ಯುವ ಪದವೀಧರರು ಬಡವರ ಸೇವೆಯ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ಕೊಡುಗೆ ನೀಡಿ: ಡಾ.ಗೀತಾಂಜಲಿ ಬೆಟ್ಮಾನಾಬನ್
ಫಾದರ್ ಮುಲ್ಲಾರ್ ಶೈಕ್ಷಣಿಕ ಸಂಸ್ಥೆಗಳ ಪದವಿ ಪ್ರದಾನ ಸಮಾರಂಭ

ಮಂಗಳೂರು: ಯುವ ಪದವೀಧರರು ತಾವು ಪಡೆದ ಶಿಕ್ಷಣದಿಂದ ಸಮಾಜದ ಬಡವರ, ದುರ್ಬಲರ ಸೇವೆಯ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ಕೊಡುಗೆ ನೀಡುವಂತಾಗಬೇಕು ಎಂದು ಭುವನೇಶ್ವರ ಏಮ್ಸ್ ನ ವಿಶ್ರಾಂತ ನಿರ್ದೇಶಕರು ಹಾಗೂ ವೈಝಾಗ್ ಗೀತಂ ವೈದ್ಯಕೀಯ ವಿಜ್ಞಾನ ವಿಶ್ವ ವಿದ್ಯಾಲಯದ ಸಹ ಕುಲಪತಿ ಡಾ. ಗೀತಾಂಜಲಿ ಬೆಟ್ಮಾನಾಬನ್ ತಿಳಿಸಿದ್ದಾರೆ.
ನಗರದ ಫಾದರ್ ಮುಲ್ಲಾರ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮುಲ್ಲಾರ್ ಸೇವಾ ಸಂಸ್ಥೆಗಳ ಪದವಿ ಪ್ರದಾನ ಸಮಾರಂಭದ ಮುಖ್ಯ ಅತಿಥಿ ಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಶಿಕ್ಷಣ ಸಮಾಜದಲ್ಲಿ ನಮ್ಮ ವ್ಯಕ್ತಿತ್ವದ ಬದಲಾವಣೆಗೆ ಕಾರಣವಾಗುತ್ತದೆ. ಆದರೆ ಇಂದಿಗೂ ಸಾಕಷ್ಟು ಕಾರಣಗಳಿಂದ ಶಿಕ್ಷಣದಿಂದ ವಂಚಿತರಾದವರಿದ್ದಾರೆ. ಈ ಸಂದರ್ಭದಲ್ಲಿ ಇಂದಿನ ಯುವ ಜನರು ಸಾಮಾಜಿಕ ಜಾಲತಾಣ ಫೆಸ್ ಬುಕ್, ಇನ್ಸ್ಟಾಗ್ರಾಮ್ ಸೇರಿದಂತೆ ತಮ್ಮ ವೈಯಕ್ತಿಕ ಲೋಕದಲ್ಲಿ ಕಾಲ ಕಳೆಯುವ ಬದಲು ಕನಿಷ್ಠ ಸಹಾಯವನ್ನು ತಮ್ಮ ಪರಿಸರದ ಬಡವರಿಗೆ, ದುರ್ಬಲ ರಿಗೆ ನೀಡುವ ದಿನಚರಿಯಲ್ಲಿ ತೊಡಗಿಕೊಂಡಾಗ ಸಮಾಜಕ್ಕೆ ಕೊಡುಗೆ ನೀಡಿದಂತಾಗುತ್ತದೆ. ಡಿಗ್ರಿ ಪಡೆದ ತಕ್ಷಣ ಕಲಿಕೆ ಪೂರ್ಣಗೊಳ್ಳುವುದಿಲ್ಲ. ನಿರಂತರ ಕಲಿಕೆ ನಮ್ಮ ವೃತ್ತಿ ಕೌಶಲ್ಯದ ಪರಿಣತಿಯನ್ನು ವೃದ್ಧಿಸುತ್ತದೆ ಎಂದು ಯುವ ಪದವೀಧರರನ್ನು ಡಾ.ಗೀತಾಂಜಲಿ ಬೆಟ್ಮಾನಾಬೆನ್ ಅಭಿನಂದಿಸಿದರು.
ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ನ್ಯಾ.ಜೋನ್ ಮೈಕೆಲ್ ಡಿಕುನ್ಹಾ ಸಮಾರಂಭದ ಗೌರವ ಅತಿಥಿ ಗಳಾಗಿ ಭಾಗವಹಿಸಿ ಮಾತನಾಡುತ್ತಾ, ಯುವ ಪದವೀಧರರು ಸಮಾಜದಲ್ಲಿ ಹೆಚ್ಚು ಜವಾಬ್ದಾರಿಯುತವಾಗಿ ಜನರ ನಂಬಿಕೆಗೆ ಪಾತ್ರ ವಾಗುವಂತೆ ಕಾರ್ಯ ನಿರ್ವಹಿಸಬೇಕು. ವೈದ್ಯಕೀಯ ಕ್ಷೇತ್ರದಲ್ಲಿ ರೋಗಿಗೆ ತೊಂದರೆ ಯಾಗದಂತೆ, ಆತನ ರೋಗ ಗುಣಪಡಿಸಿ ಜೀವ ರಕ್ಷಣೆಗೆ ಪೂರಕವಾಗಿ ತೆಗೆದುಕೊಳ್ಳುವ ನಿರ್ಧಾರ ಮುಖ್ಯವಾಗುತ್ತದೆ ಎಂದು ಶುಭ ಹಾರೈಸಿದರು.
ಮಂಗಳೂರು ಕಥೋಲಿಕ್ ಕ್ರೈಸ್ತ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಹಾಗೂ ಫಾದರ್ ಮುಲ್ಲಾರ್ ಸೇವಾ ಸಂಸ್ಥೆ ಗಳ ಅಧ್ಯಕ್ಷ ಅತೀ.ವಂ.ಡಾ.ಪೀಟರ್ ಪಾವ್ಲ್ ಸಲ್ದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಮನುಷ್ಯನ ಎಲ್ಲಾ ಕಾಯಿಲೆ ಗಳನ್ನು ಔಷಧಿ ಗಳಿಂದ ಗುಣಪಡಿಸಲು ಸಾಧ್ಯವಿಲ್ಲ. ಮನುಷ್ಯನನ್ನು ಅರ್ಥ ಮಾಡಿಕೊಳ್ಳುವುದು, ರೋಗಿಯ ಬಗ್ಗೆ ಸಹಾನುಭೂತಿ, ಅನುಕಂಪ, ಭರವಸೆ, ಮಾನಸಿಕ ಸ್ಥೈರ್ಯ ನೀಡುವುದು ಮುಖ್ಯ ವಾಗುತ್ತದೆ. ರೋಗಿಯ ಜೊತೆ ಹೆಚ್ಚು ಮಾತನಾಡುವುದು ಆತನ ಮಾತುಗಳನ್ನು ಕೇಳುವ ಮೂಲಕ, ನಮ್ಮ ಮಾತು, ವರ್ತನೆ ಸೇರಿದಂತೆ ಆತನ ಬಗ್ಗೆ ತೋರುವ ಸಹಾನುಭೂತಿ ರೋಗಿ ಗುಣಮುಖನಾಗಲು ಸಾಧ್ಯ ಎಂದು ಯುವ ಪದವೀಧರರಿಗೆ ಕರೆ ನೀಡಿದರು.
ಸಮಾರಂಭದಲ್ಲಿ ವಂ.ರುಡಾಲ್ಫ್ ರವಿ ಡೇಸಾ, (ಫಾದರ್ ಮುಲ್ಲಾರ್ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜಿನ ಆಡಳೀತಾಧಿಕಾರಿ) ವಂ.ಸಿಲ್ವೆಸ್ಟರ್ ವಿನ್ಸೆಂಟ್ ಲೋಬೊ (ಆಡಳಿತಾಧಿಕಾರಿ ಎಫ್ ಎಂಎಚ್ ಟಿ )ವಂ.ನೆಲ್ಸನ್ ಧೀರಜ್ ಫಾಯಸ್ (ಸಹಾಯಕ ಆಡಳಿತಾಧಿಕಾರಿ ಎಫ್ ಎಂಎಂಸಿಎಚ್ ) ವಂ.ಜೋರ್ಜ್ ಜೀವನ್ ಸಿಕ್ವೇರಾ (ಸಹಾಯಕ ಆಡಳಿತಾಧಿಕಾರಿ ಎಫ್ ಎಂಎಂಸಿಎಚ್ ) ಡಾ.ಆಂಟನಿ ಸಿಲ್ವನ್ ಡಿಸೋಜ (ಡೀನ್), ಡಾ. ಉರ್ಬನ್ ಜೆ.ಎ.ಡಿಸೋಜ(ಡೀನ್), ಪ್ರಾಂಶುಪಾಲರಾದ ಜೆಸಿಂತಾ ಡಿಸೋಜ, ಅಖಿಲೇಶ್ ಪಿ.ಎಂ, ನ್ಯಾನ್ಸಿ ಮಥಾಯಸ್, ರಮೇಶ್ ಭಟ್, ಸಿಸ್ಟರ್ ಜಾನೆಟ್, ಉದಯ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಫಾ.ಮುಲ್ಲಾರ್ ಮೆಡಿಕಲ್ ಕಾಲೇಜ್ ನ ನಿರ್ದೇಶಕ ವಂ.ರಿಚರ್ಡ್ ಅಲೋಶಿಯಸ್ ಕೊಯಿಲ್ಲೋ ಸ್ವಾಗತಿಸಿದರು. ವಂ.ಅಜಿತ್ ಮಿನೇಜಸ್ (ಆಡಳೀತಾಧಿಕಾರಿ ಎಫ್ ಎಂ.ಎಂ.ಸಿ ಮತ್ತು ಎಫ್ ಎಂಸಿಒಎ ಎಚ್ಎಸ್) ವಂದಿಸಿದರು.
ಡಾ.ಜೆಫ್ರೀ, ಡಾ.ಸರಿತಾ ಕಾರ್ಯಕ್ರಮ ನಿರೂಪಿಸಿದರು. ಸಮಾರಂಭದಲ್ಲಿ ವಿವಿಧ ಶೈಕ್ಷಣಿಕ ವಿಭಾಗದ 615 ಯುವ ಪದವೀಧರರಿಗೆ ಪದವಿ ಪ್ರದಾನ ಮತ್ತು ಪದಕ ವಿಜೇತರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.






























