ಭೂತಾರಾಧನೆ ಪರಂಪರೆ ನಿಂತಿರುವುದು ನಂಬಿಕೆಯ ಬುನಾದಿಯಲ್ಲಿ: ರವಿ ಪಾಣಾರ

ಉಡುಪಿ, ಎ.೪: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ (ಮಾಹೆ)ನ ಮಣಿಪಾಲ ಸೆಂಟರ್ ಫಾರ್ ಯುರೋಪಿಯನ್ ಸ್ಡಡೀಸ್ನ ಸೆಂಟರ್ ಫಾರ್ ಇಂಟರ್ಕಲ್ಪಚರಲ್ ಸ್ಡಡೀಸ್ ಆ್ಯಂಡ್ ಡಯಲಾಗ್ ವಿಭಾಗದ ಆಶ್ರಯದಲ್ಲಿ ‘ಪರ್ಫಾರ್ಮೆನ್ಸ್ ಆ್ಯಂಡ್ ಫೆಯಿತ್: ಎ ಡಯಲಾಗ್ ಆನ್ ಭೂತ ವರ್ಷಿಪ್’ ಕುರಿತ ಸಂವಾದಗೋಷ್ಠಿ ಕೇಂದ್ರದಲ್ಲಿ ನಡೆಯಿತು.
ಜಿಲ್ಲೆಯ ಪ್ರಸಿದ್ಧ ದೈವ ನರ್ತಕ ಕಲಾವಿದರಾದ ಮಣಿಪಾಲ ಬಬ್ಬುಸ್ವಾಮಿ ದೈವಸ್ಥಾನ ನೇಮೋತ್ಸವದ ನರ್ತಕ ಕಲಾವಿದರೂ ಆಗಿರುವ ರವಿ ಪಾಣಾರ ಹಿರಿಯಡಕ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ತುಳು ಮತ್ತು ಇಂಗ್ಲಿಷ್ ಭಾಷೆಯಲ್ಲಿ ಈ ಸಂವಾದ ನಡೆಯಿತು.
ರವಿ ಪಾಣಾರ ಅವರು ದೈವ ಮತ್ತು ಭಕ್ತರ ನಡುವಿನ ನಂಬಿಕೆಯ ಸಂಬಂಧ ವನ್ನು ವಿವರಿಸುತ್ತ, ಭೂತಾರಾಧನೆಯ ಸಾವಿರಾರು ವರ್ಷಗಳ ಪರಂಪರೆ ಹಾಗೂ ಇಡೀ ಬದುಕು ನಿಂತಿರುವುದೇ ನಂಬಿಕೆಯ ಮೇಲೆ ಎಂದು ವಿವರಿಸಿದರು.
ಮನುಷ್ಯ- ಮನುಷ್ಯನ ಮೇಲೆ ನಂಬಿಕೆಯನ್ನು ಹೊಂದಿದ್ದಾನೆ. ತಾಯಿ ಮಗುವಿನ ಮೇಲೆ ಮಗು ತಾಯಿಯ ಮೇಲೆ ನಂಬಿಕೆ ಹೊಂದಿರುತ್ತದೆ. ಇಂಥ ನಂಬಿಕೆಯೇ ದೈವದ ಕುರಿತು ಕೂಡ ಇರುತ್ತದೆ. ದೈವ ತನ್ನನ್ನು ರಕ್ಷಿಸುತ್ತದೆ ಎಂಬ ನಂಬಿಕೆ ಭಕ್ತನಲ್ಲಿದ್ದರೆ ಭಕ್ತ ಒಳಿತನ್ನೇ ಮಾಡುತ್ತಾನೆ ಎಂಬ ನಂಬಿಕೆ ದೆವದಲ್ಲಿರುತ್ತದೆ. ಇಂಥ ನಂಬಿಕೆಯೇ ದೈವ ಅಥವಾ ಭೂತಾರಾಧನೆ ಪರಂಪರೆ ಸಾವಿರಾರು ವರ್ಷಗಳಿಂದ ನಡೆದುಕೊಂಡು ಬರಲು ಕಾರಣವಾಗಿದೆ ಎಂದು ರವಿ ಪಾಣಾರ ಹೇಳಿದರು.
ಮಣಿಪಾಲ್ ಸೆಂಟರ್ ಫಾರ್ ಯುರೋಪಿಯನ್ ಸ್ಡಡೀಸ್ನ ಮುಖ್ಯಸ್ಥೆ ಡಾ. ನೀತಾ ಇನಾಂದಾರ್, ರವಿ ಪಾಣಾರರನ್ನು ಗೌರವಿಸಿದರು. ಎಂಐಟಿಯ ಇಂಗ್ಲಿಷ್ ಪ್ರಾಧ್ಯಾಪಕ ಮತ್ತು ಸೆಂಟರ್ ಫಾರ್ ಇಂಟರ್ಕಲ್ಪಚರಲ್ ಸ್ಡಡೀಸ್ ಆ್ಯಂಡ್ ಡಯಲಾಗ್ನ ಸಂಯೋಜಕ ಡಾ.ಪ್ರವೀಣ್ ಶೆಟ್ಟಿ ಸಂವಾದದ ಸಮನ್ವಯಕಾರರಾಗಿದ್ದರು.
ಮಣಿಪಾಲ್ ಯೂನಿವರ್ಸಲ್ ಪ್ರೆಸ್ನ ಸಂಪಾದಕ ಡಾ.ಪೃಥ್ವೀರಾಜ ಕವತ್ತಾರು ಮತ್ತು ಸೆಂಟರ್ ಫಾರ್ ಇಂಟರ್ಕಲ್ಪಚರಲ್ ಸ್ಡಡೀಸ್ ಆ್ಯಂಡ್ ಡಯಲಾಗ್ನ ಸಂಶೋಧಕ ನಿತೇಶ್ ಪಡುಬಿದ್ರಿ ಕಾರ್ಯಕ್ರಮ ಸಂಯೋಜಿಸಿದರು.