ಕಾಫಿನಾಡಿನಲ್ಲಿ ಭಾರೀ ಮಳೆಗೆ ಅಲ್ಲಲ್ಲಿ ಧರೆಗುರುಳಿದ ಮರ, ವಿದ್ಯುತ್ ಕಂಬಗಳು

ಚಿಕ್ಕಮಗಳೂರು, ಎ.3: ಕಾಫಿನಾಡಿನಲ್ಲಿ ಮಳೆಯ ಆರ್ಭಟ ಮುಂದುವರಿದಿದೆ. ಜಿಲ್ಲೆಯಲ್ಲಿ ಮಲೆನಾಡು ಹಾಗೂ ಬಯಲು ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಆಗಾಗ್ಗೆ ಮಳೆ ಸುರಿಯುತ್ತಿದ್ದು, ಶನಿವಾರ ಸಂಜೆ ವೇಳೆ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆಯಾಗಿದ್ದರೇ, ರಾತ್ರಿ ವೇಳೆ ಬಯಲು ಭಾಗದ ಅಲ್ಲಲ್ಲಿ ಮಳೆ ಆರ್ಭಟಿಸಿದೆ.
ಜಿಲ್ಲೆಯ ಕೊಪ್ಪ, ಶೃಂಗೇರಿ, ಮೂಡಿಗೆರೆ, ಎನ್.ಆರ್.ಪುರ, ಕಳಸ ತಾಲೂಕುಗಳ ವ್ಯಾಪ್ತಿಯಲ್ಲಿ ಶನಿವಾರ ಸಂಜೆ ವೇಳೆ ಭಾರೀ ಮಳೆಯಾಗಿದ್ದು, ಸುಮಾರು 1 ಗಂಟೆಗಳ ಕಾಲ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಗಾಳಿ, ಮಳೆಯಿಂದಾಗಿ ಮಲೆನಾಡು ಭಾಗದಲ್ಲಿ ರಸ್ತೆ ಬದಿಯಲ್ಲಿದ್ದ ಅನೇಕ ಮರಗಳು ನೆಲಕ್ಕುರುಳಿದ್ದು, ಕೆಲವೆಡೆ ವಿದ್ಯುತ್ ಕಂಬಗಳೂ ನೆಲಕ್ಕುರುಳಿದ ಪರಿಣಾಮ ಮಲೆನಾಡು ಭಾಗದ ಅಲ್ಲಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.
ಜಿಲ್ಲೆಯ ಕೊಪ್ಪ, ಕಳಸ, ಶೃಂಗೇರಿ ತಾಲೂಕು ವ್ಯಾಪ್ತಿಯಲ್ಲಿ ಹೆಚ್ಚ ಮಳೆಯಾಗಿದ್ದು, ಧಾರಾಕಾರ ಮಳೆಯಿಂದಾಗಿ ವಾಹನ ಸಂಚಾರಕ್ಕೂ ಅಡಚಣೆ ಉಂಟಾಗಿತ್ತು. ಭಾರೀ ಮಳೆಯಿಂದಾಗಿ ಕೊಪ್ಪ, ಕಳಸ, ಶೃಂಗೇರಿ ಪಟ್ಟಣಗಳಲ್ಲಿ ರಸ್ತೆ ಮೇಲೆ ಮಳೆ ನೀರು ನಿಂತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು.
ಇನ್ನು ಚಿಕ್ಕಮಗಳೂರು ತಾಲೂಕು ವ್ಯಾಪ್ಪಿಯ, ಆಲ್ದೂರು, ಸಿರವಾಸೆ, ಮಲ್ಲಂದೂರು, ಆವತಿ, ವಸ್ತಾರೆ ಹೋಬಳಿ ವ್ಯಾಪ್ತಿಯಲ್ಲಿ ಶನಿವಾರ ಸಂಜೆ ಧಾರಾಕಾರ ಮಳೆಯಾಗಿದ್ದರೇ ಚಿಕ್ಕಮಗಳೂರು ನಗರದಲ್ಲಿ ಶನಿವಾರ ರಾತ್ರಿ ಭಾರೀ ಮಳೆ ಸುರಿದಿದೆ. ಭಾರೀ ಮಳೆಯಿಂದಾಗಿ ನಗರದ ಕೆಲ ಬಡಾವಣೆಗಳ ವ್ಯಾಪ್ತಿಯಲ್ಲಿ ಚರಂಡಿ ನೀರು ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿತ್ತು. ಮಳೆ ಗಾಳಿಗೆ ಕೆಲ ಮನೆಗಳ ಶೀಟುಗಳು ಹಾರಿ ಹೋದ ಘಟನೆಗಳು ಅಲ್ಲಲ್ಲಿ ನಡೆದಿವೆ. ಶನಿವಾರ ರಾತ್ರಿ ಕಡೂರು, ತರೀಕೆರೆ ತಾಲೂಕು ವ್ಯಾಪ್ತಿಯಲ್ಲಿ ಕೆಲ ಭಾಗದಲ್ಲಿ ಸಾಧಾರಣ ಮಳೆಯಾದ ಬಗ್ಗೆ ವರದಿಯಾಗಿದೆ.
ರವಿವಾರ ಮಲೆನಾಡು ಭಾಗದಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಭಾರೀ ಬಿಸಿಲಿನ ವಾತಾವರಣವಿದ್ದು, ಸಂಜೆ ವೇಳೆ ಧಟ್ಟ ಮೋಡಕವಿದಿದ್ದ ವಾತಾವರಣ ಇತ್ತಾದರೂ ಎಲ್ಲ ಭಾರೀ ಮಳೆಯಾದ ಬಗ್ಗೆ ವರದಿಯಾಗಿಲ್ಲ. ಬಯಲು ಭಾಗದಲ್ಲೂ ರವಿವಾರ ಮಳೆಯ ಸುಳಿವಿರದೇ ಅಲ್ಲಲ್ಲಿ ಧಟ್ಟ ಮೋಡದ ವಾತಾವರಣ ನಿರ್ಮಾಣವಾಗಿತ್ತು.
ಜಿಲ್ಲಾದ್ಯಂತ ಕಳೆದ ಕೆಲ ದಿನಗಳಿಂದ ಆಗಾಗ್ಗೆ ಉತ್ತಮ ಮಳೆಯಾಗಿದ್ದು, ಈ ಮಳೆ ಜಿಲ್ಲೆಯಲ್ಲಿ ಅತೀ ಹೆಚ್ಚು ಬೆಳೆಯುವ ಕಾಫಿ ಬೆಳೆಗೆ ಉತ್ತಮ ನೀರು ಒದಗಿಸಿದ್ದು, ಸದ್ಯ ಜಿಲ್ಲಾದ್ಯಂತ ಇರುವ ಕಾಫಿ ತೋಟಗಳಲ್ಲಿ ಮಳೆಯ ಪರಿಣಾಮ ಕಾಫಿ ಹೂವು ನಳನಳಿಸುತ್ತಿವೆ. ಅಡಿಕೆ ಬೆಳೆಗೂ ಈ ಮಳೆ ಉತ್ತಮ ನೀರು ಪೂರೈಸಿದಂತಾಗಿದೆ.







