ನಾಝಿ ಆಡಳಿತದ ಮಾದರಿ ರಾಜ್ಯದಲ್ಲಿ ಪ್ರಯೋಗ: ದಿನೇಶ್ ಗುಂಡೂರಾವ್

ಬೆಂಗಳೂರು: ‘ಹಿಟ್ಲರ್ ನ ನಾಝಿ ಆಡಳಿತದ ಸಿದ್ಧ ಮಾದರಿಯೊಂದು ರಾಜ್ಯದಲ್ಲಿ ಪ್ರಯೋಗವಾಗುತ್ತಿದೆ. ‘ಆಂಟಿ ಸೆಮಿಟಿಸಂ' ಹೆಸರಲ್ಲಿ ಹಿಟ್ಲರ್, ಜರ್ಮನರಲ್ಲಿ ಜನಾಂಗೀಯ ಶ್ರೇಷ್ಠತೆಯ ವ್ಯಾದಿ ತುಂಬಿ ಲಕ್ಷಾಂತರ ಯಹೂದಿಗಳ ಪ್ರಾಣ ತೆಗೆದಿದ್ದ. ಜನರಲ್ಲಿ ದ್ವೇಷದ ವ್ಯಸನ ತುಂಬುವುದು ಹಿಟ್ಲರ್ ನ ತಂತ್ರವಾಗಿತ್ತು. ಈಗ ಬಿಜೆಪಿ ಸರಕಾರವೂ ಹಿಟ್ಲರ್ ತಂತ್ರ ಅನುಸರಿಸುತ್ತಿದೆ' ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.
ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಚಾಣಾಕ್ಯನ ಪ್ರಕಾರ ‘ಅನ್ನ-ನೀರು ಸಮೃದ್ಧವಾಗಿ ಸಿಗುವ ರಾಜ್ಯದಲ್ಲಿ ಪ್ರಜಾಕ್ಷೋಭೆ ಎಂದಿಗೂ ಉಂಟಾಗುವುದಿಲ್ಲ'. ಆದರೆ ಬೊಮ್ಮಾಯಿ ನೇತೃತ್ವದ ಸರಕಾರಕ್ಕೆ ರಾಜ್ಯದ ಜನ ನೆಮ್ಮದಿಯಾಗಿ ಬದುಕುವುದು ಇಷ್ಟವಿಲ್ಲ. ಎಡಬಿಡಂಗಿ ಆಡಳಿತದಿಂದ ರಾಜ್ಯವನ್ನು ಈಗಾಗಲೇ ದಿವಾಳಿ ಅಂಚಿಗೆ ತಂದಿರುವ ಈ ಸರಕಾರ ಜನರ ಮಧ್ಯೆ ಕೊಳ್ಳಿ ಇಟ್ಟು ಪ್ರಜಾಕ್ಷೋಭೆ ಉಂಟುಮಾಡುತ್ತಿದೆ' ಎಂದು ದೂರಿದ್ದಾರೆ.
‘ಜನತಾ ಪರಿವಾರದಿಂದ ಬಂದಿರುವ ಸಿಎಂ ಬೊಮ್ಮಾಯಿಯವರಿಗೆ, ಆರೆಸೆಸ್ಸ್‍ನಿಂದ ಬೆನ್ನು ತಟ್ಟಿಸಿಕೊಳ್ಳುವ ಕೆಟ್ಟ ಚಟವಿದೆ. ಹಾಗಾಗಿ ಆರೆಸೆಸ್ಸ್ ಕೃಪಾಕಟಾಕ್ಷಕ್ಕಾಗಿ ಧರ್ಮದ ಹುಳಿಹಿಂಡಿ ಸಾಮರಸ್ಯದಿಂದಿದ್ದ ರಾಜ್ಯವನ್ನೇ ಛಿದ್ರ ಮಾಡುತ್ತಿದ್ದಾರೆ. ಬೊಮ್ಮಾಯಿಯವರೆ, ‘ಕ್ರಿಯೆಗೆ ಪ್ರತಿಕ್ರಿಯೆ' ಎಂದು ಹಿಂದೆ ನೀವೊಮ್ಮೆ ಹೇಳಿದ ಮಾತು ನಿಮಗೇ ಉಲ್ಟಾ ಹೊಡೆಯಲಿದೆ' ಎಂದು ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.
‘ನಿನ್ನೆಯಷ್ಟೇ ಸರಕಾರಿ ಪ್ರಾಯೋಜಿತ ಕೋಮುದ್ವೇಷದ ಬಗ್ಗೆ ಬಯೋಟೆಕ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಕಳವಳ ವ್ಯಕ್ತಪಡಿಸಿದ್ದಾರೆ. ಪ್ರಜಾಪ್ರಭುತ್ವದ ಅಡಿಯಲ್ಲಿ ಅಧಿಕಾರಕ್ಕೆ ಬಂದ ಸರಕಾರ ಧರ್ಮದ ಆಧಾರದಲ್ಲಿ ಸಮಾಜದಲ್ಲಿ ಬೆಂಕಿ ಇಡಬಾರದು. ಬೊಮ್ಮಾಯಿಯವರೆ, ನಮ್ಮ ರಾಜ್ಯ ಇನ್ನೊಂದು ಉತ್ತರ ಪ್ರದೇಶ ಆಗುವುದು ಬೇಡ. ನಮಗೆ ನಾವೇ ಮಾದರಿ, ಉತ್ತರ ಪ್ರದೇಶವಲ್ಲ' ಎಂದು ಅವರು ಸಲಹೆ ನೀಡಿದ್ದಾರೆ.
‘ಹೂಡಿಕೆದಾರರ ಸ್ವರ್ಗ ಎಂಬ ಖ್ಯಾತಿಗೆ ಪಾತ್ರವಾಗಿದ್ದ ಕರ್ನಾಟಕ ಕೋಮುದಳ್ಳುರಿಯಿಂದ ಅಂತರ್‍ರಾಷ್ಟ್ರೀಯ ಮಟ್ಟದಲ್ಲಿ ತಲೆ ತಗ್ಗಿಸುವಂತಾಗಿದೆ. ಬೆಂಗಳೂರು ಸಿಲಿಕಾನ್ ಸಿಟಿ, ಐಟಿ ಹಬ್ ಎಂಬ ಹೆಗ್ಗಳಿಕೆ ಹೊಂದಿದೆ. ಧರ್ಮದ್ವೇಷ ಹೀಗೆ ಬಿತ್ತುತ್ತಿದ್ದರೆ ರಾಜ್ಯದಲ್ಲಿ ಹೂಡಿಕೆ ಮಾಡಲು ಯಾರು ಮುಂದೆ ಬರುತ್ತಾರೆ ಬೊಮ್ಮಾಯಿಯವರೆ? ನಷ್ಟ ಯಾರಿಗೆ ಹೇಳಿ?' ಎಂದು ಅವರು ಪ್ರಶ್ನಿಸಿದ್ದಾರೆ.
‘ರಾಷ್ಟ್ರಕವಿ ಕುವೆಂಪು ಕರ್ನಾಟಕವನ್ನು ಸರ್ವಜನಾಂಗದ ಶಾಂತಿಯ ತೋಟ ಎಂದು ಬಣ್ಣಿಸಿದ್ದಾರೆ. ಬಿಜೆಪಿ ನಾಯಕರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಧರ್ಮದ್ವೇಷ ಒಂದು ರೀತಿ ಭಸ್ಮಾಸುರ ಇದ್ದಂತೆ. ಮುಂದೊಂದು ದಿನ ಬಿಜೆಪಿಯವರೇ ಹುಟ್ಟಿಸಿದ ಧರ್ಮದ್ವೇಷದ ಭಸ್ಮಾಸುರ, ಅವರನ್ನೇ ಆಹುತಿ ತೆಗೆದುಕೊಂಡರೆ ಆಶ್ಚರ್ಯವಿಲ್ಲ' ಎಂದು ದಿನೇಶ್ ಗುಂಡೂರಾವ್ ಎಚ್ಚರಿಕೆ ನೀಡಿದ್ದಾರೆ.







