ಹೃದಯ ಶ್ವಾಸಕೋಶ ಪುನಶ್ಚೇತನ; ಆರೋಗ್ಯ ಸ್ವಯಂ ಸೇವಕರಿಗೆ ತರಬೇತಿ

ಕೊಣಾಜೆ: ಸಂಪೂರ್ಣ ಆರೋಗ್ಯ ಅಭಿಯಾನದಡಿ ಹೃದಯ ಶ್ವಾಸಕೋಶ ಕಾರ್ಯ ಸ್ಥಗಿತ ಸಮಯದಲ್ಲಿ ನೀಡುವ ತುರ್ತು ಚಿಕಿತ್ಸೆ ಸಿ.ಪಿ.ಆರ್ ತಂತ್ರ ಕುರಿತು ಸ್ವಯಂ ಸೇವಕರಿಗೆ ವಿಶೇಷ ಮಾಹಿತಿ ಮತ್ತು ತರಬೇತಿ ಕಾರ್ಯಕ್ರಮ ಮುಡಿಪುವಿನ ಜನಶಿಕ್ಷಣ ಟ್ರಸ್ಟ್ ನಲ್ಲಿ ನಡೆಯಿತು.
ಜನ ಶಿಕ್ಷಣ ಟ್ರಸ್ಟ್, ಶಾರದಾ ಆಯುರ್ವೇದ ಮೆಡಿಕಲ್ ಕಾಲೇಜು ಆಸ್ಪತ್ರೆ ತಲಪಾಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಬ್ಯಾಂಕ್, ಸ್ಮೈಲ್ ಟ್ರಸ್ಟ್ ಇವರ ಸಹಯೋಗದಲ್ಲಿ ನಡೆದ ವಿಶೇಷ ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಧ್ಯಪಕರಾದ ಡಾ. ಸಂದೀಪ್ ಬೇಕಲ್ ಭಾಗವಹಿಸಿ ವಿಡಿಯೋ, ಚಿತ್ರ ಪ್ರದರ್ಶನ ಮತ್ತು ಪ್ರಾತ್ಯಕ್ತಿಕೆಯ ಮೂಲಕ ಮಾಹಿತಿಯೊಂದಿಗೆ ತರಬೇತಿ ನೀಡಿದರು.
ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಕಿಶೋರ್ ಕುಮಾರ್ ಆರೋಗ್ಯ ಅಭಿಯಾನದಡಿ ದೃಷ್ಟಿ ದೋಷ ಇರುವವರಿಗೆ ಕನ್ನಡಕಗಳನ್ನು ವಿತರಿಸಿ, ಬಾಳೆಪುಣಿ ಗ್ರಾಮಸ್ಥರ ಮನೆಯಂಗಳದಲ್ಲಿ ಆರೋಗ್ಯ ಸೇವೆ ಒದಗಿಸುವ ಕಾರ್ಯವನ್ನು ಅಭಿಯಾನ ರೀತಿಯಲ್ಲಿ ನಡೆಸಲಾಗುವುದೆಂದರು. 4 ಮಂದಿ ಸ್ವ ಉದ್ಯೋಗಿನಿಯರಿಗೆ ಸ್ಮೈಲ್ ಟ್ರಸ್ಟ್ ಒದಗಿಸಿದ ಹೊಲಿಗೆ ಯಂತ್ರಗಳನ್ನು ಲಯನ್ ರಮೇಶ್ ಶೇಣವ ಹಸ್ತಾಂತರಿಸಿ ಸುಸ್ಥಿರ ಅಭಿವೃದ್ಧಿಗೆ ಆರೋಗ್ಯ ಮತ್ತು ಉದ್ಯೋಗ ಅಗತ್ಯವೆಂದರು.
ಲಯನ್ ರಾಧಾ ಕೃಷ್ಣ ರೈ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ, ಆರೋಗ್ಯ ಸಂಯೋಜಕಿ ತೇಜಸ್ವಿನಿ, ಸಮುದಾಯ ಆರೋಗ್ಯ ಅಧಿಕಾರಿ ಶಿಲ್ಪ, ಆರೋಗ್ಯ ಸುರಕ್ಷಾ ಅಧಿಕಾರಿ ಮೀನಾಕ್ಷಿ, ಪಂಚಾಯಿತಿ ಸದಸ್ಯರಾದ ಮುರಳಿಧರ್ ಶೆಟ್ಟಿ, ಸೆಮೀಮಾ, ಜೋಹಾರ, ಅಂಜಲಿ, ಮಾಧ್ಯಮ ಸಲಹೆಗಾರ ಶಾಮ್ ಭಟ್, ಸ್ವಚ್ಛತಾ ಸೇನಾನಿಗಳಾದ ಇಸ್ಮಾಯಿಲ್, ವಿದ್ಯಾ, sಸುರೇಖ, ವೃತ್ತಿ ತರಬೇತಿ ಕೇಂದ್ರದ ಶರತ್ ಕುಮಾರ್, ಆಶಾಕಾರ್ಯಕರ್ತೆಯರು ಸಂವಾದದಲ್ಲಿ ಭಾಗವಹಿಸಿದ್ದರು.
ಜನ ಶಿಕ್ಷಣ ಟ್ರಸ್ಟ್ ನಿರ್ದೇಶಕರಾದ ಶೀನ ಶೆಟ್ಟಿ, ಕೃಷ್ಣ ಮೂಲ್ಯ ತರಬೇತಿಯನ್ನು ಸಂಯೋಜಿಸಿದರು. ಚೇತನ್, ಕಾವೇರಿ, ಪ್ರಜ್ಞಾ, ಅಶ್ವಿನಿ ಸಹಕರಿಸಿದರು. ಆರೋಗ್ಯ ಅಭಿಯಾನದ ಸ್ವಯಂ ಸೇವಕರು, ಮಂದಾರ ಸಂಜೀವಿನಿ ಒಕ್ಕೂಟದ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ 76 ಮಂದಿ ತರಬೇತಿಯಲ್ಲಿ ಭಾಗವಹಿಸಿದ್ದರು.







