಗಳ ಅಗತ್ಯಗಳನ್ನು ಪೂರೈಸಲು ಆಮದು ಮಾಡಿಕೊಳ್ಳುವ ಬೀಜಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ. ಈ ಕೊರತೆಯನ್ನು ತುಂಬಲು ತಂತ್ರಜ್ಞಾನಗಳನ್ನು ರೂಪಿಸಬೇಕಾದ ತುರ್ತು ಅಗತ್ಯವಿದೆ. ಕರಾವಳಿ ಭಾಗದಲ್ಲಿ ಗೋಡಂಬಿ ಬೆಳೆಯುವ ಪ್ರದೇಶವನ್ನು ವಿಸ್ತರಿಸಲು ತೀವ್ರ ಪ್ರಯತ್ನಗಳ ಅಗತ್ಯವಿದೆ ಹಾಗೂ ಗೇರು ಬೆಳೆಯ ಪ್ರದೇಶ ಎಂದಿಗೂ ಕಡಿಮೆಯಾಗಂತೆ ನೋಡಿಕೊಳ್ಳಬೇಕು. ಘನಸಾಂದ್ರ ಪದ್ದತಿಯ ಕೃಷಿ, ಹೆಚ್ಚಿನ ಇಳುವರಿ ನೀಡುವ ತಳಿಗಳು ಮತ್ತು ಸುಧಾರಿತ ಕೃಷಿ ಪದ್ಧತಿಗಳಂತಹ ತಂತ್ರಜ್ಞಾನಗಳನ್ನು ನೀಡಲು ವಿಜ್ಞಾನಿಗಳು ಸಂಶೋಧನೆ ಮಾಡಬೇಕು ಎಂದರು.
ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯ ರಾಜ್ಯಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ ಗೇರುಬೆಳೆಯ ಪ್ರದೇಶ ವಿಸ್ತರಣೆಗೆ ವ್ಯಾಪಕ ಅವಕಾಶವಿದೆ, ಪ್ರಧಾನಿ ಮೋದಿ ಅವರ ಲ್ಯಾಬ್ ಟು ಲ್ಯಾಂಡ್ ಪರಿಕಲ್ಪನೆಯ ಅಡಿಯಲ್ಲಿ ರೈತರ ತೋಟಗಳಿಗೆ ಹೊಸ ತಂತ್ರಜ್ಞಾನಗಳನ್ನು ಪ್ರಸಾರ ಮಾಡಲು ವಿಜ್ಞಾನಿಗಳು ಪ್ರಯತ್ನಿಸಬೇಕು. ಸರ್ಕಾರದಿಂದ ಸುಮಾರು 10 ಸಾವಿರ ಎಫ್‍ಪಿಒಗಳ(ರೈತ ಉತ್ಪಾದಕ ಸಂಸ್ಥೆ)ಗಳ ಸ್ಥಾಪನೆಗೆ ಉತ್ತೇಜನ ನೀಡಲಾಗುತ್ತಿದ್ದು, ಗೋಡಂಬಿ ರೈತರೂ ಎಫ್‍ಪಿಒಗಳ ಸ್ಥಾಪನೆಗೆ ಅರ್ಹರಾಗಿರುತ್ತಾರೆ ಎಂದರು.
ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ಐಸಿಎಆರ್) ಮಹಾ ನಿರ್ದೇಶಕ ಡಾ.ತ್ರಿಲೋಚನ್ ಮಹಾಪಾತ್ರ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯ ರಾಜ್ಯಸಚಿವೆ ಶೋಭಾ ಕರಂದ್ಲಾಜೆ ಮತ್ತು ಕೈಲಾಶ್ ಚೌಧರಿ, ಉಪಮಹಾ ನಿರ್ದೇಶಕ ಡಾ.ಎ.ಕೆ.ಸಿಂಗ್ ಉಪಸ್ಥಿತರಿದ್ದರು. ಪುತ್ತೂರಿನ ಡಿಸಿಆರ್‍ನ ಪ್ರಭಾರ ನಿರ್ದೇಶಕ ಡಾ.ಟಿ.ಎನ್ ರವಿಪ್ರಸಾದ್ ವಂದಿಸಿದರು.







