ಅನಗತ್ಯ ವಿಚಾರಕ್ಕೆ ಸಮಾಜದಲ್ಲಿ ಅಶಾಂತಿ ಸೃಷ್ಟಿ: ಸಿದ್ದರಾಮಯ್ಯ

ಬೆಂಗಳೂರು, ಎ.3: ಯಾವುದೇ ರೀತಿಯ ಧರ್ಮದ ಆಹಾರ ಪದ್ಧತಿಗಳನ್ನು ವಿರೋಧ ಮಾಡುವ ಕ್ರಮ ಸರಿಯಲ್ಲ ಎಂದು ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ರವಿವಾರ ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲಾಲ್ ಎನ್ನುವುದು ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಇದು ಒಂದು ವರ್ಗದ ನಂಬಿಕೆ ಮತ್ತು ಆರೋಗ್ಯಕ್ಕೂ ಒಳ್ಳೆಯದು.
ಅದೇ ರೀತಿನ ನಾವು ಸಹ ಹಿಂದೂಗಳು ಜಾತ್ರೆ, ಹಬ್ಬಗಳ ದಿನದಂದು ಪ್ರಾಣಿಗಳನ್ನು ಬಲಿ ನೀಡುತ್ತೇವೆ. ಇದು ನಮ್ಮ ಪದ್ಧತಿ. ಅನಗತ್ಯ ವಿಚಾರಕ್ಕೆ ಶಾಂತಿ ಹಾಳು ಮಾಡುವ ಕೆಲಸ ಮಾಡಬೇಡಿ. ಜನಗರಿಗೆ ಅಗತ್ಯವಿರುವ ವಿಚಾರಗಳ ಬಗ್ಗೆ ಚರ್ಚೆ ಮಾಡಿ. ಮನುಷ್ಯನ ಬದುಕಿಗೆ ಸಂಬಂಧವಿಲ್ಲದ ವಿಷಯಗಳನ್ನು ಪ್ರಸ್ತಾಪಿಸಿ, ಸಮಾಜದಲ್ಲಿ ಅಶಾಂತಿ ಸೃಷ್ಟಿ ಮಾಡುವುದು ಏಕೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಎಂದರು.
ಜನರಿಗೆ ಬೇಕಾಗಿರುವುದನ್ನು ಅವರು ಆಯ್ಕೆ ಮಾಡಿಕೊಳ್ಳುತ್ತಾರೆ. ಇದನ್ನು ವಿರೋಧಿಸುವ ಹಕ್ಕು ಯಾರಿಗೂ ಇಲ್ಲ ಎಂದ ಅವರು, ಅಗತ್ಯ ವಸ್ತುಗಳ ಬೆಲೆ ಏರಿಕೆ, ಇನ್ನಿತರೆ ಸಮಸ್ಯೆಗಳನ್ನು ಮರೆಮಾಚುವ ಸಲುವಾಗಿ ಕೋಮುವಾದ, ಅಲ್ಪಸಂಖ್ಯಾತರ ವಿಷಯಗಳನ್ನು ಎಳೆದು ತರಲಾಗುತ್ತಿದೆ ಎಂದು ಸಿದ್ದರಾಮಯ್ಯ ನುಡಿದರು.





