ವಿಶ್ವಸಂಸ್ಥೆಯ ಮೂಲಕ ಕೊವ್ಯಾಕ್ಸಿನ್ ಪೂರೈಕೆ ರದ್ದುಪಡಿಸಿದ ಡಬ್ಲ್ಯುಎಚ್ಒ

ಹೊಸದಿಲ್ಲಿ, ಎ. 3: ಭಾರತದ ಭಾರತ್ ಬಯೋಟೆಕ್ ಉತ್ಪಾದಿಸುವ ಕೋವಿಡ್ ಲಸಿಕೆ ಕೋವ್ಯಾಕ್ಸಿನ್ ಅನ್ನು ವಿಶ್ವಂಸ್ಥೆಯ ಏಜೆನ್ಸಿ ಮೂಲಕ ಪೂರೈಕೆ ಮಾಡುವುದನ್ನು ನಿಲ್ಲಿಸಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಉತ್ಪಾದಕರ ಘಟಕಗಳ ಮೇಲ್ದರ್ಜೀಕರಣಕ್ಕೆ ಅವಕಾಶ ನೀಡಲು ಹಾಗೂ ಪರಿಶೀಲನೆಯ ಸಂದರ್ಭ ಪತ್ತೆಯಾದ ನ್ಯೂನತೆ ಪರಿಹರಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅದು ಹೇಳಿದೆ.
ಭಾರತ್ ಬಯೋಟೆಕ್ ಉತ್ಪಾದಿಸಿದ ಕೊವ್ಯಾಕ್ಸಿನ್ ಅನ್ನು ವಿಶ್ವಸಂಸ್ಥೆಯ ಖರೀದಿ ಏಜೆನ್ಸಿಗಳ ಮೂಲಕ ಪೂರೈಕೆ ರದ್ದುಗೊಳಿಸಿರುವುದನ್ನು ಡಬ್ಲುಎಚ್ಒ ದೃಢಪಡಿಸಿದೆ. ಲಸಿಕೆ ಪರಿಣಾಮಕಾರಿ ಹಾಗೂ ಸುರಕ್ಷೆಯ ಬಗ್ಗೆ ಯಾವುದೇ ಆತಂಕ ಇಲ್ಲ. ಆದರೆ, ರಫ್ತಿಗೆ ಮಾಡುವ ಉತ್ಪಾದನೆಯನ್ನು ರದ್ದುಗೊಳಿಸುವ ಪರಿಣಾಮ ಕೊವ್ಯಾಕ್ಸಿನ್ ಪೂರೈಕೆಗೆ ಅಡ್ಡಿ ಉಂಟಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ತುರ್ತು ಬಳಕೆಗೆ ನಿಗದಿಪಡಿಸಲಾದ ಅವಧಿಯ ನಂತರ ಮಾರ್ಚ್ 14ರಿಂದ 22ರ ವರೆಗೆ ನಡೆಸಲಾದ ಪರೀಕ್ಷೆಯ ಫಲಿತಾಂಶದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಲ್ಲದೆ, ರಫ್ತಿಗೆ ಕೋವ್ಯಾಕ್ಸಿನ್ ಉತ್ಪಾದನೆ ರದ್ದುಪಡಿಸಿದ ತನ್ನ ಬದ್ಧತೆಯನ್ನು ಲಸಿಕೆ ಉತ್ಪಾದಕರು ಸೂಚಿಸಿದ್ದಾರೆ.
‘‘ಕೋವಿಡ್ ಲಸಿಕೆ ಕೊವ್ಯಾಕ್ಸಿನ್ನ ಪರಿಣಾಮಕಾರಿತ್ವ ಹಾಗೂ ಸುರಕ್ಷೆಯ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ’’ ಎಂದು ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ರವಿವಾರ ಹೇಳಿದೆ. ‘‘ಲಕ್ಷಾಂತರ ಜನರು ಕೊವ್ಯಾಕ್ಸಿನ್ ಲಸಿಕೆ ಸ್ವೀಕರಿಸಿದ್ದಾರೆ. ಲಸಿಕೆಯ ಸುರಕ್ಷತೆ ಹಾಗೂ ಪರಿಣಾಮಕಾರಿತ್ವದ ಬಗ್ಗೆ ಯಾವುದೇ ರೀತಿಯ ತೊಂದರೆ ಇಲ್ಲದೇ ಇರುವುದರಿಂದ ನೀಡಲಾದ ಲಸಿಕೆ ಪ್ರಮಾಣ ಪತ್ರ ಈಗಲೂ ಮೌಲ್ಯಯುತ ಎಂದು ಭಾರತ್ ಬಯೋಟೆಕ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.





