ಉತ್ತರಪ್ರದೇಶ ಪ್ರಶ್ನೆ ಪತ್ರಿಕೆ ಸೋರಿಕೆ: ಬಂಧಿತರಲ್ಲಿ ಮೂವರು ಪತ್ರಕರ್ತರು !

Journalist Digvijay Singh Photo: Twitter/vinodkapri
ಲಕ್ನೋ: ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯಲ್ಲಿ 12 ನೇ ತರಗತಿಯ ಇಂಗ್ಲಿಷ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಬಂಧಿಸಲಾದವರಲ್ಲಿ ಮೂವರು ಪತ್ರಕರ್ತರು ಎಂದು ಪೊಲೀಸರು ಶುಕ್ರವಾರ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ. ಈ ಪ್ರಕರಣದಲ್ಲಿ 30 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪತ್ರಕರ್ತರನ್ನು ಅಜಿತ್ ಓಜಾ, ದಿಗ್ವಿಜಯ್ ಸಿಂಗ್ ಮತ್ತು ಮನೋಜ್ ಗುಪ್ತಾ ಎಂದು ಗುರುತಿಸಲಾಗಿದೆ.
ಮಾರ್ಚ್ 30 ರಂದು, ಉತ್ತರ ಪ್ರದೇಶ ರಾಜ್ಯದ 75 ಜಿಲ್ಲೆಗಳಲ್ಲಿ 24 ರಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾದ ನಂತರ ದ್ವಿತೀಯ ಪಿಯು ಇಂಗ್ಲಿಷ್ ಪರೀಕ್ಷೆಯನ್ನು ರದ್ದುಗೊಳಿಸಲಾಯಿತು. ಮಾರ್ಚ್ 29 ರಂದು, 10 ನೇ ತರಗತಿಯ ಸಂಸ್ಕೃತ ಪ್ರಶ್ನೆ ಪತ್ರಿಕೆ ಕೂಡ ಸೋರಿಕೆಯಾಗಿತ್ತು.
ಆರೋಪಿಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸುವುದು ಸೇರಿದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಆದಿತ್ಯನಾಥ್ ಅಧಿಕಾರಿಗಳಿಗೆ ಸೂಚಿಸಿದ್ದರು.
ಬಂಧಿತರಲ್ಲಿ ಓರ್ವನಾದ ಮುಲಾಯಂ ಚೌಹಾಣ್ ಪ್ರಶ್ನೆ ಪತ್ರಿಕೆ ಸೋರಿಕೆಯ ಮಾಸ್ಟರ್ಮೈಂಡ್ ಎಂದು ಹೇಳಲಾಗಿದೆ ಎಂದು ಬಲ್ಲಿಯಾ ಜಿಲ್ಲೆಯ ರಾಸ್ರಾ ನಗರದ ಉಪ ಪೊಲೀಸ್ ವರಿಷ್ಠಾಧಿಕಾರಿ ಶಿವನಾರಾಯಣ ವೈಶ್ಯ ಪಿಟಿಐಗೆ ತಿಳಿಸಿದ್ದಾರೆ. ಬಂಧಿತರನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗುವುದು ಎಂದು ವೈಶ್ಯ ತಿಳಿಸಿದ್ದಾರೆ.
ಈ ನಡುವೆ, ಬಂಧಿತ ಮೂವರು ಪತ್ರಕರ್ತರಲ್ಲಿ ಒಬ್ಬರಾದ ದಿಗ್ವಿಜಯ್ ಸಿಂಗ್ ಅವರು, ತಮ್ಮ ಮೂಲವನ್ನು ಪೊಲೀಸರಿಗೆ ಬಹಿರಂಗಪಡಿಸದ ಕಾರಣ ತನ್ನನ್ನು ಬಂಧಿಸಲಾಗಿದೆ ಎಂದು ಶುಕ್ರವಾರ ಆರೋಪಿಸಿದ್ದಾರೆ.
ತಾನು ಹಿಂದಿ ದೈನಿಕ ಅಮರ್ ಉಜಾಲಾಗಾಗಿ ಕೆಲಸ ಮಾಡುತ್ತಿದ್ದೇನೆ, ಮಾರ್ಚ್ 29 ರಂದು ಸಂಸ್ಕೃತ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಬಗ್ಗೆ ವರದಿ ಮಾಡಿದ್ದೇನೆ ಎಂದು ಸಿಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮರುದಿನ, ಇಂಗ್ಲಿಷ್ ಪ್ರಶ್ನೆ ಪತ್ರಿಕೆ ಸೋರಿಕೆಯ ಬಗ್ಗೆಯೂ ವರದಿ ಮಾಡಿದ್ದಾರೆ, ಅದರ ಬಳಿಕ ಅವರನ್ನು ಬಂಧಿಸಲಾಗಿದ್ದು, ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಪ್ರಶ್ನಿಸಿ ಪೊಲೀಸರು ಹಿಂಸಿಸಿದ್ದಾರೆ ಎಂದು ಅವರು ಆರೋಪಿಸಿರುವುದಾಗಿ scroll.in ವರದಿ ಮಾಡಿದೆ.
ಆದಾಗ್ಯೂ, ಅಮರ್ ಉಜಾಲಾ ಇದುವರೆಗೆ ಬಂಧನಗಳ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ಅದು ಬಂಧನದ ಕುರಿತು ವರದಿಯನ್ನು ಪ್ರಕಟಿಸಿದ್ದರೂ, ಸಿಂಗ್ ತನ್ನ ಪತ್ರಕರ್ತರಲ್ಲಿ ಒಬ್ಬ ಎಂದು ಉಲ್ಲೇಖಿಸಿಲ್ಲ ಎಂದು ದಿ ವೈರ್ ವರದಿ ಮಾಡಿದೆ.
Journalist with Amar Ujala Digvijay Singh and his three associates were sent to jail for not disclosing their source in Ballia paper leak case they exposed.
— हैदर حیدر Haidar Naqv (@haidarpur) April 1, 2022
Please do not shoot the messenger, better focus on clearing the rot in the system.
pic.twitter.com/aaJg2XyJEg