ಭಾರತ ಏನನ್ನಾದರೂ ಖರೀದಿಸಲು ಬಯಸಿದರೆ, ಚರ್ಚಿಸಲು ಸಿದ್ಧ: ರಶ್ಯ ವಿದೇಶಾಂಗ ಸಚಿವ
ಹೊಸದಿಲ್ಲಿ: ಭಾರತಕ್ಕೆ ಭೇಟಿ ನೀಡಿರುವ ರಶ್ಯದ ವಿದೇಶಾಂಗ ವ್ಯವಹಾರಗಳ ಸಚಿವ ಸರ್ಗೀ ಲವ್ರೋವ್ ಭಾರತದ ಸ್ವತಂತ್ರ ವಿದೇಶಾಂಗ ನೀತಿಯನ್ನು ಶುಕ್ರವಾರ ಮತ್ತೊಮ್ಮೆ ಪ್ರಶಂಸಿದ್ದಾರೆ. ಅಲ್ಲದೆ, ಭಾರತ ರಶ್ಯದಿಂದ ಏನಾದರೂ ಖರೀದಿಸಲು ಬಯಸಿದರೆ, ನಾವು ಅದರ ಬಗ್ಗೆ ಚರ್ಚಿಸಲು ಸಿದ್ಧ ಎಂದಿದ್ದಾರೆ.
‘‘ಭಾರತ ರಶ್ಯದಿಂದ ಏನನ್ನು ಖರೀದಿಸಲು ಬಯಸುತ್ತದೆಯೋ ಅದನ್ನು ಪೂರೈಸಲು ನಾವು ಸಿದ್ಧ” ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರೊಂದಿಗೆ ಮಾತುಕತೆ ನಡೆದ ಬಳಿಕ ಅವರು ಸುದ್ದಿಗಾರರಿಗೆ ತಿಳಿಸಿದರು.
‘‘ಭಾರತ ನಮ್ಮಿಂದ ಏನನ್ನಾದರೂ ಖರೀದಿಸಲು ಬಯಸಿದರೆ, ನಾವು ಚರ್ಚೆಗೆ ಹಾಗೂ ಪರಸ್ಪರ ಸ್ವೀಕಾರಾರ್ಹ ಸಹಕಾರಕ್ಕೆ ತಲುಪಲು ಸಿದ್ಧ” ಎಂದು ಅವರು ಹೇಳಿದ್ದಾರೆ.
ಉಕ್ರೇನ್ ವಿರುದ್ಧದ ಯುದ್ಧದ ಕುರಿತಂತೆ ತೀವ್ರ ಅಂತಾರಾಷ್ಟ್ರೀಯ ಒತ್ತಡ ಹಾಗೂ ನಿರ್ಬಂಧಗಳ ನಡುವೆ ರಶ್ಯದ ವಿದೇಶಾಂಗ ಸಚಿವ ಸರ್ಗೀ ಲವ್ರೋ ಅವರು ಗುರುವಾರ ಭಾರತಕ್ಕೆ ಆಗಮಿಸಿದ್ದಾರೆ.
ರಶ್ಯದಿಂದ ದೊಡ್ಡ ಪ್ರಮಾಣದಲ್ಲಿ ದರಕಡಿತದ ತೈಲ ಖರೀದಿಯ ಸೂಚನೆಯ ನಡುವೆ ಇಬ್ಬರು ವಿದೇಶಾಂಗ ವ್ಯವಹಾರಗಳ ಸಚಿವರ ಉನ್ನತ ಮಟ್ಟದ ಮಾತುಕತೆ ನಡೆದಿದೆ. ದ್ವಿಪಕ್ಷೀಯ ಒಪ್ಪಂದಕ್ಕೆ ರೂಬಲ್-ರೂಪಾಯಿ ಹೊಂದಲು ಉಭಯ ರಾಷ್ಟ್ರಗಳು ಆಸಕ್ತವಾಗಿವೆ.







