ಮಡಿಕೇರಿ: ಆನೆದಂತ ಮಾರಾಟ ಯತ್ನ; ಮೂವರು ಆರೋಪಿಗಳ ಬಂಧನ

ಮಡಿಕೇರಿ: ಅಕ್ರಮವಾಗಿ 2 ಆನೆ ದಂತಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಮಡಿಕೇರಿಯ ಸಿಐಡಿ ಪೊಲೀಸ್ ಅರಣ್ಯ ಘಟಕದ ಪೊಲೀಸರು ಬಂಧಿಸಿದ್ದಾರೆ. ವುಜೈರ್ ಅಹಮದ್, ನಯಾಜುದ್ದೀನ್ ಖಾನ್ ಹಾಗೂ ಅಶ್ರಫ್ ಎಂ.ಎ. ಬಂಧಿತ ಆರೋಪಿಗಳು.
ಗುಡ್ಡೆಹೊಸೂರು ಹಾರಂಗಿ ರಸ್ತೆಯ ಬೊಳ್ಳೂರುವಿನಿಂದ ಮಾದಾಪಟ್ಟಣ ಕಡೆಗೆ ತೆರಳುವ ರಸ್ತೆ ಜಂಕ್ಷನ್ ಬಳಿ 3 ಮಂದಿ ಆನೆ ದಂತವನ್ನು ಮಾರಾಟ ಮಾಡಲು ಯತ್ನಿಸುತ್ತಿರುವ ಬಗ್ಗೆ ಮಡಿಕೇರಿಯ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ಘಟಕಕ್ಕೆ ಏ.1ರಂದು ಖಚಿತ ಮಾಹಿತಿ ಲಭಿಸಿತ್ತು. ಈ ಮಾಹಿತಿ ಆಧರಿಸಿ ದಾಳಿ ನಡೆಸಿದ ಸಂದರ್ಭ ಆರೋಪಿಗಳು ಸೆರೆ ಸಿಕ್ಕಿದ್ದಾರೆ. ಆರೋಪಿಗಳ ವಿರುದ್ದ ವನ್ಯ ಜೀವಿ ಸಂರಕ್ಷಣಾ ಕಾಯಿದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಕೃತ್ಯಕ್ಕೆ ಬಳಸಿದ್ದ ಒಂದು ದ್ವಿಚಕ್ರ ವಾಹನ ಸಹಿತ 2 ಆನೆ ದಂತಗಳನ್ನು ವಶಕ್ಕೆ ಪಡೆಯಲಾಗಿದ್ದು, ಆರೋಪಿಗಳ ವಿರುದ್ದ ತನಿಖೆ ಮುಂದುವರೆದಿದೆ ಎಂದು ಅರಣ್ಯ ಸಂಚಾರಿ ದಳ ತಿಳಿಸಿದೆ.
ಸಿ.ಐ.ಡಿ ಪೊಲೀಸ್ ಅರಣ್ಯ ಘಟಕದ ಪೊಲೀಸ್ ಮಹಾ ನಿರೀಕ್ಷಕ ಕೆ.ವಿ.ಶರತ್‍ಚಂದ್ರ ನಿರ್ದೇಶನದ ಮೇರೆಗೆ ಮಡಿಕೇರಿ ಸಿ.ಐ.ಡಿ ಪೊಲೀಸ್ ಅಧೀಕ್ಷಕ ಚಂದ್ರಕಾಂತ್ ಮಾರ್ಗದರ್ಶನದಲ್ಲಿ ಪಿಎಸ್‍ಐ ಸಿ.ಯು. ಸವಿ, ಸಿಬ್ಬಂದಿಗಳಾದ ಶೇಖರ್, ರಾಜೇಶ್, ರಾಘವೇಂದ್ರ, ಯೋಗೇಶ್, ಮೋಹನ, ಸ್ವಾಮಿ ಮತ್ತು ಮಂಜುನಾಥ್, ದೇವಯ್ಯ, ನಂದ ಅವರುಗಳು ಕಾರ್ಯಾಚರಣೆ ನಡೆಸಿದ್ದಾರೆ.
.jpg)







