ರಾಜ್ಯದಲ್ಲಿ 33 ಲಕ್ಷ ರೈತರಿಗೆ 24 ಸಾವಿರ ಕೋಟಿ ರೂ. ಸಾಲ ನೀಡುವ ಗುರಿ: ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್
ಉಪ್ಪುಂದದಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್‌ನ 110ನೇ ಶಾಖೆ ಉದ್ಘಾಟನೆ

ಉಪ್ಪುಂದ (ಕುಂದಾಪುರ), ಎ.4: ಈ ಬಾರಿ ರಾಜ್ಯದ 33 ಲಕ್ಷ ರೈತರಿಗೆ- ಅದರಲ್ಲಿ ಮೂರು ಲಕ್ಷ ಹೊಸ ರೈತರು- ಒಟ್ಟು 24000 ಕೋಟಿ ರೂ. ಸಾಲವನ್ನು ವಿತರಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದು ರಾಜ್ಯ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ಬೈಂದೂರು ತಾಲೂಕಿನ ಉಪ್ಪುಂದದ ಶಿವದುರ್ಗಾ ಕಾಂಪ್ಲೆಕ್ಸ್‌ನಲ್ಲಿ ದಕ್ಷಿಣ ಕನ್ನಡ ಕೇಂದ್ರ ಸಹಕಾರಿ ಬ್ಯಾಂಕ್‌ನ (ಎಸ್‌ಸಿಡಿಸಿಸಿ) 110ನೇ ಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಕಳೆದ ಆರ್ಥಿಕ ವರ್ಷದಲ್ಲಿ ೩೦,೮೬,೦೦೦ ರೈತರಿಗೆ ೨೦೮೧೦ ಕೋಟಿ ರೂ.ಸಾಲ ವಿತರಿಸುವ ಗುರಿಯನ್ನು ಸಹಕಾರಿ ಇಲಾಖೆ ಹೊಂದಿತ್ತು. ಕೋವಿಡ್ ಹಾಗೂ ಇತರ ಕಾರಣಗಳಿಂದ ೧೪,೫೦೦ ಕೋಟಿ ರೂ.ಗಳ ವಿತರಣೆ ಮಾತ್ರ ಸಾಧ್ಯವಾಗಿದೆ. ಆದರೆ ಎಸ್‌ಸಿಡಿಸಿಸಿ ಬ್ಯಾಂಕ್ ತನಗೆ ನೀಡಿದ ಗುರಿಯನ್ನು ಮೀರಿ ಶೇ.೧೧೬ರಷ್ಟು ಸಾಲವನ್ನು ವಿತರಿಸುವ ಮೂಲಕ ರೈತರಿಗೆ ಎಲ್ಲಾ ರೀತಿಯ ಸಾಲ ನೀಡಿದೆ ಎಂದವರು ಪ್ರಶಂಸೆ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೆಗೆದುಕೊಂಡ ನಿರ್ಧಾರದಂತೆ ರಾಜ್ಯದಲ್ಲಿ ಕೋವಿಡ್‌ನಿಂದ ಮರಣ ಹೊಂದಿದ ೩೫ರಿಂದ ೩೬ ಸಾವಿರ ಮಂದಿಗೆ ತಲಾ ಒಂದು ಲಕ್ಷ ರೂ.ಪರಿಹಾರವನ್ನು ನೀಡಲಾಗಿದೆ. ಕೋವಿಡ್ ಸಂದರ್ಭದಲಿ ಸಹಕಾರಿ ಬ್ಯಾಂಕ್‌ಗಳಿಂದ ಸಾಲ ಪಡೆದಿದ್ದ ಸದಸ್ಯರು ಮೃತಪಟ್ಟಿದ್ದು, ಮೃತ ಕುಟುಂಬಗಳಿಗೆ ಸಹಾಯ ಮಾಡಲು ಅಪೆಕ್ಸ್ ಬ್ಯಾಂಕ್ ನಿರ್ಧರಿಸಿದೆ. ಅದರಂತೆ ಡಿಸಿಸಿ ಬ್ಯಾಂಕ್ ಕೋವಿಡ್‌ನಿಂದ ನಿಧನ ಹೊಂದಿದ ಸ್ವಸಹಾಯ ಗುಂಪಿನ ಸದಸ್ಯರ ಕುಟುಂಬಕ್ಕೆ ಹಾಗೂ ಸಾಲ ಪಡೆದ ಕುಟುಂಬಗಳಿಗೂ ಪರಿಹಾರ ನೀಡಿದೆ ಎಂದರು.
ಕೃಷಿ ಪತ್ತಿನ ಬ್ಯಾಂಕ್ ಒಂದೇ ತಂತ್ರಾಂಶದಡಿ: ಕೇಂದ್ರ ಸರಕಾರ ಮುಂದಿನ ಮೂರು ವರ್ಷದೊಳಗೆ ಎಲ್ಲಾ ಕೃಷಿಪತ್ತಿನ ಬ್ಯಾಂಕ್‌ಗಳನ್ನು ಒಂದೇ ತಂತ್ರಾಂಶ ದಡಿ ತರುವ ಚಿಂತನೆ ನಡೆಸಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಇದಕ್ಕೆ ಹಸಿರು ನಿಶಾನೆ ತೋರಿದ್ದಾರೆ. ಇದಕ್ಕಾಗಿ ೨೫೬ ಕೋಟಿ ರೂ.ಗಳ ಯೋಜನೆ ಯನ್ನು ರೂಪಿಸಿದೆ. ರಾಜ್ಯದಲ್ಲಿ ಡಿಸಿಸಿ ಬ್ಯಾಂಕ್ ಇದನ್ನು ನಿರ್ವಹಿಸಲಿದೆ ಎಂದರು.
ಕರ್ನಾಟಕದಲ್ಲಿ ೧೫ ಹಾಲಿನ ಯೂನಿಯನ್‌ಗಳಿದ್ದು, ೨೬ ಲಕ್ಷ ರೈತರು ಹಾಲು ಪೂರೈಕೆ ಮಾಡುತಿದ್ದಾರೆ. ಇವರಲ್ಲಿ ೯ ಲಕ್ಷ ಮಹಿಳೆಯರೂ ಇದ್ದಾರೆ. ಇದೀಗ ನಂದಿನಿ ಕ್ಷೀರ ಸಮೃದ್ಧಿ ಬ್ಯಾಂಕ್ ಒಂದನ್ನು ಆರಂಭಿಸಲು ಹಾಗೂ ಹೈನುಗಾರಿಕೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಎಲ್ಲಾ ೨೬ಲಕ್ಷ ರೈತರಿಗೂ ಕ್ರೆಡಿಟ್ ಕಾರ್ಡ್ ನೀಡಲು ಸರಕಾರ ನಿರ್ಧರಿಸಿದೆ ಎಂದು ಸೋಮಶೇಖರ್ ನುಡಿದರು.
ಎಸ್‌ಸಿಡಿಸಿಸಿ ಬ್ಯಾಂಕ್ ರಾಜ್ಯದಲ್ಲೇ ನಂಬರ್ ಒನ್ ಸಹಕಾರಿ ಬ್ಯಾಂಕ್ ಆಗಿದ್ದು, ಇದರ ಕಾರ್ಯವೈಖರಿ ಇತರ ಬ್ಯಾಂಕ್‌ಗಳಿಗೆ ಮಾದರಿಯಾಗಿದೆ ಎಂದೂ ಸಚಿವ ಎಸ್.ಟಿ.ಸೋಮಶೇಖರ್ ಅಭಿಪ್ರಾಯಪಟ್ಟರು.
ಇದೇ ವೇಳೆ ನಡೆದ ನವೋದಯ ಸ್ವಸಹಾಯ ಸಂಘಗಳ ಸಾಧನಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ರಾಜೇಂದ್ರ ಕುಮಾರ್ ಒಬ್ಬ ವ್ಯಕ್ತಿಯಲ್ಲ, ಶಕ್ತಿ. ಅವರು ಎರಡು ದಶಕಗಳಿಂದ ಡಿಸಿಸಿ ಬ್ಯಾಂಕ್‌ನ್ನು ಸಮರ್ಥವಾಗಿ ಮುನ್ನಡೆಸುತಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
೨೫ ವರ್ಷಗಳ ಹಿಂದೆ ರಾಜೇಂದ್ರ ಕುಮಾರ್ ಅವರು ಎಸ್‌ಸಿಡಿಸಿಸಿ ಬ್ಯಾಂಕ್ ಮೂಲಕ ನನ್ನ ನಿರಾಣಿ ಗ್ರೂಪ್‌ಗೆ ನೀಡಿದ ೧೨ ಕೋಟಿ ರೂ. ಸಾಲದಿಂದ ನನ್ನ ನನ್ನ ಉದ್ದಿಮೆ ಇಂದು ಯಶಸ್ವಿಯಾಗಿ ಬೆಳೆದು ನಿಂತಿದ್ದು ಇದರಿಂದ ೭೫,೦೦೦ ಮಂದಿಗೆ ಉದ್ಯೋಗ ನೀಡಲು ಸಾಧ್ಯವಾಗಿದೆ ಎಂದರು.
ರೈತೋದ್ಯಮಿಯಾಗಿ: ನೂತನ ಸ್ವಸಹಾಯ ಗುಂಪುಗಳನ್ನು ಉದ್ಘಾಟಿಸಿ ಮಾತನಾಡಿ ಕೃಷಿ ಸಚಿವ ಬಿ. ಸಿ.ಪಾಟೀಲ್, ರೈತರು ಸಹ ಸ್ವಾವಲಂಬಿಯಾಗ ಬೇಕಿದ್ದರೆ, ಎದೆಯುಬ್ಬಿಸಿ ನಿಲ್ಲಬೇಕಿದ್ದರೆ ಇಂದು ರೈತೋದ್ಯಮಿಯಾಗಿ ಬೆಳೆಯಬೇಕಾದ ಅಗತ್ಯವಿದೆ. ರೈತ ತಾನು ಬೆಳೆದ ಆಹಾರ ಪದಾರ್ಥವನ್ನು ತಾನೇ ಸಂಸ್ಕರಣೆ ಮಾಡಿ, ಬ್ರಾಂಡಿಂಗ್ ಮಾಡಿ ಮಾರಾಟ ಮಾಡಬೇಕು ಎಂದು ಸಲಹೆ ನೀಡಿದರು.
ಕೃಷಿ ಕಾಲೇಜುಗಳಲ್ಲಿ ಕೃಷಿಕ ಮಕ್ಕಳಿಗೆ ಹೆಚ್ಚು ಅವಕಾಶ ನೀಡಲು ರೈತರ ಮಕ್ಕಳಿಗೆ ನೀಡುವ ಮೀಸಲಾತಿಯನ್ನು ಶೇ.೪೦ರಿಂದ ೫೦ಕ್ಕೆ ಹೆಚ್ಚಿಸಲಾಗಿದೆ. ಇದರಿಂದ ಈ ಬಾರಿ ೧೮೪ ಮಂದಿ ರೈತ ಮಕ್ಕಳು ಹೆಚ್ಚುವರಿಯಾಗಿ ಸೀಟು ಪಡೆದಿದ್ದಾರೆ. ರಾಜ್ಯದ ರೈತರು ಪಡೆಯುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಮೊತ್ತವನ್ನು ೧೦,೦೦೦ಕ್ಕೆ ಏರಿಸಲಾಗಿದೆ. ಹೆಣ್ಣು ಮಕ್ಕಳಿಗೆ ೨೦೦೦ರೂ. ಸ್ಕಾಲರ್‌ಶಿಪ್ ನೀಡುತಿದ್ದೇವೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಸ್‌ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಡಾ. ಎಂ.ಎನ್.ರಾಜೇಂದ್ರ ಕುಮಾರ್, 110 ವರ್ಷಗಳ ಇತಿಹಾಸ ಹೊಂದಿರುವ ಬ್ಯಾಂಕ್‌ನ 110ನೇ ಶಾಖೆ ಇದಾಗಿದೆ. ಇಲ್ಲಿ ಉದ್ಘಾಟನೆಗೊಂಡ ದಿನವೇ 4000 ಖಾತೆಗಳು ತೆರೆಯಲ್ಪಟ್ಟಿದ್ದು, 26 ಕೋಟಿ ರೂ. ಠೇವಣಿ ಸಂಗ್ರಹವಾಗಿದೆ ಎಂದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರ್ಥಿಕ ಸಂಕಷ್ಟದಿಂದ ಸಕಾಲದಲ್ಲಿ ಸಾಲ ಸಿಗದ ಕಾರಣಕ್ಕೆ ಯಾರೂ ಆತ್ಮಹತ್ಯೆ ಮಾಡಿಕೊಂಡಿಲ್ಲ. ಅದೇ ರೀತಿ ಶೇ.100ರಷ್ಟು ಸಾಲ ಮರುಪಾವತಿಯಾಗುತ್ತಿದೆ. ನಮ್ಮ ನವೋದಯ ಸ್ವಸಹಾಯ ಸಂಘದಲ್ಲಿ ಕೊರೋನದಿಂದ ಮೃತಪಟ್ಟ ೧೭೪ ಮಂದಿ ಸದಸ್ಯರ ಕುಟುಂಬಕ್ಕೆ ಒಟ್ಟು ೧.೫೨ ಕೋಟಿ ರೂ. ಪರಿಹಾರವನ್ನು ವಿತರಿಸಿದ್ದೇವೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಕೋವಿಡ್‌ನಿಂದ ಮೃತಪಟ್ಟ ನವೋದಯ ಸ್ವಸಹಾಯ ಸಂಘದ ಸದಸ್ಯರ ಕುಟುಂಬಕ್ಕೆ ಆರ್ಥಿಕ ನೆರವಿನ ಚೆಕ್ ವಿತರಿಸಲಾಯಿತು. ಮಹಿಳಾ ಸ್ವಸಹಾಯ ಗುಂಪುಗಳಿಗೆ ಸಾಲ ಸೌಲಭ್ಯ ವಿತರಿಸಲಾಯಿತು. ಮೃತ ಸದಸ್ಯರ ಚೈತನ್ಯ ವಿಮಾ ಚೆಕ್‌ನ್ನು ಕುಟುಂಬ ಸದಸ್ಯರಿಗೆ ವಿತರಿಸಲಾಯಿತು. ಉಪ್ಪುಂದ ಶಾಖೆಯಿಂದ ವಾಹನದ ಸಾಲ ಪತ್ರಗಳ ವಿತರಣೆ ನಡೆಯಿತು.
ವೇದಿಕೆಯಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ, ಬೈಂದೂರು ಶಾಸಕ ಬಿ. ಎಂ. ಸುಕುರ್ಮಾ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಮಾಜಿ ಶಾಸಕ ಗೋಪಾಲ ಪೂಜಾರಿ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ಯಶ್ಪಾಲ್ ಸುವರ್ಣ, ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಉಪ್ಪುಂದ ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ಖಾರ್ವಿ, ಎಸ್‌ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವಿನಯ್ ಕುಮಾರ್ ಸೂರಿಂಜೆ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರವೀಂದ್ರ ಬಿ., ಬ್ಯಾಂಕ್‌ನ ನಿರ್ದೇಶಕ ಬೆಳಪು ದೇವಿಪ್ರಸಾದ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಎಸ್‌ಡಿಸಿಸಿ ಬ್ಯಾಂಕಿನ ನಿರ್ದೇಶಕ ಎಸ್.ರಾಜು ಪೂಜಾರಿ ಸ್ವಾಗತಿಸಿದರೆ, ಮಹೇಶ್ ಮೊಳಹಳ್ಳಿ ವಂದಿಸಿದರು. ಕೆ.ಸಿ.ರಾಜೇಶ್ ಕಾರ್ಯಕ್ರಮ ನಿರ್ವಹಿಸಿದರು.

