ʼಪ್ರತ್ಯೇಕ ನಿಗಮ ಸ್ಥಾಪನೆ, ಶೇಂದಿಗೆ ಅನುಮತಿ ನೀಡಲು ಆಗ್ರಹ, ನ್ಯಾಯ ಸಿಗದಿದ್ದರೆ ಚುನಾವಣೆಯಲ್ಲಿ ತಕ್ಕ ಪಾಠʼ
ಶ್ರೀಪ್ರಣವಾನಂದ ಸ್ವಾಮೀಜಿ ಎಚ್ಚರಿಕೆ

ಉಡುಪಿ : ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ಪ್ರತ್ಯೇಕ ನಿಗಮ ಮಂಡಳಿ ಘೋಷಣೆ ಮಾಡಿ, 500ಕೋಟಿ ರೂ. ಅನುದಾನ ಮೀಸಲು ಇಡಬೇಕು. ಸಮುದಾಯದ ಕುಲಕಸುಬು ಶೇಂದಿ ಇಳಿಸಲು ರಾಜ್ಯಾಂದ್ಯಂತ ಸರಕಾರ ಅನುಮತಿ ನೀಡಬೇಕು. ಈ ವಿಚಾರದಲ್ಲಿ ಸಮುದಾಯಕ್ಕೆ ನ್ಯಾಯ ಸಿಗದಿದ್ದರೆ ಮುಂಬರುವ ಚುನಾವಣೆಯಲ್ಲಿ ಸಮುದಾಯ ತಕ್ಕ ಪಾಠ ಕಲಿಸಲಿದೆ ಎಂದು ಆರ್ಯ ಈಡಿಗ ರಾಷ್ಟ್ರೀಯ ಮಹಾಮಂಡಳಿಯ ಅಧ್ಯಕ್ಷ ಮತ್ತು ಶ್ರೀ ಶರಣಬಸವೇಶ್ವರ ಮಠಾಧಿಪತಿ ಶ್ರೀ ಡಾ.ಪ್ರಣವಾನಂದ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿ, ರಾಜ್ಯದಲ್ಲಿ ೨೬ ಒಳಪಂಗಡ, ೭೦ ಲಕ್ಷ ಜನಸಂಖ್ಯೆ ಇರುವ ಆರ್ಯ ಈಡಿಗ ಸಮುದಾಯಕ್ಕೆ ಸರಕಾರದಿಂದ ಯಾವುದೇ ನ್ಯಾಯ ದೊರಕಿಲ್ಲ. ಈ ಬಾರಿಯ ಬಜೆಟ್‌ನಲ್ಲಿ ಈಡಿಗ ಸೇರಿದಂತೆ ೧೮ ಜಾತಿಗಳನ್ನು ಸೇರಿಸಿ ನಿಗಮವೊಂದನ್ನು ಸರಕಾರ ಘೋಷಣೆ ಮಾಡಿದೆ. ಅದನ್ನು ನಾವು ಒಪ್ಪುದಿಲ್ಲ. ರಾಜ್ಯದ ಸಣ್ಣ ಸಣ್ಣ ಸಮುದಾಯ ಗಳಿಗೂ ನಿಗಮ ಮಂಡಳಿಗಳಿವೆ. ಆದರೆ ನಮ್ಮ ಸಮುದಾಯಕ್ಕೆ ಈವರೆಗೆ ನಿಗಮ ಮಂಡಳಿ ನೀಡಿಲ್ಲ ಎಂದರು.
ಮೂರ್ತೆದಾರರು ಬೀದಿಪಾಲು
ನಮ್ಮ ಸಮುದಾಯದ ಕುಲ ಕಸುಬು ಶೇಂದಿ ಇಳಿಸುವ ಕಾಯಕವನ್ನು ಹೆಚ್ಚಿನ ಜನ ಮಾಡುತ್ತಿದ್ದರು. ಆದರೆ ೨೦೦೪ರಲ್ಲಿ ಅವಿಭಜಿತ ದ.ಕ.ಜಿಲ್ಲೆ ಹೊರತು ಪಡಿಸಿ ಇಡೀ ರಾಜ್ಯದಲ್ಲಿ ಶೇಂದಿಯನ್ನು ನಿಷೇಧಿಸಲಾಯಿತು. ಇದರಿಂದ ೨೫ಸಾವಿರ ಮೂರ್ತೆದಾರರು ಕೆಲಸ ಇಲ್ಲದೆ ಬೀದಿ ಪಾಲಾದರು. ಈ ಮೂಲಕ ರಾಜ್ಯದಲ್ಲಿ ನಮ್ಮ ಕುಲಕುಸುಬನ್ನು ಕಸಿದುಕೊಳ್ಳಲಾಗಿದೆ ಎಂದು ಸ್ವಾಮೀಜಿ ಆರೋಪಿಸಿದರು.
ನಮ್ಮ ನೆರೆಯ ರಾಜ್ಯ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಶೇಂದಿ ಮಾರಾಟ ಮಾಡಲಾಗುತ್ತಿದೆ. ಆದುದರಿಂದ ರಾಜ್ಯದಲ್ಲಿ ಶೇಂದಿ ಇಳಿಸಲು ಅನುಮತಿ ನೀಡಬೇಕು. ಬೇರೆ ರಾಜ್ಯದಲ್ಲಿ ಶೇಂದಿ ನಿಷೇಧಿಸಿದರೂ ಪಿಂಚಣಿ ನೀಡಲಾಗುತ್ತಿದೆ. ಆದರೆ ರಾಜ್ಯದಲ್ಲಿ ಯಾವುದೇ ಪರ್ಯಾಯ ವ್ಯವಸ್ಥೆ ಮಾಡಿ ಕೊಟ್ಟಿಲ್ಲ. ಈ ಅನ್ಯಾಯವನ್ನು ಸಮುದಾಯ ಸಹಿಸುವುದಿಲ್ಲ ಎಂದರು.
ಉಡುಪಿ ಜಿಲ್ಲೆಯಲ್ಲಿ ೫೦೦ ಮಂದಿ ಮೂರ್ತೆದಾರರಿದ್ದಾರೆ. ಇವರೆಲ್ಲ ಕಷ್ಟಪಟ್ಟು ಶೇಂದಿ ತೆಗೆದರೂ ಅವರಿಗೆ ಸಿಗುವುದು ಕೇವಲ ೩೦ರೂ. ಮಾತ್ರ. ಆದುದರಿಂದ ಸರಕಾರ ಶೇಂದಿಗೆ ೧೦೦ರೂ. ನಿಗದಿ ಪಡಿಸಿ ಖರೀದಿ ಮಾಡಬೇಕು ಮತ್ತು ಪೂರೈಕೆ ಕೇಂದ್ರ ಸ್ಥಾಪಿಸಬೇಕು. ಮೂರ್ತೆದಾರರಿಗೆ ಪಿಂಚಣಿ ಮತ್ತು ಅವರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕು ಎಂದು ಅವರು ಆಗ್ರಹಿಸಿದರು.
ಮೀಸಲಾತಿಯಲ್ಲೂ ಅನ್ಯಾಯ
ನಮ್ಮ ಸಮುದಾಯ ೨ ಎ ಕೆಟಗರಿಯಲ್ಲಿ ಇದೆ. ಮುಂದೆ ಇದಕ್ಕೆ ರಾಜ್ಯದ ಪ್ರಮುಖ ಸಮುದಾಯವನ್ನು ಸೇರಿಸುವ ಪ್ರಯತ್ನ ನಡೆಯುತ್ತಿದೆ. ಇದರಿಂದ ನಮ್ಮ ಸಮಾಜಕ್ಕೆ ಅನ್ಯಾಯವಾಗಲಿದೆ. ಆದುದರಿಂದ ಈ ಕೆಟಗರಿಯಲ್ಲಿರುವ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಅವರು ಒತ್ತಾಯಿಸಿದರು.
ಪ್ರಸ್ತುತ ರಾಜ್ಯದಲ್ಲಿ ನಡೆಯುತ್ತಿರುವ ಕೋಮು ವಿಚಾರದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸ್ವಾಮೀಜಿ, ದೇಶದ ಸಂವಿಧಾನಕ್ಕೆ ನಾವೆಲ್ಲರೂ ತಲೆಭಾಗಬೇಕು. ಅದು ಒಂದೇ ನನ್ನ ನಿಲುವು ಅದು ಬಿಟ್ಟು ಬೇರೆ ಯಾವ ನಿಲುವು ಇಲ್ಲ ಎಂದು ತಿಳಿಸಿದರು. ಮುಂದೆ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಕೋಟ ಶ್ರೀನಿವಾಸ ಪೂಜಾರಿಗೆ ಉಪಮುಖ್ಯಮಂತ್ರಿ ಸ್ಥಾನವನ್ನು ನೀಡಬೇಕು. ಅದಕ್ಕೆ ಅವರು ಅತ್ಯಂತ ಯೋಗ್ಯರು. ಇದರಿಂದ ನಮ್ಮ ಸಮುದಾಯಕ್ಕೂ ನ್ಯಾಯ ಕೊಟ್ಟಂತೆ ಆಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಪ್ರವೀಣ್ ಪೂಜಾರಿ, ಸಂಜಯ್ ಪೂಜಾರಿ, ಮಹೇಶ್ ಪೂಜಾರಿ, ಶಿವ ಪೂಜಾರಿ ಉಪಸ್ಥಿತರಿದ್ದರು.
‘ನಮ್ಮದೇ ಪೂಜಾ ವಿಧಿವಿಧಾನ ನಡೆಸಿ’
ಪ್ರತಿಯೊಬ್ಬ ಬಿಲ್ಲವ, ಪೂಜಾರಿ ಈಡಿಗರ ಮನೆಗಳಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳು ಹೇಳಿದ ಪೂಜಾ ವಿಧಿವಿಧಾನಗಳು ನಡೆಯಬೇಕೆ ಹೊರತು ಬೇರೆಯವರು ಹೇಳಿದ ವಿಧಾನಗಳಲ್ಲ. ಅದ್ವೈತವನ್ನು ನಾರಾಯಣಗುರುಗಳು ಜೀವನದಲ್ಲಿ ಅಳವಡಿಸಿ ತೋರಿಸಿಕೊಟ್ಟಿದ್ದಾರೆ. ಕೆಲವರು ಅದ್ವೈತ ಹೇಳಿದರೂ ಅವರಲ್ಲಿ ಯಾವುದೇ ಅದ್ವೈತ ಕಂಡುಬಂದಿಲ್ಲ ಎಂದು ಶ್ರೀ ಡಾ.ಪ್ರಣವಾನಂದ ಸ್ವಾಮೀಜಿ ತಿಳಿಸಿದರು.
ನಮ್ಮ ಸಮುದಾಯವನ್ನು ಮುಗಿಸುವ ಹುನ್ನಾರ ಮಾಡಲಾಗುತ್ತಿದೆ. ಈ ಸಮುದಾಯ ಈಗ ಕಡು ಬಡತನದಲ್ಲಿದೆ. ಎಸ್.ಬಂಗಾರಪ್ಪ ಹೋದ ಬಳಿಕ ನಮ್ಮ ಸಮುದಾಯವನ್ನು ಸಂಪೂರ್ಣವಾಗಿ ಕಡೆಗಣಿಸಲಾಗುತ್ತಿದೆ. ಸರಕಾರ ನಮ್ಮ ಸಮುದಾಯವನ್ನು ಶೋಷಣೆ ಮಾಡುತ್ತಿದೆ ಎಂದು ಅವರು ಆರೋಪಿಸಿದರು.
‘ಕೋಮುಗಲಭೆಗಳಿಂದ ದೂರ ಇರಿ’
ಸಮುದಾಯದ ಯುವಕರು ಬಡವರ, ಶೋಷಿತರ, ಹಿಂದುಳಿದವರ ಸೇವೆ ಯಲ್ಲಿ ತೊಡಗಿಸಿಕೊಳ್ಳಬೇಕು. ಯಾವುದೇ ಕೋಮುಗಲಭೆ ಯಲ್ಲಿ ನಮ್ಮ ಯುವಕರು ಭಾಗಿಯಾಗಬಾರದು. ನಾವೆಲ್ಲ ಬ್ರಹ್ಮಶ್ರೀ ನಾರಾಯಣ ಗುರುಗಳ ಸಿದ್ಧಾಂತ ಒಪ್ಪಿಕೊಂಡವರು ಎಂದು ಶ್ರೀ ಡಾ.ಪ್ರಣವಾನಂದ ಸ್ವಾಮೀಜಿ ತಿಳಿಸಿದರು.
ಶಾಂತಿಯ ತೋಟ ಆಗಿರುವ ಕರ್ನಾಟಕ ಮುಂದೆಯೂ ಶಾಂತಿಯಿಂದ ಇರಬೇಕು. ಧರ್ಮಧರ್ಮಗಳ ಮಧ್ಯೆ ಯಾವತ್ತೂ ಘರ್ಷಣೆ ನಡೆಯಬಾರದು. ಯಾವುದೇ ವಿಚಾರವನ್ನು ಇನ್ನೊಂದು ಧರ್ಮಗಳ ಮೇಲೆ ಹೇರಬಾರದು. ಧರ್ಮಧರ್ಮಗಳ ಮಧ್ಯೆ ಹೊಂದಾಣಿಕೆ ಬರಬೇಕು. ಯುವ ಜನತೆ ಶಿಕ್ಷಣ ವ್ಯಾಪಾರಕ್ಕೆ ಹೆಚ್ಚು ಒತ್ತುಕೊಡಬೇಕು. ಯಾವುದೇ ಪಕ್ಷದಲ್ಲಿರುವ ಯುವ ಜನತೆ ಇನ್ನೊಂದು ಜನಾಂಗಕ್ಕೆ ನೋವು ಕೊಡುವ ಕೆಲಸ ಮಾಡಬಾರದು ಎಂದು ಅವರು ಮನವಿ ಮಾಡಿದರು.