ಕೋಮು ದ್ವೇಷ ಹರಡಲು ಸಹ ಸಂಘಟನೆಗಳಿಗೆ ಸರಕಾರದಿಂದ ಲೈಸೆನ್ಸ್: ಐವನ್ ಡಿಸೋಜಾ

ಮಂಗಳೂರು : ರಾಜ್ಯದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಸಿಯಾಗಿರುವ ಬಗ್ಗೆ ರಾಜ್ಯ ಸರಕಾರ ಕಣ್ಣು ಮುಚ್ಚಿ ಕುಳಿದಿದೆ. ಮಾತ್ರವಲ್ಲದೆ, ಪಕ್ಷದ ಕಾರ್ಯಕರ್ತರು ಹಾಗೂ ಸಹ ಸಂಘಟನೆಗಳ ಕೃತ್ಯವನ್ನು ಸಮರ್ಥಿಸುವ ಮೂಲಕ ಪರೋಕ್ಷವಾಗಿ ಲೈಸೆನ್ಸ್ ನೀಡಿ ಪ್ರಚೋದಿಸುತ್ತಿದೆ ಎಂದು ವಿಧಾನ ಪರಿಷತ್‌ನ ಮಾಜಿ ಸದಸ್ಯ ಐವನ್ ಡಿಸೋಜಾ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಈ ಆರೋಪ ಮಾಡಿದ ಅವರು, ರಾಜ್ಯದಲ್ಲಿ ಶಾಂತಿಯನ್ನು ಕಾಪಾಡುವುದು ಸರಕಾರದ ಜವಾಬ್ಧಾರಿ. ಆದರೆ ಈ ಬಗ್ಗೆ ನಿರ್ಲಕ್ಷ್ಯ ಧೋರಣೆ ತಳೆದಿರುವ ಮುಖ್ಯಮಂತ್ರಿ ಬೊಮ್ಮಾಯಿ ನೇತೃತ್ವದ ಸರಕಾರಕ್ಕೆ ಅಧಿಕಾರದಲ್ಲಿರಲು ಅರ್ಹತೆ ಇಲ್ಲ ಎಂದರು.
ಹಿಜಾಬ್ ವಿವಾದ, ದೇವಸ್ಥಾನಗಳಲ್ಲಿ ವ್ಯಾಪಾರ, ಶಾಲೆಗಳಲ್ಲಿ ಭಗವದ್ಗೀತೆ, ಹಲಾಲ್ ಕಟ್, ಜಟ್ಕಾ ಕಟ್ ವಿಚಾರದಲ್ಲಿ ಗೊಂದಲ ಸೃಷ್ಟಿಯ ಹೇಳಿಕೆಗಳನ್ನು ಶಾಸಕರು, ಸಚಿವರೇ ನೀಡುತ್ತಿದ್ದಾರೆ. ಈ ರೀತಿ ಕೋಮು ದ್ವೇಷಕ್ಕೆ ಬೆಂಬಲ ನೀಡುವ, ಸಮರ್ಥಿಸುವ ಪರಿಪಾಠವಾಗಲಿ, ಇತಿಹಾಸವಾಗಲಿ ಜಗತ್ತಿನಲ್ಲಿ ಎಲ್ಲಿಯೂ ನಡೆದಿಲ್ಲ. ಈ ರೀತಿ ಒಂದು ಧರ್ಮವನ್ನು ಎತ್ತಿ ಹಿಡಿದು ಸಮಾಜದಲ್ಲಿ ಒಡಕು ಮೂಡಿಸುವುದರಿಂದ ದೊಡ್ಡ ಮಟ್ಟದ ಲಾಭವಾಗುವತೆ ಎಂಬ ಭಾನನೆ ತಪ್ಪು. ಪ್ರಜ್ಞಾವಂತ ಸಮಾಜದ ಜನರಿಗೆ ಎಲ್ಲವೂ ಅರಿವಾಗುತ್ತದೆ. ಇಂತಹ ಕೃತ್ಯಗಳ ಮೂಲಕ ಬಿಜೆಪಿ ತನಗನೆ ತಾನೇ ಗಂಡಾಂತರವನ್ನು ಸೃಷ್ಟಿಸುತ್ತಿದೆ ಎಂದು ಅವರು ಹೇಳಿದರು.
ಗೋಷ್ಠಿಯಲ್ಲಿ ಸಿ.ಎಂ. ಮುಸ್ತಫಾ, ದೀಕ್ಷಿತ್ ಅತ್ತಾವರ, ಮೀನಾ ಟೆಲ್ಲಿಸ್, ಚಿತ್ತರಂಜನ್, ಹುಸೇನ್ ಕೂಳೂರು, ಅಶಿತ್ ಪಿರೇರಾ, ಅಲ್ವಿನ್ ಡಿಕುನ್ನಾ, ಹಸನ್ ಫಳ್ನೀರು ಉಪಸ್ಥಿತರಿದ್ದರು.