ಬಿಜೆಪಿಗೆ ಮತ್ತಷ್ಟು ಶಾಸಕರ ವಲಸೆ : ಸದಾನಂದ ಗೌಡ

ಮಂಗಳೂರು : ಕಾಂಗ್ರೆಸ್, ಜೆಡಿಎಸ್ ಪಕ್ಷದ ಶಾಸಕರು, ಮುಖಂಡರು ಬಿಜೆಪಿಯತ್ತ ವಲಸೆ ಬರಲು ನಿರ್ಧರಿಸಿದ್ದು, ಸೂಕ್ತ ಸಂದರ್ಭ ಅವರು ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ, ಸಂಸದ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.
ನಗರದಲ್ಲಿ ರವಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಜೆಡಿಎಸ್ ತನ್ನ ಅಸ್ತಿತ್ವ ಕಳೆದುಕೊಳ್ಳುವ ಈ ಹಂತದಲ್ಲಿದೆ. ಅಲ್ಲಿಂದಲೇ ಬಹಳಷ್ಟು ಮಂದಿ ಬಿಜೆಪಿ ಕಡೆ ಒಲವು ತೋರಿಸುತ್ತಿದ್ದಾರೆ. ಈ ಬಗ್ಗೆ ಬಿಜೆಪಿಯಲ್ಲಿ ಕಾರ್ಯತಂತ್ರ ರೂಪಿಸಲಾಗಿದೆ. ಹಳೆ ಮೈಸೂರು ಭಾಗದಲ್ಲಿ ಬಿಜೆಪಿಗೆ ಒಂದಷ್ಟು ಹೊಸ ಮುಖ ಪರಿಚಯಿಸಲಾಗುತ್ತದೆ. ಅಲ್ಲಿ ಕನಿಷ್ಟ 25 ಸ್ಥಾನಗಳು ಬಿಜೆಪಿಯ ಪಾಲಾಗಲಿದೆ ಎಂದರು.
ಮುಂದಿನ ಅವಧಿಯಲ್ಲೂ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೇರಲಿದೆ. ಅದಕ್ಕಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯದ ನಾಯಕರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಬಿಜೆಪಿ ಮತ್ತೆ ಅಧಿಕಾರಕ್ಕೇರಲು ರಾಜಕೀಯ ಕಾರ್ಯತಂತ್ರ ಅತ್ಯಗತ್ಯ. ಈ ಚುನಾವಣೆಯಲ್ಲಿ ರಾಜ್ಯದಲ್ಲಿ 150ಕ್ಕೂ ಅಧಿಕ ಸ್ಥಾನ ಗೆಲ್ಲುವ ಗುರಿ ಹಾಕಿಕೊಳ್ಳಲಾಗಿದೆ. ಅದಕ್ಕಾಗಿಯೇ ಪಕ್ಷದ ಕಾರ್ಯಕಾರಿಣಿಯಲ್ಲಿ ಗಂಭೀರ ಚರ್ಚೆ ನಡೆಸಲಾಗಿದೆ ಎಂದರು.





