ಬೆಲೆ ಏರಿಕೆ ವಿರುದ್ಧ ಹೋರಾಟ ನಿಲ್ಲುವುದಿಲ್ಲ: ಡಿ.ಕೆ.ಶಿವಕುಮಾರ್

ಬೆಂಗಳೂರು, ಎ.3: ಕೇಂದ್ರ ಸರಕಾರ ಬೆಲೆ ಏರಿಕೆ ಮೂಲಕ ಎಲ್ಲ ವರ್ಗದ ಜನರ ಮೇಲೆ ಗದಾಪ್ರಹಾರ ಮಾಡುತ್ತಿದ್ದು, ಇದರ ವಿರುದ್ಧ ಕಾಂಗ್ರೆಸ್ ಹೋರಾಟ ಮುಂದುವರೆಸಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.
ರವಿವಾರ ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಾವು ಕೇವಲ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ವಿಚಾರವಾಗಿ ಮಾತನಾಡುತ್ತಿದ್ದು, ಕಳೆದ 11 ದಿನಗಳಿಂದ ಇವುಗಳ ಬೆಲೆ ಏರುತ್ತಲೇ ಇದೆ. ಚುನಾವಣೆ ಫಲಿತಾಂಶದ ಬಳಿಕ ಇದು ನಿರಂತರವಾಗಿದೆ ಎಂದು ಟೀಕಿಸಿದರು.
ಜನಜಾಗೃತಿ ಮೂಡಿಸಿ ಈ ಸರಕಾರವನ್ನು ಕಿತ್ತೊಗೆಯುವವರೆಗೂ ನಾವು ನಮ್ಮ ಹೋರಾಟವನ್ನು ಮುಂದುವರೆಸುತ್ತೇವೆ. ಅವೈಜ್ಞಾನಿಕವಾಗಿ ಕೇಂದ್ರ ಸರಕಾರ ಬೆಲೆ ಹೆಚ್ಚಳ ಮಾಡಿದ್ದು, ಇದು ಇಳಿಯಲೇಬೇಕಿದೆ. ದಿನನಿತ್ಯದ ವಸ್ತುಗಳು ಹಾಗೂ ನಿರ್ಮಾಣ ಸಾಮಗ್ರಿಗಳ ಬೆಲೆ ಸಹ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.
ಕೇಂದ್ರ ಸರಕಾರಕ್ಕೆ ಯಾವುದೇ ರೀತಿಯಲ್ಲಿಯೂ ಜನಪರ ಕಾಳಜಿ ಇಲ್ಲ. ನಿರಂತರವಾಗಿ ಬೆಲೆ ಹೆಚ್ಚಳ ಮಾಡುತ್ತಲೇ ಸಾಗಿದೆ. ಜನರ ಸಮಸ್ಯೆ ಬಗ್ಗೆ ಕಾಳಜಿ ಇಲ್ಲದ ಇಂತಹ ಸರಕಾರ ಅಸ್ತಿತ್ವದಲ್ಲಿದ್ದು ಏನು ಪ್ರಯೋಜನ ಎಂದು ಪ್ರಶ್ನಿಸಿದ ಅವರು, ಅತ್ಯಂತ ಪ್ರಮುಖವಾಗಿ ತೈಲಬೆಲೆ ಹಾಗೂ ರಾಸಾಯನಿಕ ಗೊಬ್ಬರದ ಬೆಲೆ ಇಳಿಕೆ ಆಗಲೇಬೇಕಿದೆ. ಇದನ್ನು ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ ಹಾಗೂ ಹೋರಾಟದ ರೂಪುರೇಷೆಯನ್ನು ನಡೆಸುತ್ತಿದ್ದೇವೆ ಎಂದು ಹೇಳಿದರು.







