ಹಾವೇರಿಯ ನೆಲವಾಗಿಲು ಗ್ರಾಮ ಸ್ಥಳಾಂತರ: ಸೂಕ್ತ ಕ್ರಮಕ್ಕೆ ಹೈಕೋರ್ಟ್ ಆದೇಶ

ಬೆಂಗಳೂರು: ಹಾವೇರಿ ಜಿಲ್ಲೆಯ ನೆಲವಾಗಿಲು ಗ್ರಾಮವನ್ನು ಪಕ್ಕದ ಕೊಡಿಯಾಲ ಗ್ರಾಮಕ್ಕೆ ಸ್ಥಳಾಂತರಿಸುವ ವಿಚಾರವಾಗಿ ರಾಜ್ಯ ಸರಕಾರ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್ ನಿರ್ದೇಶಿಸಿದೆ.
ನೆಲವಾಗಿಲು ಗ್ರಾಮವನ್ನು ಕೊಡಿಯಾಲ ಗ್ರಾಮಕ್ಕೆ ಸ್ಥಳಾಂತರಿಸಲು ಕೋರಿ ರೇಣುಕಾ ಸೇರಿದಂತೆ ಗ್ರಾಮದ 35 ನಿವಾಸಿಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ ಈ ನಿರ್ದೇಶನ ನೀಡಿ ಅರ್ಜಿ ಇತ್ಯರ್ಥಪಡಿಸಿದೆ.
ಈ ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ ಪೀಠ, ಅರ್ಜಿದಾರರು ತಮ್ಮ ಕುಂದುಕೊರತೆ ಕುರಿತು ಸರಕಾರಕ್ಕೆ ಹೊಸದಾಗಿ ಮನವಿ ಪತ್ರ ಸಲ್ಲಿಸಬೇಕು. ಮನವಿ ಪತ್ರ ಸಲ್ಲಿಸಿದ ದಿನದಿಂದ ಮುಂದಿನ ಮೂರು ತಿಂಗಳ ಒಳಗೆ ಸರಕಾರವು ಅರ್ಜಿದಾರರ ಕುಂದುಕೊರತೆ ಆಲಿಸಿ ಕಾನೂನು ಪ್ರಕಾರ ಸೂಕ್ತ ಆದೇಶ ಹೊರಡಿಸಬೇಕು ಎಂದು ನಿರ್ದೇಶಿಸಿ ಅರ್ಜಿ ಇತ್ಯರ್ಥಪಡಿಸಿತು.
ಪಾಲಿ ಫೈಬರ್ ಕಂಪೆನಿಯಿಂದ ಪರಿಸರ ಮಾಲಿನ್ಯ ಉಂಟಾದ ಹಿನ್ನೆಲೆಯಲ್ಲಿ ನೆಲವಾಗಿಲು ಗ್ರಾಮಸ್ಥರಿಗೆ ಕೊಡಿಯಾಲ ಗ್ರಾಮದಲ್ಲಿ ಪುನರ್ವಸತಿ ಕಲ್ಪಿಸಲು ಸರಕಾರ ಯೋಜನೆ ರೂಪಿಸಿತ್ತು. ಅದರಂತೆ ಪಕ್ಕದ ಗ್ರಾಮ ಕೊಡಿಯಾಲದಲ್ಲಿ ಒಟ್ಟು 432 ಮನೆಗಳನ್ನು ನಿರ್ಮಿಸಲು 1993ರಲ್ಲಿ ಸರಕಾರ ಆದೇಶ ಹೊರಡಿಸಿತ್ತು. ಗ್ರಾಮ ಸ್ಥಳಾಂತರಕ್ಕೆ ಕಂಪೆನಿಯೂ ಹಣ ನೀಡಿತ್ತು. ಆದರೆ, ಸರಕಾರ ಗ್ರಾಮ ಸ್ಥಳಾಂತರಿಸಲು ಸೂಕ್ತ ಕ್ರಮ ಕೈಗೊಳ್ಳದ ಕಾರಣ ಗ್ರಾಮಸ್ಥರು ಹೈಕೋರ್ಟ್ ಮೆಟ್ಟಿಲೇರಿದ್ದರು.







