ಬಾಲಿವುಡ್ ನೃತ್ಯ ಸಂಯೋಜಕ ಗಣೇಶ್ ಆಚಾರ್ಯ ವಿರುದ್ಧ ಸಹ ನೃತ್ಯಗಾರ್ತಿಯಿಂದ ಲೈಂಗಿಕ ಕಿರುಕುಳ ಆರೋಪ

ಮುಂಬೈ: ಬಾಲಿವುಡ್‍ನ ಖ್ಯಾತ ನೃತ್ಯ ಸಂಯೋಜಕ ಗಣೇಶ್ ಆಚಾರ್ಯ ಅವರ ವಿರುದ್ಧ ಸಹ ನೃತ್ಯಗಾತಿಯೊಬ್ಬರು ಲೈಂಗಿಕ ಕಿರುಕುಳ ಆರೋಪ ಹೊರಿಸಿ ದೂರು ನೀಡಿದ್ದ ಹಿನ್ನೆಲೆಯಲ್ಲಿ ಅವರ ವಿರುದ್ಧ ಮುಂಬೈ ಪೊಲೀಸರು ಅಲ್ಲಿನ ಮೆಟ್ರೋಪಾಲಿಟನ್ ನ್ಯಾಯಾಲಯದಲ್ಲಿ ಚಾರ್ಜ್‍ಶೀಟ್ ಸಲ್ಲಿಸಿದ್ದಾರೆ.
ನೃತ್ಯ ಸಂಯೋಜಕಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಗಣೇಶ್ ವಿರುದ್ಧ ಪ್ರಕರಣವನ್ನು ಕಳೆದ ವರ್ಷದ ಫೆಬ್ರವರಿ ತಿಂಗಳಲ್ಲಿ ದಾಖಲಿಸಲಾಗಿತ್ತು.
ಚಾರ್ಜ್ ಶೀಟ್ ಪ್ರಕಾರ ಗಣೇಶ್ ಮತ್ತು ಅವರ ಸಹಾಯಕರೊಬ್ಬರ ವಿರುದ್ಧ ಐಪಿಸಿ ಸೆಕ್ಷನ್ 354ಎ, 354ಸಿ, 354ಡಿ, 509,323,504,506 ಮತ್ತು 34 ಅನ್ವಯ ಪ್ರಕರಣ ದಾಖಲಿಸಲಗಿದೆ.
ಜನವರಿ 2020ರಲ್ಲಿ ಗಣೇಶ್ ಅವರ ಸಹ ನೃತ್ಯಗಾತಿಯೊಬ್ಬರು ದೂರು ಸಲ್ಲಿಸಿ ಗಣೇಶ್ ಅವರ ಲೈಂಗಿಕ ಬೇಡಿಕೆಗಳನ್ನು ಪೂರೈಸದೇ ಇದ್ದುದಕ್ಕೆ ತನಗೆ ಕಿರುಕುಳ ನೀಡಲಾಗಿತ್ತು, ಗಣೇಶ್ ತಮಗೆ ಬಲವಂತಗಾಗಿ ಅಶ್ಲೀಲ ಚಿತ್ರ ತೋರಿಸಿದ್ದರು ಹಾಗೂ ಇಂಡಿಯನ್ ಫಿಲ್ಮ್ ಎಂಡ್ ಟೆಲಿವಿಷನ್ ಕೊರಿಯೋಗ್ರಾಫರ್ಸ್ ಅಸೋಸಿಯೇಶನ್‍ನ ತನ್ನ ಸದಸ್ಯತ್ವವನ್ನೂ ರದ್ದುಪಡಿಸಲಾಗಿತ್ತು ಎಂದು ದೂರಿದ್ದರು. ಆ ಸಂದರ್ಭ ಗಣೇಶ್ ಈ ಸಂಘದ ಪ್ರಧಾನ ಕಾರ್ಯದರ್ಶಿಯಾಗಿದ್ದರು.
ಈ ಹಿಂದೆ ನಟಿ ತನುಶ್ರೀ ದತ್ತಾ ಕೂಡ ಗಣೇಶ್ ವಿರುದ್ಧ ಆರೋಪ ಹೊರಿಸಿ ತನ್ನ ವಿರುದ್ಧ ವದಂತಿಗಳನ್ನು ಹರಡಿ ತನ್ನ ಗೌರವಕ್ಕೆ ಧಕ್ಕೆ ತರುತ್ತಿದ್ದಾರೆ ಎಂದು ದೂರಿದ್ದರು.







