ಮಹಿಳೆಗೆ ಹಲ್ಲೆ ಆರೋಪ: ಮೂರು ಮಂದಿ ಸೆರೆ

ಮಂಗಳೂರು : ಮಹಿಳೆಯೋರ್ವರಿಗೆ ಹಲ್ಲೆ ನಡೆಸಿದ ಆರೋಪದಲ್ಲಿ ಮೂರು ಮಂದಿಯನ್ನು ಮಂಗಳೂರು ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಆಸಿಫ್ (39), ಶಿವಂ ಯಾನೆ ಶಿವಲಿಂಗ (40), ಅಫ್ತಾಬ್ (32) ಎಂದು ಪೊಲೀಸರು ತಿಳಿಸಿದ್ದಾರೆ.
ಹಲ್ಲೆಗೊಳಗಾದ ಮಹಿಳೆಯನ್ನು ವನಜಾ (40) ಎಂದು ಗುರುತಿಸಲಾಗಿದೆ.
ವನಜಾ ಅವರು ಕೋವಿಡ್ ಸಂದರ್ಭ ಕೆಲಸ ಕಳೆದುಕೊಂಡಿದ್ದರು. ಈ ವೇಳೆ ಅವರು ಆಸೀಫ್ ಬಳಿ ಸಹಾಯ ಯಾಚಿಸಿ ಮೈಮುನಾ ಫೌಂಡೇಶನ್‌ನ ಆಶ್ರಮಕ್ಕೆ ಸೇರಿದ್ದರು. ಸುಮಾರು ಒಂದು ವರ್ಷದಿಂದ ಅಲ್ಲಿ ಆಶ್ರಯ ಪಡೆಯುತ್ತಿದ್ದರು. ಈ ಸಂದರ್ಭದಲ್ಲಿ ಆಶ್ರಮದ ವಾರ್ಡನ್, ಮ್ಯಾನೇಜರ್ ಆಗಿದ್ದ ಶಶಿಧರ್ ಎಂಬಾತ ಸಂಸ್ಥೆಗೆ ವಂಚನೆ ಮಾಡಿ ಪರಾರಿಯಾಗಿದ್ದಾನೆ ಎಂದು ದೂರಲಾಗಿದ್ದು, ಇದರಲ್ಲಿ ವನಜಾ ಅವರು ಶಾಮೀಲಾಗಿದ್ದಾರೆ ಎಂದು ಆಸಿಫ್ ಮತ್ತು ತಂಡ ಅವರಿಗೆ ಹಲ್ಲೆ ನಡೆಸಿರುವುದಾಗಿ ಮಹಿಳಾ ಠಾಣೆಗೆ ದೂರಲಾಗಿದೆ.
ಈ ಬಗ್ಗೆ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮೂವರನ್ನು ಬಂಧಿಸಿ, ತನಿಖೆ ನಡೆಸುತ್ತಿದ್ದಾರೆ.
Next Story