ಉಪ್ಪಿನಂಗಡಿ ವಿಜಯ- ವಿಕ್ರಮ ಕಂಬಳಕ್ಕೆ ತೆರೆ; 125 ಜೊತೆ ಕೋಣಗಳು ಭಾಗಿ

ಉಪ್ಪಿನಂಗಡಿ: ಇಲ್ಲಿನ ಹಳೆಗೇಟು ಬಳಿಯ ನೇತ್ರಾವತಿ ನದಿ ಕಿನಾರೆಯಲ್ಲಿ ಎ.2ರಂದು ಆರಂಭಗೊಂಡ ವಿಜಯ- ವಿಕ್ರಮ ಜೋಡುಕರೆ ಕಂಬಳಕ್ಕೆ ಎ.3ರಂದು ಮಧ್ಯಾಹ್ನ ತೆರೆಬಿದ್ದಿದ್ದು, ಈ ಕಂಬಳ ಕೂಟದಲ್ಲಿ ಒಟ್ಟು 125 ಜೊತೆ ಕೋಣಗಳು ಭಾಗವಹಿಸಿವೆ. ಕನೆಹಲಗೆ, ಅಡ್ಡಹಲಗೆ, ಹಗ್ಗ ಹಿರಿಯ, ನೇಗಿಲು ಹಿರಿಯ, ಹಗ್ಗ ಕಿರಿಯ ಹಾಗೂ ನೇಗಿಲು ಕಿರಿಯ ವಿಭಾಗದಲ್ಲಿ ಸ್ಪರ್ಧೆ ನಡೆದಿದ್ದು, ಅದರ ಫಲಿತಾಂಶ ಈ ಕೆಳಗಿನಂತಿದೆ.
ಕನೆಹಲಗೆ: ಈ ವಿಭಾಗದಲ್ಲಿ 4 ಜೊತೆ ಕೋಣಗಳು ಭಾಗವಹಿಸಿದ್ದು, ಪ್ರಥಮ ಬಹುಮಾನವನ್ನು ವಾಮಂಜೂರು ತಿರುವೈಲುಗುತ್ತು ನವೀನ್ಚಂದ್ರ ಆಳ್ವ (ಹಲಗೆ ಮುಟ್ಟಿದವರು: ಬೈಂದೂರು ಭಾಸ್ಕರ ದೇವಾಡಿಗ), ದ್ವಿತೀಯ ಬಹುಮಾನವನ್ನು ಬಾರ್ಕೂರ್ ಶಾಂತರಾಮ್ ಶೆಟ್ಟಿ (ಹಲಗೆ ಮುಟ್ಟಿದವರು: ಮಂದಾರ್ತಿ ಶಿರೂರು ಗೋಪಾಲ ನಾಯ್ಕ್) ಪಡೆದುಕೊಂಡಿದ್ದಾರೆ.
ಅಡ್ಡ ಹಲಗೆ: ಈ ವಿಭಾಗದಲ್ಲಿ 8 ಜೊತೆ ಕೋಣಗಳು ಭಾಗವಹಿಸಿದ್ದು, ಪ್ರಥಮ ಬಹುಮಾನವನ್ನು ಪೆರಿಯಾವುಗುತ್ತು ಸತೀಶ್ ಗಟ್ಟಿಯಾಳ್ (ಹಲಗೆ ಮುಟ್ಟಿದವರು: ಮುಳಿಕಾರು ಕೆವುಡೇಲು ಅಣ್ಣಿ ದೇವಾಡಿಗ), ದ್ವಿತೀಯ ಬಹುಮಾನವನ್ನು ದ್ವಿತೀಯ: ಕೆರೆಕೋಡಿಗುತ್ತು ಬೀಯಪಾದೆ ಶೇಖರ್ ಪೂಜಾರಿ "ಎ" ( ಹಲಗೆ ಮುಟ್ಟಿದವರು: ಸಾವ್ಯ ಗಂಗಯ್ಯ ಪೂಜಾರಿ) ಪಡೆದುಕೊಂಡಿದ್ದಾರೆ.
ಹಗ್ಗ ಹಿರಿಯ: ಈ ವಿಭಾಗದಲ್ಲಿ 13 ಜೊತೆ ಕೋಣಗಳು ಭಾಗವಹಿಸಿದ್ದು, ಪ್ರಥಮ ಬಹುಮಾನವನ್ನು ಮಿಜಾರ್ ಪ್ರಸಾದ್ ನಿಲಯ ಶಕ್ತಿ ಪ್ರಸಾದ್ ಶೆಟ್ಟಿ "ಎ" (ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ), ದ್ವಿತೀಯ ಬಹುಮಾನವನ್ನು ಮಾಳ ಆನಂದ ನಿಲಯ ಶೇಖರ್ ಎ ಶೆಟ್ಟಿ (ಓಡಿಸಿದವರು: ಕೊಳಕೆ ಇರ್ವತ್ತೂರು ಆನಂದ್)ಪಡೆದುಕೊಂಡಿದ್ದಾರೆ.
ಹಗ್ಗ ಕಿರಿಯ: ಈ ವಿಭಾಗದಲ್ಲಿ 12 ಜೊತೆ ಕೋಣಗಳು ಭಾಗವಹಿಸಿದ್ದು, ಪ್ರಥಮ ಬಹುಮಾನವನ್ನು ಮೂಡಬಿದ್ರಿ ಹೊಸಬೆಟ್ಟು ಏರಿಮಾರು ಬರ್ಕೆ ಚಂದ್ರಹಾಸ ಸಾಧು ಸನಿಲ್ (ಓಡಿಸಿದವರು: ಬೈಂದೂರು ವಿವೇಕ್ ಪೂಜಾರಿ), ದ್ವಿತೀಯ ಬಹುಮಾನವನ್ನು ಚೊಕ್ಕಾಡಿ ಕಟಪಾಡಿ ದೈವೀಕ್ ಸಂತೋಷ್ ಶೆಟ್ಟಿ `ಎ' (ಓಡಿಸಿದವರು: ಬೈಂದೂರು ಮಂಜುನಾಥ್ ) ಪಡೆದುಕೊಂಡಿದ್ದಾರೆ.
ನೇಗಿಲು ಹಿರಿಯ: ಈ ವಿಭಾಗದಲ್ಲಿ 23 ಜೊತೆ ಕೋಣಗಳು ಭಾಗವಹಿಸಿದ್ದು, ಪ್ರಥಮ ಬಹುಮಾನವನ್ನು ಇರುವೈಲು ಪಾನಿಲ ಬಾಡ ಪೂಜಾರಿ "ಎ" (ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ), ದ್ವಿತೀಯ ಬಹುಮಾನವನ್ನು ಇರುವೈಲು ಪಾನಿಲ ಬಾಡ ಪೂಜಾರಿ "ಬಿ' (ಓಡಿಸಿದವರು: ಬೈಂದೂರು ವಿವೇಕ್ ಪೂಜಾರಿ) ಪಡೆದುಕೊಂಡಿದ್ದಾರೆ.
ನೇಗಿಲು ಕಿರಿಯ: ಈ ವಿಭಾಗದಲ್ಲಿ 65 ಜೊತೆ ಕೋಣಗಳು ಭಾಗವಹಿಸಿದ್ದು, ಪ್ರಥಮ ಬಹುಮಾನವನ್ನು ಮೊಗರುಗುತ್ತು ರಿಷಿ ಶೆಟ್ಟಿ `ಎ' (ಓಡಿಸಿದವರು: ಕೋರಿಂಜೆ ಅರುಣ್), ದ್ವಿತೀಯ ಬಹುಮಾನವನ್ನು ನಕ್ರೆ ಮಹೋಧರ ನಿವಾಸ ಇಶಾನಿ ದಯಾನಂದ ಭಂಡಾರಿ (ಕೋಣ ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ) ಪಡೆದುಕೊಂಡಿದ್ದಾರೆ.
ಕಂಬಳ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಅವರ ಸಾರಥ್ಯದಲ್ಲಿ ನಡೆದ ಈ ಕಂಬಳ ಕೂಟದಲ್ಲಿ ಶನಿವಾರ ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೇಂದ್ರದ ಮಾಜಿ ಸಚಿವ ಡಿ.ವಿ. ಸದಾನಂದ ಗೌಡ, ನಾನು ಮುಖ್ಯಮಂತ್ರಿಯಾಗಿದ್ದಾಗ ಕಂಬಳ ಕ್ರೀಡೆಗಾಗಿ ಬಜೆಟ್‍ನಲ್ಲಿ ಒಂದು ಕೋ.ರೂ.ವನ್ನು ಮೀಸಲಿಟ್ಟಿದ್ದೆ. ಆದರೆ ಕೆಲವೊಂದು ತೊಂದರೆಗಳಿಂದಾಗಿ ಅದು ಆಯೋಜಕರಿಗೆ ಸಿಕ್ಕಿಲ್ಲ. ಕಂಬಳ ತುಳು ಮಣ್ಣಿನ ಜನಪದ ಕ್ರೀಡೆಯಾಗಿದ್ದು, ಇದಕ್ಕೆ ಶಾಶ್ವತ ಅನುದಾನ ದೊರೆಯಬೇಕು. ಅದಕ್ಕಾಗಿ ಕ್ರೀಡೆ, ಕನ್ನಡ ಮತ್ತು ಸಂಸ್ಕøತಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಚಿವರು, ಕಂಬಳ ಸಮಿತಿಯ ಪದಾಧಿಕಾರಿಗಳು, ಕಂಬಳ ಆಯೋಜನೆ ಮಾಡುವವರನ್ನು ಒಟ್ಟಾಗಿ ಸೇರಿಸಿಕೊಂಡು ಸಭೆ ಕರೆದು ಅನುದಾನದ ವಿಷಯದಲ್ಲಿ ಶಾಶ್ವತ ಪರಿಹಾರ ಒದಗಿಸುತ್ತೇನೆ ಎಂದರು.
ಪುತ್ತೂರು ಶಾಸಕ ಸಂಜೀವ ಮಟಂದೂರು ಮಾತನಾಡಿ, ತುಳು ಸಂಸ್ಕೃತಿ, ಇಲ್ಲಿನ ಆಚಾರ-ವಿಚಾರಗಳು ಉಳಿಯಬೇಕಾದರೆ ಯುವ ಪೀಳಿಗೆಯ ಪೋತ್ಸಾಹವು ಅಗತ್ಯ. ನಗರೀಕರಣದಿಂದಾಗಿ ಹಳ್ಳಿಗಳಲ್ಲಿದ್ದ ಬೇಸಾಯ ಸಂಸ್ಕøತಿ ನಾಶವಾಗಿ ಊಟದ ಅಕ್ಕಿಗಾಗಿ ಇನ್ನೊಂದು ಜಿಲ್ಲೆಯನ್ನು ಅವಲಂಬಿಸುವ ಬದಲಾವಣೆ ಕರಾವಳಿ ಭಾಗದಲ್ಲಿ ಆಗಿದೆ. ಆದ್ದರಿಂದ ನಾವು ಇನ್ನಾದರೂ ಎಚ್ಚೆತ್ತುಕೊಂಡು ನಮ್ಮ ಮೂಲ ಪರಂಪರೆಯನ್ನು ಮತ್ತೆ ಉಳಿಸಿ ಬೆಳೆಸಬೇಕಾಗಿದೆ. ಹಾಗಾದಾಗ ಈ ಮಣ್ಣಿನೊಂದಿಗೆ ಬೆರೆತುಕೊಂಡ ಕಂಬಳದಂತಹ ಕ್ರೀಡೆಗಳು ಉಳಿದು, ಬೆಳೆಯಲು ಸಾಧ್ಯ. ಕಂಬಳಕ್ಕೆ ಸಹಾಯಧನ ಪಡೆಯಲು ಇರುವ ಕಟ್ಟುನಿಟ್ಟನ್ನು ಕಡಿಮೆಗೊಳಿಸಿ, ಸಹಾಯಧನ ಒದಗುವಂತೆ ಸರಕಾರದ ಮಟ್ಟದಲ್ಲಿ ಈ ಭಾಗದ ಶಾಸಕರು ಪ್ರಯತ್ನ ಮಾಡುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಸಂಜೀವ ಮಠಂದೂರು, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ,
ಮಾಜಿ ಸಚಿವ ಬಿ. ರಮಾನಾಥ ರೈ, ಮುಖ್ಯಮಂತ್ರಿಗಳ ಇ- ಆಡಳಿತ ಸಲಹೆಗಾರ ಬೇಳೂರು ಸುದರ್ಶನ್, ತುಳು ನಟ ಬೋಜರಾಜ್ ವಾಮಂಜೂರು, ಕಂಬಳ ಸಂರಕ್ಷಣೆ, ನಿರ್ವಹಣೆ, ತರಬೇತಿ ಅಕಾಡಮಿಯ ಸಂಚಾಲಕ ಪ್ರೊ. ಕೆ. ಗುಣಪಾಲ ಕಡಂಬ ಮಾತನಾಡಿ ಶುಭ ಹಾರೈಸಿದರು.
ಸಮಾಜ ಸೇವಾ ಸಾಧನೆಗಾಗಿ ಗುಜರಾತ್ ಬರೋಡಾದ ತುಳು ಸಂಘದ ಅಧ್ಯಕ್ಷ ಶಶಿಧರ ಶೆಟ್ಟಿ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು.
ವಿಜಯ- ವಿಕ್ರಮ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು ಸ್ವಾಗತಿಸಿದರು. ಗೌರವ ಸಲಹೆಗಾರ ನಿರಂಜನ್ ರೈ ಮಠಂತಬೆಟ್ಟು ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.







