ಪೊಲೀಸ್ ಕಲ್ಯಾಣ ನಿಧಿಗೆ 5 ಕೋಟಿ ರೂಪಾಯಿ: ಮುಖ್ಯಮಂತ್ರಿ ಬೊಮ್ಮಾಯಿ

ಬೆಂಗಳೂರು, ಎ.3: ಪೊಲೀಸ್ ಕಲ್ಯಾಣ ನಿಧಿಗೆ 5 ಕೋಟಿ ರೂ.ಗಳನ್ನು ಮಂಜೂರು ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.
ನಗರದ ಕೋರಮಂಗಲದ ಪೊಲೀಸ್ ಮೈದಾನದಲ್ಲಿ ಶನಿವಾರ ನಡೆದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪೊಲೀಸರಿಗಾಗಿ ರಾಜ್ಯ ಸರಕಾರ ಹಲವು ಕಲ್ಯಾಣ ಯೋಜನೆಗಳನ್ನು ಜಾರಿ ಮಾಡಿದೆ. ಆರೋಗ್ಯ ಸೇವೆ, ಬಂದೋಬಸ್ತ್ ಗೆ ಭತ್ತೆ, ಭಡ್ತಿಗಳನ್ನೂ ನೀಡಿದೆ. ಪೊಲೀಸರಿಗೆ ವಸತಿಗಾಗಿ 10 ಸಾವಿರ ಮನೆಗಳ ನಿರ್ಮಾಣಕ್ಕೂ ಅನುದಾನ ನೀಡಲಾಗಿದೆ. ಪೊಲೀಸರ ಆರೋಗ್ಯಕ್ಕಾಗಿ 100 ಕೋಟಿ ರೂ.ಗಳನ್ನು ಮೀಸಲಿರಿಸಿದೆ ಎಂದು ಹೇಳಿದರು.
ಅಪರಾಧ ಮತ್ತು ಅಪರಾಧಿಗಳೊಂದಿಗೆ ರಾಜಿ ಇಲ್ಲದೆ ಕರ್ತವ್ಯ ನಿರ್ವಹಿಸಿ ಎಂದು ಪೊಲೀಸರಿಗೆ ಕರೆ ನೀಡಿದ ಅವರು, ಪೊಲೀಸರು ಯಾವುದೇ ಮುಲಾಜಿಲ್ಲದೆ ಕೆಲಸ ಮಾಡಿದರೆ ಅಪರಾಧಗಳು ತನ್ನಿಂದ ತಾನೇ ಕಡಿಮೆಯಾಗುತ್ತದೆ. ಅಲ್ಲದೆ, ಪೊಲೀಸರು ನಿಷ್ಠೆ ಮತ್ತು ದಕ್ಷತೆಯಿಂದ ಕೆಲಸ ಮಾಡಿದರೆ ಪ್ರಗತಿಪರ ಸಮಾಜ ನಿರ್ಮಾಣದ ಜತೆಗೆ ಮಹಿಳೆಯರಿಗೂ ಸುರಕ್ಷಿತ ವಾತಾವರಣ ದೊರೆಯಲಿದೆ ಎಂದು ತಿಳಿಸಿದರು.
ಶಿಸ್ತು, ದಕ್ಷತೆ, ನಿಷ್ಠೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಕರ್ನಾಟಕ ಪೊಲೀಸ್ ಉನ್ನತ ಸ್ಥಾನದಲ್ಲಿದೆ. ಚುನಾವಣಾ ಸಂದರ್ಭಗಳಲ್ಲಿ ಬೇರೆ ರಾಜ್ಯಗಳಿಂದ ಪೊಲೀಸ್ ತುಕಡಿ ಕರೆಸುವಾಗ ಕರ್ನಾಟಕಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಸಮಾಜದ ಸ್ವಾಸ್ಥ್ಯ ಮತ್ತು ಶಾಂತಿ ಕಾಪಾಡಲು ಪೊಲೀಸರಿಗೆ ಅಂತಃಕರಣ ಬಹಳ ಮುಖ್ಯ, ಪೊಲೀಸರು ನ್ಯಾಯ ನಿಷ್ಠೂರವಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
ಅಪರಾಧಿಗಳ ಶೋಧನೆಯಲ್ಲಿ ಫೋರೆನ್ಸಿಕ್ ಪ್ರಯೋಗಾಲಯ ಮಹತ್ವದ ಪಾತ್ರ ವಹಿಸುತ್ತದೆ. ನ್ಯಾಯಾಲಯಗಳು ಫೋರೆನ್ಸಿಕ್ ವರದಿಗೆ ಮಹತ್ವ ನೀಡುತ್ತದೆ. ಹೀಗಾಗಿ, ಬೆಂಗಳೂರಿನಲ್ಲಿ ನ್ಯಾರ್ಕೊಟಿಕ್ಸ್ ಸೈಬರ್ ಹಾಗೂ ಫೋರೆನ್ಸಿಕ್ ಲ್ಯಾಬ್‍ವುಳ್ಳ ಠಾಣೆಗಳನ್ನು ತೆರೆಯಲಾಗಿದೆ. ಹುಬ್ಬಳ್ಳಿ, ಬಳ್ಳಾರಿಗಳಲ್ಲಿಯೂ ಫೋರೆನ್ಸಿಕ್ ಠಾಣೆಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಶಿವಮೊಗ್ಗ ಸೇರಿದಂತೆ ಇನ್ನಿತರ ಕಡೆಯೂ ಫೋರೆನ್ಸಿಕ್ ಪ್ರಯೋಗಾಲಯಗಳನ್ನು ಮೇಲ್ದೆರ್ಜೆಗೇರಿಸಲು ಅವರು ಸೂಚನೆ ನೀಡಿದರು. ರಾಜ್ಯದ ಇಂಟಲಿಜೆನ್ಸ್‍ನ್ನು ಮತ್ತಷ್ಟು ಸದೃಢಗೊಳಿಸಲು ಕ್ರಮವಹಿಸಲಾಗಿದೆ ಎಂದರು.
ಪೊಲೀಸ್ ಆಧುನೀಕರಣಕ್ಕೆ ಕೇಂದ್ರ ಸರಕಾರ ನೀಡುವ ಅನುದಾನವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲಾಗಿದೆ. ಸೈಬರ್ ಮತ್ತು ನ್ಯಾರ್ಕೊಟಿಕ್ಸ್ ತಡೆಯಲು ದೊಡ್ಡ ಪ್ರಮಾಣದಲ್ಲಿ ಪೊಲೀಸ್ ಇಲಾಖೆಯನ್ನು ಆಧುನೀಕರಣ ಮಾಡುವ ಅಗತ್ಯವಿದ್ದು, ಇದಕ್ಕಾಗಿ ಸಿಬ್ಬಂದಿಗಳ ತರಬೇತಿ ಮತ್ತು ಆಧುನಿಕ ತಂತ್ರಜ್ಞಾನ ಬಳಕೆಗೂ ಒತ್ತು ನೀಡಲಾಗಿದೆ ಎಂದು ಹೇಳಿದರು.
ಮಾದಕವಸ್ತು ಮಾರಾಟದ ವಿರುದ್ಧವೂ ಸಮರ ಸಾರಿ ದೊಡ್ಡ ಪ್ರಮಾಣದಲ್ಲಿ ಮಾದಕವಸ್ತುಗಳನ್ನುವಶಪಡಿಸಿಕೊಳ್ಳಲಾಗಿದೆ. ಡ್ರಗ್ಸ್ ವಿರುದ್ಧದ ಸಮರ ನಿರಂತರವಾಗಿ ನಡೆಯಬೇಕು. ಶಾಲಾ-ಕಾಲೇಜು ಯುವಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ರೂಪಿಸಬೇಕು. ಸೈಬರ್ ಅಪರಾಧವನ್ನು ಕಂಡು ಹಿಡಿಯಲು ಪೊಲೀಸರಿಗೆ ವಿಶೇಷ ತರಬೇತಿಯನ್ನೂ ನೀಡಲಾಗುತ್ತಿದೆ ಎಂದು ಅವರು ಹೇಳಿದರು.







