ಪುತ್ತೂರು: ಸಹಕಾರಿ ರತ್ನ ಸೀತಾರಾಮ ರೈಗೆ ನಾಗರಿಕ ಸನ್ಮಾನ

ಪುತ್ತೂರು: ಎಲ್ಲರನ್ನೂ ಒಟ್ಟು ಸೇರಿಸುವ ಪ್ರವೃತ್ತಿಯೇ ಸಹಕಾರ ಎಂದು ಕರೆಸಲ್ಪಡುತ್ತಿದ್ದು, ಈ ಕ್ಷೇತ್ರವು ಬುದ್ಧಿವಂತರ ಕ್ಷೇತ್ರವಾಗಿದೆ. ಆ ಬುದ್ಧಿವಂತಿಕೆಯನ್ನು ಸವಣೂರು ಸೀತಾರಾಮ ರೈ ಅವರು ಬೆಳೆಸಿದ್ದಾರೆ ಎಂದು ಸವಣೂರು ಸೀತಾರಾಮ ರೈ ಅವರ ಶಾಲಾ ಸಹಪಾಠಿಯಾದ ಮಾಜಿ ಕೇಂದ್ರ ಸಚಿವ, ಸಂಸದ ಡಿ.ವಿ.ಸದಾನಂದ ಗೌಡ ಹೇಳಿದರು.
ಅವರು ರಾಜ್ಯ ಸರ್ಕಾರದ `ಸಹಕಾರಿ ರತ್ನ' ಪ್ರಶಸ್ತಿ ಪುರಸ್ಕೃತ ಸವಣೂರು ಸೀತಾರಾಮ ರೈ ಅವರಿಗೆ ಪುತ್ತೂರಿನ ಕೊಂಬೆಟ್ಟು ಬಂಟರ ಭವನದಲ್ಲಿ ಶನಿವಾರ ನಡೆದ ನಾಗರಿಕ ಸನ್ಮಾನ `ಸೀತಾಭಿಮಾನ' ಕಾರ್ಯಕ್ರಮದಲ್ಲಿ ಸವಣೂರು ಸೀತಾರಾಮ ರೈ ಅವರನ್ನು ಸನ್ಮಾನಿಸಿ ಮಾತನಾಡಿದರು.
ನಮ್ಮ ದೇಶದಲ್ಲಿ ಆರ್ಥಿಕ ಹಿನ್ನಡೆಯಾಗಿರುವ ಉಲ್ಲೇಖವಿಲ್ಲ. ಇಲ್ಲಿರುವ ಸಹಕಾರಿ ತತ್ವವೇ ಆರ್ಥಿಕ ಹಿನ್ನಡೆದ ತಡೆಗೆ ಪ್ರೇರಣೆಯಾಗಿದೆ. ಇಲ್ಲಿನ ಸಹಕಾರಿ ತತ್ವವು ಜಗತ್ತಿನ ವಿಶ್ಲೇಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ವಿಶ್ವಾಸಾರ್ಹ ಮತ್ತು ನಂಬಿಕಸ್ಥರು ಸಹಕಾರಿ ರಂಗದಲ್ಲಿದ್ದರೆ ಪಾರದರ್ಶಕವಾಗಿ ಮುಂದುವರಿಸಲು ಸಾಧ್ಯವಿದೆ. ಸಹಕಾರಿ ರಂಗವನ್ನು ಬಲಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಇದಕ್ಕಾಗಿ ಮಂತ್ರಿಯನ್ನು ನೇಮಿಸಿದೆ. ಮುಂದಿನ ದಿನಗಳಲ್ಲಿ ಕ್ಷೀರ ಕ್ಷೇತ್ರ, ಹಸಿರು ಕ್ಷೇತ್ರದ ಕ್ರಾಂತಿಯಾದಂತೆ ಸಹಕಾರಿ ಕ್ಷೇತ್ರದಲ್ಲಿಯೂ ಕ್ರಾಂತಿಯಾಗಲಿದೆ ಎಂದರು.
ಸಭಾ ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ ಮನುಷ್ಯರ ಬದುಕಿನಲ್ಲಿ ಹುಟ್ಟು ಮತ್ತು ಸಾವು ಸಹಜವಾಗಿದೆ. ಆದರೆ ಈ ನಡುವೆ ಹಲವು ಕ್ಷೇತ್ರಗಳಲ್ಲಿ ಗುರುತಿಸಿಕೊಂಡು ಸಮಾಜಕ್ಕೆ ಬೆಳಕು ಮೂಡಿಸುವುದು ಸಾಧನೆಯಾಗಿದೆ. ಕುಗ್ರಾಮವಾಗಿ ಸವಣೂರು ಗ್ರಾಮವನ್ನು ಶಿಕ್ಷಣ ಕ್ಷೇತ್ರದ ಮೂಲಕ ಬೆಳಗಿಸಿ ಎಲ್ಲೆಡೆ ಗುರುತಿಸುವಂತೆ ಮಾಡಿರುವ ಕೀರ್ತಿ ಸವಣೂರು ಸೀತಾರಾಮ ರೈ ಅವರದ್ದಾಗಿದೆ. ಅವರ ಸಾಧನಾಶೀಲತೆಗೆ ಸಹಕಾರಿ ರತ್ನ ಪ್ರಶಸ್ತಿ ಲಭ್ಯವಾಗಿರುವುದು ಪ್ರಶಸ್ತಿಯ ಮೌಲ್ಯವನ್ನು ಹೆಚ್ಚುಗೊಳಿಸಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಎಸ್‍ಡಿಸಿಸಿ ಬ್ಯಾಂಕ್ ಹಾಗೂ ರಾಜ್ಯ ಸಹಕಾರ ಮಹಾಮಂಡಲದ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಮಾತನಾಡಿ ನಾನು ಮತ್ತು ಸೀತಾರಾಮ ರೈ ಅವರು ಒಟ್ಟಿಗೆ ಡಿಸಿಸಿ ಬ್ಯಾಂಕ್‍ನ ಮೂಲಕ ಸಹಕಾರಿ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದೆವು. ಬಳಿಕ ಇಬ್ಬರೂ ಪೂರ್ಣಕಾಲಿಕವಾಗಿ ಸಹಕಾರಿ ಕ್ಷೇತ್ರದಲ್ಲಿ ತೊಡಿಗಿಸಿಕೊಂಡಿದ್ದೆವು. ಸವಣೂರು ಸೀತಾರಾಮ ರೈ ಅವರು ತನ್ನದೇ ಆದ ರೀತಿಯಲ್ಲಿ ಸಹಕಾರಿ ಕ್ಷೇತ್ರವನ್ನು ಬೆಳೆಸಿಕೊಂಡು ಇದೀಗ ರಾಜ್ಯ ಸಹಕಾರಿ ರತ್ನ ಪ್ರಶಸ್ತಿಗೆ ಭಾಜನರಾಗಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.
ರಾಜ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ, ಶಾಸಕ ಸಂಜೀವ ಮಠಂದೂರು, ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿದರು.
ಪುತ್ತೂರು ಸರ್ಕಾರಿ ಪ್ರ.ದ.ಮಹಿಳಾ ಕಾಲೇಜ್ ಪ್ರಾಂಶುಪಾಲ ಪ್ರೊ. ಝೇವಿಯರ್ ಡಿಸೋಜ ಅಭಿನಂದನಾ ನುಡಿಗಳನ್ನಾಡಿದರು. ಸೀತಾಭಿಮಾನ ನಾಗರಿಕ ಸನ್ಮಾನ ಸಮಿತಿ ಕಾರ್ಯದರ್ಶಿ ಸೀತಾರಾಮ ಕೇವಳ ಸನ್ಮಾನ ಪತ್ರ ವಾಚಿಸಿದರು.
ಈ ಸಂದರ್ಭದಲ್ಲಿ ಬಡ ಕುಟುಂಬವೊಂದಕ್ಕೆ ಮನೆ ನಿರ್ಮಿಸಲು ಸೀತಾಭಿಮಾನ ನಾಗರಿಕ ಸನ್ಮಾನ ಸಮಿತಿ ವತಿಯಿಂದ ಸಹಾಯಧನ ನೀಡಲಾಯಿತು.
ಸೀತಾಭಿಮಾನ ನಾಗರಿಕ ಸನ್ಮಾನ ಸಮಿತಿ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಸ್ವಾಗತಿಸಿದರು. ರಾಕೇಶ್ ರೈ ಕಡೆಂಜಿ ನಿರೂಪಿಸಿದರು.