ಮಟನ್ ಬಿರಿಯಾನಿ ಮಾರಾಟ ಆರೋಪಿಸಿ ಆಹಾರ ಗಾಡಿಯ ಧ್ವಂಸ; ಸಂಗೀತ್ ಸೋಮ್ ಸೇನೆಯ ಮುಖ್ಯಸ್ಥನ ವಿರುದ್ಧ ಪ್ರಕರಣ

photo pti
ಲಕ್ನೋ: ಮಟನ್ ಬಿರಿಯಾನಿ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ಬೀದಿಬದಿಯ ಆಹಾರದ ಗಾಡಿಯನ್ನು ಧ್ವಂಸಗೊಳಿಸಿ ಕೋಮು ಶಾಂತಿಯನ್ನು ಕದಡಲು ಪ್ರಯತ್ನಿಸಿದ್ದಕ್ಕಾಗಿ ಸಂಗೀತ್ ಸೋಮ್ ಸೇನೆಯ ಯುಪಿ ಮುಖ್ಯಸ್ಥ ಸಚಿನ್ ಖತಿಕ್ ಮತ್ತು ಇತರ ಆರು ಮಂದಿಯ ವಿರುದ್ಧ ಸರ್ಧಾನ ಪೊಲೀಸರು ಶನಿವಾರ ಪ್ರಕರಣ ದಾಖಲಿಸಿದ್ದಾರೆ.ಬಿಜೆಪಿಯ ಮಾಜಿ ಶಾಸಕ ಸಂಗೀತ್ ಸೋಮ್ ಅವರ ಬೆಂಬಲಿಗರು ರಚಿಸಿರುವ ಈ ಸಂಘಟನೆಯು, ನವರಾತ್ರಿ ಉತ್ಸವದ ಸಮಯದಲ್ಲಿ ಸರ್ಧಾನದಲ್ಲಿ ಮಾಂಸ ಮತ್ತು ಮಾಂಸಾಹಾರಿ ಆಹಾರದ ಮಾರಾಟವನ್ನು ನಿಷೇಧಿಸಬೇಕೆಂದು ಈ ಹಿಂದೆ ಒತ್ತಾಯಿಸಿತ್ತು.
ಕೋಮು ಶಾಂತಿ ಕದಡಲು ಯತ್ನಿಸಿದ ಖತಿಕ್ ಮತ್ತು ಇತರ ಆರು ಮಂದಿ ವಿರುದ್ಧ ನಾವು ಪ್ರಕರಣ ದಾಖಲಿಸಿದ್ದೇವೆ. ಖತಿಕ್ ಮತ್ತು ಆತನ ಬೆಂಬಲಿಗರು ಮಟನ್ ಬಿರಿಯಾನಿ ಎಂದು ಆರೋಪಿಸಿ ತರಕಾರಿ ಬಿರಿಯಾನಿ ಮಾರಾಟ ಮಾಡುತ್ತಿದ್ದ ಗಾಡಿಯನ್ನು ಧ್ವಂಸಗೊಳಿಸಿದ್ದಾರೆ. ಒಂದು ವೇಳೆ, ಮಾಂಸಾಹಾರಿ ಬಿರಿಯಾನಿ ಮಾರುತ್ತಿದ್ದರೂ, ಆಹಾರದ ಗಾಡಿಯನ್ನು ಧ್ವಂಸ ಮಾಡುವುದು ಅನಗತ್ಯ. ಏಕೆಂದರೆ ಮಟನ್ ಅಥವಾ ಚಿಕನ್ ಬಿರಿಯಾನಿ ಮಾರಾಟವನ್ನು ಇಲ್ಲಿ ನಿಷೇಧಿಸಲಾಗಿಲ್ಲ, ಎಂದು ಸರ್ಧಾನ ಪೊಲೀಸ್ ಠಾಣೆಯ ಉಸ್ತುವಾರಿ ಲಕ್ಷ್ಮಣ್ ವರ್ಮಾ The Sunday Express ಗೆ ತಿಳಿಸಿದ್ದಾರೆ.
ಸರ್ಧಾನವು ಗಣನೀಯ ಪ್ರಮಾಣದಲ್ಲಿ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ಪಟ್ಟಣವಾಗಿದೆ. ಆದರೂ, ನವರಾತ್ರಿ ಹಬ್ಬದ ಪೂರ್ವಭಾವಿಯಾಗಿ, ಮಟನ್ ಮತ್ತು ಚಿಕನ್ ಮಾರಾಟವನ್ನು ನಿಲ್ಲಿಸಲು ಪಟ್ಟಣದ ಮಾಂಸ ಮಾರಾಟಗಾರರು ನಿರ್ಧರಿಸಿದ್ದರು ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.ಪೊಲೀಸರ ಪ್ರಕಾರ, ಶನಿವಾರದಂದು ಖಾತಿಕ್ ಮತ್ತು ಅವರ ಬೆಂಬಲಿಗರು ಮಾಂಸ ಮಾರಾಟವನ್ನು ನಿಷೇಧಿಸಬೇಕೆಂಬ ತಮ್ಮ ಕರೆಗೆ ಗಾಡಿ ಮಾರಾಟಗಾರರು ಕಿವಿಗೊಡುತ್ತಾರೆಯೇ ಎಂದು ಪರಿಶೀಲಿಸಲು ಪಟ್ಟಣದಲ್ಲಿ ಸುತ್ತಾಡಿದ್ದಾರೆ. ಈ ವೇಳೆ ಕಣ್ಣಿಗೆ ಬಿದ್ದ ತರಕಾರಿ ಬಿರಿಯಾನಿ ಮಾರಾಟ ಮಾಡುತ್ತಿದ್ದ ಆಹಾರದ ಗಾಡಿಯನ್ನು ಧ್ವಂಸಗೊಳಿಸಿದ್ದಾರೆ.
ಖತಿಕ್ ಮತ್ತು ಆತನ ಬೆಂಬಲಿಗರು ನನ್ನಿಂದ ಹಣವನ್ನೂ ಲೂಟಿ ಮಾಡಿದ್ದಾರೆ ಎಂದು ಊಟದ ಗಾಡಿಯ ಮಾಲೀಕ ಸಾಜಿದ್ ಆರೋಪಿಸಿದ್ದಾರೆ.
“ನವರಾತ್ರಿ ಸಂದರ್ಭದಲ್ಲಿ ಮಟನ್ ಅಥವಾ ಚಿಕನ್ ಬಿರಿಯಾನಿ ಮಾರಾಟ ಮಾಡದಂತೆ ಪೊಲೀಸರು ನನಗೆ ಸೂಚನೆ ನೀಡಿದ್ದಾರೆ. ಹಾಗಾಗಿ ವೆಜಿಟೇಬಲ್ ಬಿರಿಯಾನಿ ತಯಾರಿಸಿದ್ದೆ. ಮಧ್ಯಾಹ್ನ, ಸಂಗೀತ್ ಸೋಮ್ ಸೇನೆಯ ಕಾರ್ಯಕರ್ತರು ನನ್ನ ಗಾಡಿಯತ್ತ ನುಗ್ಗಿ ಧ್ವಂಸಗೊಳಿಸಿದ್ದಾರೆ. ನನ್ನ ಬಳಿಯಿದ್ದ ನಗದನ್ನೂ ಲೂಟಿ ಮಾಡಿದ್ದಾರೆ” ಎಂದು ಸಾಜಿದ್ ಹೇಳಿದ್ದಾರೆ.







