ಐಪಿಎಲ್: ಚೆನ್ನೈ ವಿರುದ್ಧ ಪಂಜಾಬ್ ಕಿಂಗ್ಸ್ ಜಯಭೇರಿ
ಮುಂಬೈ, ಎ.3: ಶಿವಂ ದುಬೆ (57, 30 ಎಸೆತ, 6 ಬೌಂಡರಿ, 3 ಸಿಕ್ಸರ್)ಏಕಾಂಗಿ ಹೋರಾಟ ನೀಡಿದ ಹೊರತಾಗಿಯೂ ಪಂಜಾಬ್ ಕಿಂಗ್ಸ್ ತಂಡದ ಶಿಸ್ತುಬದ್ದ ಬೌಲಿಂಗ್‌ಗೆ ತತ್ತರಿಸಿದ ಚೆನ್ನೈ ಸೂಪರ್ ಕಿಂಗ್ಸ್ ರವಿವಾರ ನಡೆದ 11ನೇ ಐಪಿಎಲ್ ಪಂದ್ಯದಲ್ಲಿ 54 ರನ್‌ಗಳ ಅಂತರದಿಂದ ಸೋಲನುಭವಿಸಿತು.
ಗೆಲ್ಲಲು 181 ರನ್ ಗುರಿ ಪಡೆದ ಚೆನ್ನೈ 18 ಓವರ್‌ಗಳಲ್ಲಿ 126 ರನ್‌ಗೆ ಆಲೌಟಾಯಿತು. ಚೆನ್ನೈ ಪರ ಧೋನಿ(23 ರನ್)ಹಾಗೂ ರಾಬಿನ್ ಉತ್ತಪ್ಪ(13) ಎರಡಂಕೆಯ ಸ್ಕೋರ್ ಗಳಿಸಿದರು. ಮೊಯಿನ್ ಅಲಿ , ರವೀಂದ್ರ ಜಡೇಜ ಹಾಗೂ ಬ್ರಾವೊ ಸೊನ್ನೆ ಸುತ್ತಿದರು. ಪಂಜಾಬ್ ಪರ ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್(2-25), ಹಾಗೂ ವೈಭವ್‌ಅರೋರ(2-21)ತಲಾ ಎರಡು ವಿಕೆಟ್ ಪಡೆದರು. ರಾಹುಲ್ ಚಹಾರ್(3-25)ಯಶಸ್ವಿ ಬೌಲರ್ ಎನಿಸಿಕೊಂಡರು.
ಇದಕ್ಕೂ ಮೊದಲು ಲಿಯಾಮ್ ಲಿವಿಂಗ್‌ಸ್ಟೋನ್ ಸಿಡಿಸಿದ ಅರ್ಧಶತಕದ(60 ರನ್,32 ಎಸೆತ, 5 ಬೌಂಡರಿ, 5 ಸಿಕ್ಸರ್)ನೆರವಿನಿಂದ ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 180 ರನ್ ಗಳಿಸಿತ್ತು.
ಚೆನ್ನೈ ಪರವಾಗಿ ಕ್ರಿಸ್ ಜೋರ್ಡನ್(2-23) ಹಾಗೂ ಡ್ವೆಯ್ನೆ ಪ್ರಿಟೋರಿಯಸ್(2-30) ತಲಾ ಎರಡು ವಿಕೆಟ್ ಪಡೆದರು.ಮುಕೇಶ್ ಚೌಧರಿ, ಡ್ವೆಯ್ನೆ ಬ್ರಾವೊ ಹಾಗೂ ರವೀಂದ್ರ ಜಡೇಜ ತಲಾ ಒಂದು ವಿಕೆಟ್ ಪಡೆದರು. ಆರಂಭಿಕ ಬ್ಯಾಟರ್ ಶಿಖರ್ ಧವನ್(33, 24 ಎಸೆತ), ಜಿತೇಶ್ ಶರ್ಮಾ(26, 17 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದರು.
ಹಾಲಿ ಚಾಂಪಿಯನ್ ಚೆನ್ನೈ ಐಪಿಎಲ್‌ನ ಉದ್ಘಾಟನಾ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಸೋಲನುಭವಿಸಿ ಕಳಪೆ ಆರಂಭ ಪಡೆದಿತ್ತು. ಆ ಬಳಿಕ ಲಕ್ನೊ ವಿರುದ್ಧವೂ ಚೆನ್ನೈ 6 ವಿಕೆಟ್‌ಗಳಿಂದ ಸೋಲುಂಡಿತ್ತು.