ರಾಷ್ಟ್ರೀಯ ಆರೋಗ್ಯ ಅಭಿಯಾನದ ಗುತ್ತಿಗೆ ನೌಕರರಿಂದ ಎ.1ರಂದು ಶೋಷಣೆಯ ದಿನ ಆಚರಣೆ
ಬೆಂಗಳೂರು, ಎ.1: ಆರೋಗ್ಯ ಇಲಾಖೆಯ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಆಧಾರದ ನೌಕರರಿಗೆ ನೀಡುವ ಎಪ್ರಿಲ್ 1 ವಿರಾಮದ ದಿನವನ್ನು ರದ್ದು ಪಡಿಸುವಂತೆ ಮನವಿ ಮಾಡಿದ್ದರೂ ಈಡೇರದ ಹಿನ್ನಲೆಯಲ್ಲಿ ಶುಕ್ರವಾರ ಎಪ್ರಿಲ್ ಒಂದನ್ನು ಶೋಷಣೆಯ ದಿನವನ್ನಾಗಿ ರಾಜ್ಯಾದ್ಯಂತ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರು ಆಚರಿಸಿದರು.
ಈ ಕುರಿತಂತೆ ಹೇಳಿಕೆ ನೀಡಿರುವ ಸಂಘದ ರಾಜ್ಯಾಧ್ಯಕ್ಷ ವಿಶ್ವಾರಾಧ್ಯ ಹೆಚ್.ವೈ. ಅವರು, ಆರೋಗ್ಯ ಇಲಾಖೆ ಗುತ್ತಿಗೆ, ಹೊರಗುತ್ತಿಗೆ ನೌಕರರ ಬೇಡಿಕೆಗಳ ಈಡೇರಿಕೆ ಬಗ್ಗೆ ಸದನದಲ್ಲಿ ಸಚಿವರು ಭರವಸೆ ನೀಡಿದಂತೆ ಕೂಡಲೇ ನೌಕರರ ಸೇವಾ ಭದ್ರತೆ ಹಾಗೂ ವೇತನ ಪರಿಷ್ಕರಣೆ ಕುರಿತ ಶ್ರೀನಿವಾಸಚಾರಿ ವರದಿ ಮತ್ತು ವಿವಿಧ ಬೇಡಿಕೆಗಳನ್ನು ಈಡೇರಿಸಿ ಆದೇಶಗಳನ್ನು ಹೊರಡಿಸಬೇಕಿತ್ತು, ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದಿರುವುದು ವಿಷಾದನೀಯ ಎಂದು ಹೇಳಿದರು.
ಒಂದು ದಿನದ ವಿರಾಮಕ್ಕೆ ಅಂತ್ಯ ಹಾಡಲು ಆಗ್ರಹ: ಪ್ರತಿ ವರ್ಷ ಆರೋಗ್ಯ ಇಲಾಖೆಯ ಗುತ್ತಿಗೆ ನೌಕರರಿಗೆ ಎಪ್ರಿಲ್ ಒಂದರಂದು ಒಂದು ದಿನ ವಿರಾಮ ನೀಡುವ ಅನಿಷ್ಟ ಪದ್ಧತಿ ಜಾರಿಯಲ್ಲಿದ್ದು ಇದನ್ನು ರದ್ದು ಪಡಿಸಬೇಕು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಸ್ವಾಮಿ ಆಗ್ರಹಿಸಿದರು
ರಾಜ್ಯದ ವಿವಿಧೆಡೆ ಗುತ್ತಿಗೆ, ಹೊರಗುತ್ತಿಗೆ ನೌಕರರು ಎಪ್ರಿಲ್ ಒಂದನ್ನು ಶೋಷಣೆಯ ದಿನವನ್ನಾಗಿ ಆಚರಿಸಿದರು.





