ಸ್ಟನ್ನಿಂಗ್ ವಿಧಾನ ಪಾಲಿಸುವಂತೆ ಬಿಬಿಎಂಪಿಗೆ ಪತ್ರ

ಬೆಂಗಳೂರು, ಎ.3: ನಗರದ ಅಧಿಕೃತ ಪ್ರಾಣಿ ವಧಾಗಾರಗಳಲ್ಲಿ ಹಾಗೂ ಕೋಳಿ ಅಂಗಡಿಗಳಲ್ಲಿ ಸ್ಟನ್ನಿಂಗ್(ಮೂರ್ಛೆ ತಪ್ಪಿಸುವ) ವಿಧಾನವನ್ನು ಪಾಲಿಸುವಂತೆ ಬೆಂಗಳೂರು ನಗರ ಜಿಲ್ಲೆಯ ಪಶುಪಾಲನೆ ಮತ್ತು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರು ಬಿಬಿಎಂಪಿಯ ಪಶುಪಾಲನೆಯ ಜಂಟಿ ನಿರ್ದೇಶಕರಿಗೆ ಪತ್ರವನ್ನು ಬರೆದಿದ್ದಾರೆ.
ಪತ್ರದಲ್ಲಿ 2001ರ ಮಾ.26ರಂದು ರೂಪಿಸಿದ್ದ ಪಿಸಿಎ(ಸ್ಲ್ಯಾಟರ್ ಹೌಸ್) ರೂಲ್ಸ್ 2001 ಸೆಕ್ಷನ್(6) ಸಬ್ ಸೆಕ್ಷನ್(4)ಅನ್ನು ಪತ್ರದಲ್ಲಿ ಉಲ್ಲೇಖಿಸಿದ್ದು, ಈ ನಿಯಮಗಳು ಪಾಲನೆಯಾಗುತ್ತಿಲ್ಲ ಎಂದು ಸಾರ್ವಜನಿಕರಿಂದ ದೂರುಗಳು ಕೇಳಿಬಂದಿವೆ. ಹಾಗಾಗಿ ಪ್ರಾಣಿಗಳ ವಧೆ ಮಾಡುವ ಮುನ್ನ ಕಡ್ಡಾಯವಾಗಿ ಸ್ಟನ್ನಿಂಗ್ ಮಾಡಿ ಪ್ರಜ್ಞೆ ತಪ್ಪಿಸಿ ವಧೆ ಮಾಡಲು ಕ್ರಮವಹಿಸುವಂತೆ ಎಲ್ಲರಿಗೂ ಸೂಚಿಸಬೇಕು ಎಂದು ಪತ್ರದಲ್ಲಿ ಬರೆಯಲಾಗಿದೆ.
ಕೋಳಿ ಅಂಗಡಿಗಳ ಪರವಾನಿಗೆ ನೀಡುವಾಗ ಸ್ಟನ್ನಿಂಗ್ ವಿಧಾನವನ್ನು ಪರಿಶೀಲಿಸಿ ಪರವಾನಿಗೆ ನೀಡಬೇಕು ಹಾಗೂ ತೆಗೆದುಕೊಂಡ ಕ್ರಮದ ಬಗ್ಗೆ ಬೆಂಗಳೂರು ನಗರದ ಪಶುಪಾಲನೆಯ ಜಂಟಿ ನಿರ್ದೇಶಕರ ಕಚೇರಿಗೆ ವರದಿಯನ್ನು ನೀಡುವಂತೆ ಪತ್ರದಲ್ಲಿ ತಿಳಿಸಿದ್ದಾರೆ.
ಸ್ಟನ್ನಿಂಗ್ ನಿಯಮ ಕಡ್ಡಾಯ ಎಂಬ ಯಾವುದೇ ಆದೇಶವನ್ನು ಇಲಾಖೆಯಿಂದ ಹೊರಡಿಸಿಲ್ಲ. ಹಲಾಲ್ ಕಟ್ ಮಾಡಬಾರದು ಎಂದು ಪತ್ರ ಬರೆದಿದ್ದಾರೆ ಅಷ್ಟೇ. ಪತ್ರದ ಬಗ್ಗೆ ನಾನು ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಶೀಲಿಸುತ್ತೇನೆ.
-ಪ್ರಭು ಚೌಹಾಣ್, ಸಚಿವ, ಪಶು ಸಂಗೋಪನಾ ಇಲಾಖೆ







