“ಎಲ್ಲಾ ಹಂತಗಳಲ್ಲಿ ಏಕತೆ" ಅಗತ್ಯ: ಪಕ್ಷದ ಸಂಸದರ ಸಭೆಯಲ್ಲಿ ಸೋನಿಯಾ ಗಾಂಧಿ ಕರೆ

ಹೊಸದಿಲ್ಲಿ: ಇಂದು ಪಕ್ಷದ ಸಂಸದರ ಸಾಪ್ತಾಹಿಕ ಸಭೆಯಲ್ಲಿ ಪಕ್ಷದ "ಆಘಾತಕಾರಿ ಮತ್ತು ನೋವಿನ" ಚುನಾವಣಾ ಸೋಲುಗಳ ಬಗ್ಗೆ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು "ಎಲ್ಲಾ ಹಂತಗಳಲ್ಲಿ ಏಕತೆ" ಹಾಗೂ ಸ್ಥಿತಿಸ್ಥಾಪಕತ್ವದ ಅಗತ್ಯವನ್ನು ಒತ್ತಿ ಹೇಳಿದರು.
ಕಾಂಗ್ರೆಸ್ ಅನ್ನು ಪುನರುಜ್ಜೀವನಗೊಳಿಸಲು ಕಠಿಣ ಕ್ರಮಗಳಿಗೆ ಕರೆ ನೀಡುತ್ತಿರುವ "ಜಿ-23" ಅಥವಾ 23 ಭಿನ್ನಮತೀಯರ ಗುಂಪಿಗೆ ಸಂದೇಶವನ್ನು ಕಳುಹಿಸುವ ಸುಳಿವು ನೀಡಿರುವ ಸೋನಿಯಾ ಗಾಂಧಿ, ಪಕ್ಷವನ್ನು ಹೇಗೆ ಬಲಪಡಿಸುವುದು ಎಂಬುದರ ಕುರಿತು ನಾನು ಅನೇಕ ಸಲಹೆಗಳನ್ನು ಸ್ವೀಕರಿಸಿದ್ದೇನೆ ಹಾಗೂ ಅವುಗಳಲ್ಲಿ ಹಲವು ಸಲಹೆಗಳ ಬಗ್ಗೆ ತಾನು ಕೆಲಸ ಮಾಡುತ್ತಿದ್ದೇನೆ’’ ಎಂದು ಹೇಳಿದರು.
"ಇತ್ತೀಚಿನ ಚುನಾವಣಾ ಫಲಿತಾಂಶಗಳಿಂದ ನೀವು ಎಷ್ಟು ನಿರಾಶೆಗೊಂಡಿದ್ದೀರಿ ಎಂದು ನನಗೆ ಚೆನ್ನಾಗಿ ತಿಳಿದಿದೆ. ಈ ಫಲಿತಾಂಶ ಆಘಾತಕಾರಿ ಹಾಗೂ ನೋವುಂಟು ಮಾಡಿದೆ" ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆಯಲ್ಲಿ ಸೋನಿಯಾ ಗಾಂಧಿ ಹೇಳಿದರು.
"ನಮ್ಮ ಸಮರ್ಪಣೆ ಮತ್ತು ದೃಢತೆ, ನಮ್ಮ ಚೈತನ್ಯವು ಅಗ್ನಿ ಪರೀಕ್ಷೆ ಎದುರಿಸುತ್ತಿದೆ. ನಮ್ಮ ವಿಶಾಲ ಸಂಘಟನೆಯ ಎಲ್ಲಾ ಹಂತಗಳಲ್ಲಿ ಏಕತೆಯು ಅತ್ಯುನ್ನತ ಪ್ರಾಮುಖ್ಯತೆಯನ್ನು ಹೊಂದಿದೆ ಹಾಗೂ ಅದನ್ನು ಖಚಿತಪಡಿಸಿಕೊಳ್ಳಲು ಅಗತ್ಯವಿರುವ ಎಲ್ಲವನ್ನೂ ಮಾಡಲು ನಾನು ನಿರ್ಧರಿಸಿದ್ದೇನೆ’’ ಎಂದರು.







