ಹಲಾಲ್- ಜಟ್ಕಾ ಹೆಸರಿನಲ್ಲಿ ಸಮಾಜ ಒಡೆಯುವ ಕುತಂತ್ರ: ಸಚಿವ ಈಶ್ವರಪ್ಪ

ಉಡುಪಿ : ಹಲಾಲ್- ಜಟ್ಕಾ ಕಟ್ ವಿವಾದವನ್ನು ಕೆಲವು ವ್ಯಕ್ತಿಗಳು ಹಾಗೂ ಪಕ್ಷದವರು ಸೃಷ್ಠಿ ಮಾಡಿದ್ದಾರೆ. ಇವರು ಈ ಆಟದಿಂದ ಕರ್ನಾಟಕ ರಾಜ್ಯದ ಜನ ಅನುಭವಿಸುತ್ತಿದ್ದಾರೆ. ಈ ಮೂಲಕ ಸಮಾಜವನ್ನು ಒಡೆಯುವ ಕುತಂತ್ರ ಮಾಡಲಾಗುತ್ತಿದೆ ಎಂದು ರಾಜ್ಯ ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ನಿಟ್ಟೆಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾರು ಯಾವ ರೀತಿ ಪೂಜೆ ಮಾಡುತ್ತಾರೆಯೋ ಮಾಡಿಕೊಳ್ಳಲಿ. ಯಾವ ಪದ್ಧತಿ ಇದೆಯೋ ಮಾಡಿಕೊಂಡು ಹೋಗಲಿ. ಮುಸ್ಲಿಮರು ಹಲಾಲ್ ಮೂಲಕ ಮಾಡುವುದಾದರೆ ಮಾಡಲಿ. ಹಿಂದೂಗಳು ಜಟ್ಕಾ ಬೇಕಾದರೆ ಮಾಡಿಕೊಂಡು ಹೋಗಲಿ. ಇದರಲ್ಲಿ ಗೊಂದಲ ಯಾಕೆ ಸೃಷ್ಠಿಸುತ್ತೀದಿರೆ. ನಮ್ಮ ಮನೆಗೆ ಬಂದು ಅದನ್ನೇ ಮಾಡಿ ಎಂದು ಮುಸ್ಲಿಮರು ಹೇಳುವುದಿಲ್ಲ. ಮುಸ್ಲಿಮರ ಬಳಿ ಹೋಗಿ ಹಿಂದೂಗಳೂ ಹೇಳುವುದಿಲ್ಲ. ಅವರವರ ಕೆಲಸ ಅವರು ಮಾಡಿಕೊಂಡು ಹೋಗುತ್ತಿದ್ದಾರೆ ಎಂದರು.
ಇದನ್ನೂ ಓದಿ... ಹಿಂದುತ್ವ ಸಂಘಟನೆಗಳ ಕರೆ ಬಹಿಷ್ಕರಿಸಿ ಮುಸ್ಲಿಮರ ಅಂಗಡಿಯಿಂದ ಮಾಂಸ ಖರೀದಿಸಿದ ದಲಿತರು, ರೈತರು ಮತ್ತು ಸಾಹಿತಿಗಳು
ಕಾಂಗ್ರೆಸ್ ಪಕ್ಷ ಮುಸ್ಲಿಮರನ್ನು ತೃಪ್ತಿ ಪಡಿಸುವ ಪ್ರಯತ್ನವನ್ನು ಮುಂದುವರೆಸುತ್ತಿದೆ. ಇದು ಒಳ್ಳೆಯದಲ್ಲ. ನಾವು ಹುಟ್ಟಿನಿಂದಲೂ ಹಿಂದುತ್ವವನ್ನೇ ಪ್ರತಿಪಾದಿಸಿಕೊಂಡು ಬಂದಿದ್ದೇವೆ. ಆದರೆ ನಾವು ಮುಸ್ಲಿಮರನ್ನು ವಿರೋಧ ಮಾಡುವುದಿಲ್ಲ. ದೇಶಕ್ಕೆ ಸ್ವಾತಂತ್ರ್ಯ ತರಲು ಹೋರಾಟ ಮಾಡಿದವರು ಮತ್ತು ರಾಷ್ಟ್ರ ಭಕ್ತ ಮುಸ್ಲಿಮರನ್ನು ನಾವು ಗೌರವಿಸುತ್ತೇವೆ. ಇಲ್ಲಿಯ ಅನ್ನ ತಿಂದು ಪಾಕಿಸ್ತಾನ ಪರ ಘೋಷಣೆ ಕೂಗುವವರನ್ನು ನಾವು ಬಿಡುವುದಿಲ್ಲ ಎಂದು ಅವರು ಹೇಳಿದರು.
ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಎಎನ್‌ಐ ತನಿಖೆ ಆರಂಭವಾಗಿದೆ. ಇದರಲ್ಲಿ ನ್ಯಾಯ ಸಿಗುವ ನಂಬಿಕೆ ನಮಗೆ ಇದೆ. ಬೆಲೆ ಏರಿಕೆ ನಿರಂತರವಾಗಿ ನಡೆಯುವ ಪ್ರಕ್ರಿಯೆ ಆಗಿದೆ. ಅದು ವಿದೇಶಿ ವಿನಿಮಯವನ್ನು ಅವಲಂಬಿಸಿರುತ್ತದೆ. ಹಾಗಾಗಿ ನಮ್ಮಲ್ಲಿ ಬೆಲೆ ಏರಿಕೆ ಆಗುತ್ತಿದೆ. ಅದಕ್ಕೆ ಬೇಕಾದ ಕ್ರಮ ಕೇಂದ್ರ ಸರಕಾರ ತೆಗೆದುಕೊಳ್ಳುತ್ತದೆ ಎಂದರು.
ಕಾಂಗ್ರೆಸ್‌ನವರು ಕೇವಲ ಘೋಷಣೆಯಲ್ಲಿದ್ದರೆ ನಾವು ಸಾಧನೆಯಲ್ಲಿದ್ದೇವೆ. ಹಾಗಾಗಿ ಪ್ರತಿ ಚುನಾವಣೆಯಲ್ಲಿ ನಾವು ಗೆದ್ದು ಬರುತ್ತಿದ್ದೇವೆ. ಪಕ್ಷದ ಮುಖಂಡರ ಗುರಿಯಂತೆ ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸ್ಥಾನ ಹಾಗೂ ಲೋಕಸಭೆಯಲ್ಲಿ ರಾಜ್ಯದ ಎಲ್ಲ 28 ಸ್ಥಾನಗಳಲ್ಲಿ ನಾವು ಗೆಲ್ಲುವ ಪ್ರಯತ್ನವನ್ನು ಮಾಡುತ್ತೇವೆ ಎಂದು ಅವರು ತಿಳಿಸಿದರು.







