ಉದ್ದಿಮೆಗಳಿಗೆ ಬೆಂಗಳೂರಿನಿಂದ ಹೈದರಾಬಾದ್‌ಗೆ ಆಹ್ವಾನ: ಬೊಮ್ಮಾಯಿ ಸರ್ಕಾರದ ವಿರುದ್ಧ ಪ್ರಿಯಾಂಕ್ ಖರ್ಗೆ ಅಸಮಾಧಾನ

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಉದ್ಯಮಗಳು ಎದುರಿಸುತ್ತಿರುವ ಅನಾನುಕೂಲಗಳ ಬಗ್ಗೆ ಯುವ ಉದ್ಯಮಿ ರವೀಶ್ ನರೇಶ್ ಎತ್ತಿದ ತಕರಾರುಗಳನ್ನು ಮತ್ತು ಅದಕ್ಕೆ ತೆಲಂಗಾಣ ಕೈಗಾರಿಕಾ ಸಚಿವ ಪ್ರತಿಕ್ರಿಯಿಸಿದನ್ನು ಉಲ್ಲೇಖಿಸಿ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬೆಳವಣಿಗೆ ಮತ್ತು ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸುವ ಬದಲು ಕೋಮು ವಿಚಾರಗಳ ಮೇಲೆ ಕೇಂದ್ರೀಕರಿಸಿದೆ ಎಂದು ಕಿಡಿ ಕಾರಿದ್ದಾರೆ.
ಹೆಚ್ ಎಸ್ ಆರ್/ ಕೋರಮಂಗಲದ ಸ್ಟಾರ್ಟ್-ಅಪ್‌ಗಳು ಈಗಾಗಲೇ ಬಿಲಿಯನ್ ಡಾಲರ್ ತೆರಿಗೆಗಳನ್ನು ತಂದು ಕೊಡುತ್ತಿದೆ, ಆದರೂ ನಾವು ಕೆಟ್ಟ ರಸ್ತೆಗಳು, ಪ್ರತಿದಿನ ಪವರ್ ಕಟ್, ಕಳಪೆ ನೀರು ಸರಬರಾಜು ಹಾಗೂ ಬಳಸಲಾಗದಂತಹ ಪಾದಚಾರಿ ಮಾರ್ಗಗಳನ್ನು ಹೊಂದಿದ್ದೇವೆ. ಬಹುತೇಕ ಗ್ರಾಮೀಣ ಪ್ರದೇಶಗಳು ಭಾರತದ ಸಿಲಿಕಾನ್ ವ್ಯಾಲಿ (ಬೆಂಗಳೂರು) ಗಿಂತ ಉತ್ತಮ ಮೂಲ ಸೌಕರ್ಯಗಳನ್ನು ಹೊಂದಿದೆ ಎಂದು ಇತ್ತೀಚೆಗೆ ಯುವ ಉದ್ಯಮಿ ರವೀಶ್ ನರೇಶ್ ಟ್ವೀಟ್ ಮಾಡಿದ್ದರು.
ನರೇಶ್ ಟ್ವೀಟ್ ಗೆ ಪ್ರತಿಕ್ರಿಯಿಸಿದ್ದ ತೆಲಂಗಾಣ ಕೈಗಾರಿಕಾ ಸಚಿವ ಕೆಟಿಆರ್ ರಾವ್, “ನಿಮ್ಮ ಬ್ಯಾಗ್ ಪ್ಯಾಕ್ ಮಾಡಿ, ಹೈದರಬಾದ್ ಗೆ ಹೊರಡಿ, ನಮ್ಮಲ್ಲಿ ಉತ್ತಮ ಭೌತಿಕ ಮೂಲಸೌಕರ್ಯ ಮತ್ತು ಸಮಾನ ಸಾಮಾಜಿಕ ಮೂಲಸೌಕರ್ಯವನ್ನು ಹೊಂದಿದ್ದೇವೆ. ನಮ್ಮ ವಿಮಾನ ನಿಲ್ದಾಣವು ಅತ್ಯುತ್ತಮವಾದದ್ದು. ಹೆಚ್ಚು ಮುಖ್ಯವಾಗಿ ನಮ್ಮ ಸರ್ಕಾರದ ಮೂರು ಮಂತ್ರ; ನಾವೀನ್ಯತೆ, ಮೂಲಸೌಕರ್ಯ ಮತ್ತು ಅಂತರ್ಗತ ಬೆಳವಣಿಗೆ” ಎಂದು ಪರೋಕ್ಷವಾಗಿ ಕರ್ನಾಟಕ ರಾಜಧಾನಿ ಬೆಂಗಳೂರಿನ ಅಸಮರ್ಪಕತೆಯನ್ನು ಛೇಡಿಸಿದ್ದಾರೆ.
ತೆಲಂಗಾಣ ಸಚಿವರ ಟ್ವೀಟ್ ಬೆನ್ನಲ್ಲೇ ಖರ್ಗೆ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, “ಅಭಿನಂದನೆಗಳು, ಉತ್ತಮ ಮೂಲಸೌಕರ್ಯಕ್ಕಾಗಿ ಮಾತ್ರವಲ್ಲದೆ ಉತ್ತಮ “ಸಾಮಾಜಿಕ” ಮೂಲಸೌಕರ್ಯಕ್ಕಾಗಿಯೂ ಸಹ ಹೈದರಾಬಾದ್‌ಗೆ ತೆರಳಲು ನಮ್ಮ ನೆರೆ ರಾಜ್ಯದವರು ಸ್ಟಾರ್ಟ್‌ಅಪ್ ಗಳಿಗೆ ಹೇಳುತ್ತಿದ್ದಾರೆ. ನಿಮ್ಮ ಪಕ್ಷದಿಂದ ಕೆಲವು ಆರ್ಥಿಕ ಜಿಹಾದ್‌ಗಳು ನಮಗೆ ಹೂಡಿಕೆ ಅಥವಾ ಉದ್ಯೋಗಗಳನ್ನು ಪಡೆಯುವುದಿಲ್ಲ ಎಂದು ಖಚಿತಪಡಿಸುತ್ತದೆ” ಎಂದು ಟ್ವೀಟ್ ಮಾಡಿದ್ದಾರೆ.
ರಾಜ್ಯದಲ್ಲಿ ಇತ್ತೀಚೆಗೆ ಹಲಾಲ್ ವಿರುದ್ಧ ಬಿಜೆಪಿ ನಾಯಕರು ʼಆರ್ಥಿಕ ಜಿಹಾದ್ʼ ಎಂದು ಹೇಳಿಕೆ ನೀಡಿದ್ದನ್ನು ಈ ಮೂಲಕ ಖರ್ಗೆ ಟೀಕಿಸಿದ್ದಾರೆ.
Congratulations @CMofKarnataka we now have our neighbor telling startups to move to Hyderabad for not only a better infrastructure, but also a better “social” infrastructure.
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) April 2, 2022
A few more economic jihads from your party will ensure that we neither get investments or jobs. pic.twitter.com/WJOP86x9L9







