ವಿದ್ಯುತ್ ಕಡಿತ ಮಾಡದಂತೆ ಪುದು ಕಾಂಗ್ರೆಸ್ ನಿಂದ ಮೆಸ್ಕಾಂಗೆ ಮನವಿ

ಬಂಟ್ವಾಳ, ಎ.4: ತಾಲೂಕಿನ ಪುದು ಗ್ರಾಮದಲ್ಲಿ ಸಂಜೆ ಹಾಗೂ ರಾತ್ರಿ ವೇಳೆ ವಿದ್ಯುತ್ ಕಡಿತಗೊಳಿಸುವುದನ್ನು ನಿಲ್ಲಿಸುವಂತೆ ಆಗ್ರಹಿಸಿ ಪುದು ಕಾಂಗ್ರೆಸ್ ವತಿಯಿಂದ ಮೆಸ್ಕಾಂಗೆ ಮನವಿ ಸಲ್ಲಿಸಲಾಯಿತು.
ರಮಝಾನ್ ತಿಂಗಳಲ್ಲಿ ಸಂಜೆ ಇಫ್ತಾರ್ ಸಮಯವಾಗಿದ್ದು, ಈ ಸಮಯದಲ್ಲಿ ವಿದ್ಯುತ್ ಕಡಿತಗೊಳಿಸುವುದರಿಂದ ಉಪವಾಸಿಗರಿಗೆ ತೊಂದರೆ ಉಂಟಾಗುತ್ತಿದೆ. ಹಾಗೆಯೇ ಶಾಲಾ ಕಾಲೇಜುಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು ರಾತ್ರಿ ವೇಳೆ ವಿದ್ಯುತ್ ಕಡಿತಗೊಳಿಸುವುದರಿಂದ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ರಮಝಾನ್ ತಿಂಗಳ ಪೂರ್ತಿ ಹಾಗೂ ಶಾಲಾ ಕಾಲೇಜಿನಲ್ಲಿ ಪರೀಕ್ಷೆಗಳು ಮುಗಿಯುವವರೆಗೆ ಗ್ರಾಮದಲ್ಲಿ ವಿದ್ಯುತ್ ಪೂರೈಕೆ ಕಡಿತಗೊಳಿಸದಂತೆ ಮನವಿಯಲ್ಲಿ ಒತ್ತಾಯಿಸಲಾಯಿತು.
ಮನವಿ ಪತ್ರವನ್ನು ಮೆಸ್ಕಾಂ ಫರಂಗಿಪೇಟೆ ಶಾಖೆಯ ಅಧಿಕಾರಿಗೆ ಮತ್ತು ಬಿ.ಸಿ.ರೋಡ್ ಮೆಸ್ಕಾಂ ಅಧಿಕಾರಿ ನಾರಾಯಣ ಭಟ್ ಅವರಿಗೆ ಸಲ್ಲಿಸಲಾಯಿತು. ಈ ಇಬ್ಬರು ಅಧಿಕಾರಿಗಳು ಸಕರಾತ್ಮಕವಾಗಿ ಸ್ಪಂದಿಸಿ ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಉಮರ್ ಫಾರೂಕ್, ಪುದು ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಲ್ಲ, ಉಪಾಧ್ಯಕ್ಷೆ ಲಿಡಿಯಾ ಪಿಂಟೊ, ಪಂಚಾಯತ್ ಸದಸ್ಯರಾದ ಇಕ್ಬಾಲ್ ಸುಜೀರ್, ಮುಹಮ್ಮದ್ ಮೋನು, ಮುಡಿಪು ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷ ಮಜೀದ್ ಪೇರಿಮಾರ್, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಿಸಾಂ ಫರಂಗಿಪೇಟೆ, ಕಾಂಗ್ರೆಸ್ ಮುಖಂಡ ಬದ್ರುದ್ದೀನ್ ಕರ್ಮಾರ್, ತಾಪಂ ಮಾಜಿ ಸದಸ್ಯ ಆಸಿಫ್ ಇಕ್ಬಾಲ್ ಉಪಸ್ಥಿತರಿದ್ದರು.
