ಕಾಂಗ್ರೆಸ್ ಪಕ್ಷ ಮಾತ್ರ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಲು ಸಾಧ್ಯ: ಡಿ.ಕೆ.ಶಿವಕುಮಾರ್

ಬೆಂಗಳೂರು, ಎ. 1: ‘ಮೊದಲು ನಮ್ಮ ಪಕ್ಷ ಅಧಿಕಾರಕ್ಕೆ ಬರಬೇಕು. ನಾನು ಅಧಿಕಾರ ಸ್ವೀಕಾರ ಸಮಯದಲ್ಲಿ ಒಂದು ಮಾತು ಹೇಳಿದ್ದೆ. ಅದೇನೆಂದರೆ ಒಟ್ಟಾಗಿ ಸೇರುವುದು ಆರಂಭ, ಒಟ್ಟಾಗಿ ಆಲೋಚಿಸುವುದು ಪ್ರಗತಿ, ಒಟ್ಟಾಗಿ ಕೆಲಸ ಮಾಡುವುದು ಯಶಸ್ಸು. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆಂದು ಮಾತು ನೀಡುತ್ತೇನೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನುಡಿದರು.
ಶುಕ್ರವಾರ ಇಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ಏರ್ಪಡಿಸಿದ್ದ ಪಕ್ಷದ ಮುಖಂಡರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘12 ವರ್ಷಗಳ ಬಳಿಕ ಪಕ್ಷದ ಸದಸ್ಯತ್ವ ನೋಂದಣಿ ಅವಕಾಶ ನೀಡಲಾಗಿದೆ. ಈ ಸದಸ್ಯತ್ವದ ಮಹತ್ವ ಏನು ಎಂಬುದು ನನಗೆ ಗೊತ್ತಿದೆ. ಪ್ರತಿ ಬೂತ್‍ನಲ್ಲಿ ಡಿಜಿಟಲ್ ಯೂತ್ ಇರಬೇಕು, ಎಲ್ಲ ಬೂತ್‍ನಲ್ಲಿ ವಾಟ್ಸಪ್ ಗ್ರೂಪ್‍ಗಳಿರಬೇಕು. ಇದನ್ನು ನನ್ನ ಕ್ಷೇತ್ರದಲ್ಲಿ ಮಾಡಲಾಗಿದೆ. ನಾವು ಎಲ್ಲ ವರ್ಗದ ಜತೆ ಸಂಪರ್ಕ ಬೆಳೆಸಬೇಕು, ಸಾಮಾಜಿಕ ನ್ಯಾಯವನ್ನು ನೀಡಬೇಕು. ಈ ದೇಶವನ್ನು ಕಾಂಗ್ರೆಸ್ ಪಕ್ಷದಿಂದ ಮಾತ್ರ ಒಗ್ಗೂಡಿಸಲು ಸಾಧ್ಯ. ಕಾಂಗ್ರೆಸ್ ಪಕ್ಷ ಮಾತ್ರ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಲು ಸಾಧ್ಯ' ಎಂದು ಅವರು ತಿಳಿಸಿದರು.
‘70 ವರ್ಷಗಳಿಂದ ಕಾಂಗ್ರೆಸ್ ಪಕ್ಷ ಈ ದೇಶವನ್ನು ಕಟ್ಟಿ ಬೆಳೆಸಿದೆ. ಎರಡು ವರ್ಷಗಳಿಂದ ನೀವೆಲ್ಲ ಸಾಕಷ್ಟು ಪರಿಶ್ರಮ ಹಾಕಿದ್ದೀರಿ. ಸಹಕಾರ ಕೊಟ್ಟಿದ್ದೀರಿ. ಈ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದು ಸೇವೆ ಮಾಡುವುದು ನಮ್ಮೆಲ್ಲರ ಕರ್ತವ್ಯ. ಈ ಸಮಯದಲ್ಲಿ ನಾವು ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎಂದು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರಿಗೆ ಮಾತು ನೀಡಬೇಕು' ಎಂದು ಅವರು ತಿಳಿಸಿದರು.
‘ರಾಹುಲ್ ಗಾಂಧಿ ಅವರು ಇಂದು ಹಲವು ನಾಯಕರ ಜತೆ, ವಿವಿಧ ವರ್ಗದವರ ಜತೆ ಸಭೆ ನಡೆಸಲಿದ್ದು, ನಾವು ಮಹಿಳೆಯರಿಗೆ ಶಕ್ತಿ ತುಂಬಬೇಕಿದೆ. ರೈತರ ವಿಚಾರದಲ್ಲಿ ಬಿಜೆಪಿ ಸರಕಾರ ಸಂಪೂರ್ಣ ವಿಫಲವಾಗಿದೆ. ಅವರ ಆದಾಯ ದ್ವಿಗುಣ ಮಾಡುತ್ತೇವೆ ಎಂದರು, ಆದರೆ ಏನಾಯ್ತು? ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ತಿಳಿಸಿದರು? ಆದರೆ ಸಾಧ್ಯವಾಗಲಿಲ್ಲ. ಯುವ ಕಾಂಗ್ರೆಸ್ ನಾಯಕರು ಪ್ರತಿ ಕ್ಷೇತ್ರ ವ್ಯಾಪ್ತಿಯಲ್ಲಿ ಎಷ್ಟು ನಿರುದ್ಯೋಗಿಗಳಿದ್ದಾರೆಂದು ಸಮೀಕ್ಷೆ ಮಾಡಬೇಕು. ಅವರ ಪರವಾಗಿ ಹೋರಾಟ ಮಾಡಬೇಕು. ಮಹಿಳೆಯರಿಗೆ ರಾಜಕೀಯ ಶಕ್ತಿ ತುಂಬಲು ‘ನಾ ನಾಯಕಿ' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.
‘ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ತಿಂಗಳಲ್ಲಿ 15 ದಿನ ರಾಜ್ಯದಲ್ಲಿ ಮೀಸಲಿಡುವುದಾಗಿ ತಿಳಿಸಿದ್ದಾರೆ. ಅವರು ಪ್ರತಿ ಕ್ಷೇತ್ರವನ್ನು ಪರಿಶೀಲನೆ ಮಾಡಲಿದ್ದಾರೆ. ಮುಂದಿನ ಚುನಾವಣೆಯಲ್ಲಿ ಅಭ್ಯರ್ಥಿ ಯಾರು ಎಂದು ನಾನು ನಿರ್ಧರಿಸುವುದಿಲ್ಲ, ಆ ನಿರ್ಧಾರ ಮಾಡುವುದು ಸ್ಥಳೀಯ ಕಾರ್ಯಕರ್ತರಾಗಿದ್ದಾರೆ. ಕಾರ್ಯಕರ್ತರ ಧ್ವನಿ ಕಾಂಗ್ರೆಸ್ ಅಧ್ಯಕ್ಷರ ಧ್ವನಿ ಆಗಲಿದೆ. ಬಾಬು ಜಗಜೀವನರಾಮ್ ಹಾಗೂ ಅಂಬೇಡ್ಕರ್ ಅವರ ಕಾರ್ಯಕ್ರಮ ನಂತರ ಚಿಂತನ-ಮಂಥನ ಕಾರ್ಯಕ್ರಮ ಮಾಡಲು ನಾನು ಹಾಗೂ ಶಾಸಕಾಂಗ ಪಕ್ಷದ ನಾಯಕರು ತೀರ್ಮಾನಿಸಿದ್ದೇವೆ' ಎಂದು ಅವರು ತಿಳಿಸಿದರು.
‘ಕರ್ನಾಟಕದ ಬಿಜೆಪಿ ಸರಕಾರ ದೇಶದ ಅತ್ಯಂತ ಭ್ರಷ್ಟ ಸರಕಾರ. ಗುತ್ತಿಗೆದಾರರ ಸಂಘದ ಅಧ್ಯಕ್ಷರು ಪ್ರಧಾನಿಗೆ ಪತ್ರ ಬರೆದು ಶೇ.40ರಷ್ಟು ಲಂಚ ನೀಡಬೇಕಾಗಿದೆ ಎಂದು ದೂರು ನೀಡಿದ್ದಾರೆ. ಇದರಿಂದ ಜನ ಬೇಸತ್ತಿದ್ದಾರೆ. 70 ಲಕ್ಷ ಹೊಸ ಸದಸ್ಯರಲ್ಲಿ ಶೇ.15ರಷ್ಟು ಜನ ಬೇರೆ ಪಕ್ಷದಿಂದ ಬಂದಿದ್ದಾರೆ. ಅವರೆಲ್ಲರೂ ಕಾಂಗ್ರೆಸ್ ಪಕ್ಷವೇ ಭವಿಷ್ಯ ಎಂದು ನಂಬಿದ್ದಾರೆ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ನಾಯಕತ್ವದಲ್ಲಿ ರಾಜ್ಯದಲ್ಲಿ ಉತ್ತಮ ಆಡಳಿತ ಕೊಡುತ್ತೇವೆ ಎಂದು ಭರವಸೆ ನೀಡುತ್ತಾ ನಾನು ಅವರೆಲ್ಲರನ್ನು ಪಕ್ಷಕ್ಕೆ ಸ್ವಾಗತಿಸುತ್ತೇನೆ' ಎಂದು ಶಿವಕುಮಾರ್ ತಿಳಿಸಿದರು.







