ಅವರ ಬಳಿ ಹೋದವರನ್ನು ಪ್ರಶ್ನಿಸಿ
ಮಾನ್ಯರೇ,
ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರನ್ನು ಅಲ್ಲಿನ ಕೆಲವು ಮುಸ್ಲಿಮರು ಭೇಟಿಯಾಗಿದ್ದು ಚರ್ಚೆಯಾಗುತ್ತಿದೆ. ಅವರು ಆರೆಸ್ಸೆಸ್ ವಿಚಾರಧಾರೆಯ, ಬಿಜೆಪಿ ಬೆಂಬಲಿಗ ಹಾಗೂ ಮುಸ್ಲಿಮರ ಬಗ್ಗೆ ಅಸಹನೆ ವ್ಯಕ್ತಪಡಿಸುವ ಸ್ವಾಮೀಜಿ. ಇದನ್ನು ಅವರೇ ತಮ್ಮ ಮಾತು ಹಾಗೂ ವರ್ತನೆಗಳ ಮೂಲಕ ಹಲವು ಬಾರಿ ಸಾಬೀತುಪಡಿಸಿದ್ದಾರೆ. ಅವರಿಗೆ ತಮ್ಮ ಧೋರಣೆಯ ಬಗ್ಗೆ ಯಾವುದೇ ಕೀಳರಿಮೆ ಇಲ್ಲ. ತಾವು ನಂಬುವ ಸಿದ್ಧಾಂತದ ಬಗ್ಗೆ ಇಂತಹ ಸ್ಪಷ್ಟತೆ ಎಲ್ಲರಿಗೂ ಬೇಕು. ಆದರೆ ಅಂತಹ ಸ್ವಾಮೀಜಿಯ ಕಾಲ ಬುಡಕ್ಕೆ ಹೋಗಿ ಸಿಎಂಗೆ, ಗೃಹ ಸಚಿವರಿಗೆ, ಜಿಲ್ಲಾ ಎಸ್ಪಿಗೆ ಸಲ್ಲಿಸಬೇಕಾದ ಮನವಿಯನ್ನು ಅವರಿಗೆ ಸಲ್ಲಿಸಿ ದಯವಿಟ್ಟು ಶಾಂತಿ ಸೌಹಾರ್ದದ ಭಿಕ್ಷೆ ದಯಪಾಲಿಸಿ ಎಂದು ಗೋಗರೆದಿದ್ದಾರಲ್ಲ ಈ ಕೆಲವರು, ಇವರನ್ನು ಮುಸ್ಲಿಮ್ ಸಮುದಾಯ ಪ್ರಶ್ನಿಸಬೇಕಾಗಿದೆ. ಯಾರನ್ನು ಕೇಳಿ ನೀವು ಅಲ್ಲಿಗೆ ಹೋಗಿದ್ದೀರಿ? ಅವರಲ್ಲಿ ಹೋಗಿ ಅವರಿಂದ ‘‘ನಿಮ್ಮದೇ ತಪ್ಪು, ಅದರಿಂದ ನಾವು ಸಾಕಷ್ಟು ನೊಂದಿದ್ದೇವೆ, ಆ ಅಸಮಾಧಾನ ಈಗ ಸ್ಫೋಟವಾಗಿದೆ’’ ಎಂದೆಲ್ಲ ಮಂಗಳಾರತಿ ಮಾಡಿಸಿಕೊಂಡು ಕೊನೆಗೆ ಕಾದು ನಿಂತು ಅವರು ಕೊಟ್ಟ ಕಿತ್ತಳೆ ಹಣ್ಣಿಗೆ ಕೈ ಚಾಚಿ ತೆಗೆದುಕೊಂಡು ಬಂದರಲ್ಲ, ಅವರನ್ನು ಸಮಸ್ತ ಶಾಂತಿ, ಸೌಹಾರ್ದ ಪ್ರೇಮಿಗಳು ಕೇಳಬೇಕಾಗಿದೆ. ನಿಮಗೆ ಅಲ್ಲಿಗೆ ಹೋಗಲು ಹೇಳಿದ್ದು ಯಾರು ಸ್ವಾಮಿ?
ಸಂಘ ಪರಿವಾರದ ನಾಯಕರ ಹಾಗೆ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವ ಆ ಸ್ವಾಮೀಜಿಯ ನಿಲುವನ್ನು ಖಂಡಿಸಬೇಕಾಗಿತ್ತು. ‘‘ಇಂತಹ ಹೇಳಿಕೆ ನೀಡುವುದು ನಿಮ್ಮ ಸ್ಥಾನಕ್ಕೆ ಘನತೆ ತರುವ ವಿಷಯವಲ್ಲ ಸ್ವಾಮೀಜಿ’’ ಎಂದು ನಿಷ್ಠುರವಾಗಿ ಹೇಳಬೇಕಿತ್ತು. ಅದನ್ನು ಬಿಟ್ಟು ಅವರಲ್ಲೇ ಹೋಗಿ ಏನಾದರೂ ಮಾಡಿ ಸ್ವಾಮಿ ಎಂದು ಅಂಗಲಾಚುವ ದೈನೇಸಿ ಸ್ಥಿತಿಗೆ ಮುಸ್ಲಿಮರು ಬಂದಿದ್ದಾರೆ ಎಂಬಂತಹ ಸುಳ್ಳು ಚಿತ್ರಣ ಮೊನ್ನೆಯ ಭೇಟಿಯಿಂದ ಬಂದಿದೆ. ಇದಕ್ಕೆ ಕಾರಣರಾದವರನ್ನು ಖಂಡಿಸಬೇಕಾಗಿದೆ. ಪೇಜಾವರ ಸ್ವಾಮೀಜಿ ಎಲ್ಲ ಹಿಂದೂಗಳ ಪ್ರತಿನಿಧಿಯಲ್ಲ. ಉಡುಪಿಯ ಡಿಸಿ, ಎಸ್ಪಿಯೂ ಅಲ್ಲ. ಹಾಗೆ ಅವರಲ್ಲಿ ಶಾಂತಿ ಭಿಕ್ಷೆ ಬೇಡಲು ಹೋದವರು ಸಮಸ್ತ ಮುಸ್ಲಿಮರ ಪ್ರತಿನಿಧಿಗಳೂ ಅಲ್ಲ. ಇದು ಎಲ್ಲರಿಗೂ ಸ್ಪಷ್ಟವಾಗಬೇಕು.







