ಮಂಗಳೂರು ವಿಮಾನ ನಿಲ್ದಾಣ: ದ್ವಿಚಕ್ರ ವಾಹನ ಪಾರ್ಕಿಂಗ್ ಉದ್ಘಾಟನೆ

ಮಂಗಳೂರು : ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ತನ್ನ ಬಳಕೆದಾರರ ಸುರಕ್ಷತೆಗೆ ಆದ್ಯತೆಯನ್ನು ನೀಡುತ್ತಿದ್ದು, ಇದೀಗ ಅದರ ಮುಂದುವರಿದ ಭಾಗವಾಗಿ ದ್ವಿಚಕ್ರ ವಾಹನಗಳಿಗೆ ಹೊಸ ಪಾರ್ಕಿಂಗ್ ಸೌಲಭ್ಯವನ್ನು ಕಲ್ಪಿಸಿದೆ.
ವಿಮಾನ ನಿಲ್ದಾಣದ ಪ್ರವೇಶದ್ವಾರದ ಬಳಿ 690 ಚದರ ಮೀಟರ್ ಪ್ರದೇಶದಲ್ಲಿ ಪಾರ್ಕಿಂಗ್ ಸೌಲಭ್ಯವನ್ನು ಕಲ್ಪಿಸಲಾಗಿದ್ದು, ಇಲ್ಲಿ130 ದ್ವಿಚಕ್ರ ವಾಹನಗಳನ್ನು ಪಾರ್ಕಿಂಗ್ ಮಾಡಬಹುದಾಗಿದೆ.
ಇದರೊಂದಿಗೆ ವಿಮಾನ ನಿಲ್ದಾಣವು ದ್ವಿಚಕ್ರ ವಾಹನಗಳಿಗೆ ಎರಡು ಪಾರ್ಕಿಂಗ್ ಸ್ಥಳವನ್ನು ಹೊಂದಿದಂತಾಗಿದ್ದು, ಒಟ್ಟು 300 ದ್ವಿಚಕ್ರ ವಾಹನಗಳನ್ನು ನಿಲುಗಡೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ.
ವಿಮಾನ ನಿಲ್ದಾಣ ಒಟ್ಟು ಪಾರ್ಕಿಂಗ್ ಸ್ಥಳಗಳ ಸಂಖ್ಯೆ ಏಳಕ್ಕೇರಿದ್ದು, ಉಳಿದ ಐದು ಪಾರ್ಕಿಂಗ್ ದ್ವೀಪಗಳನ್ನು ಚತುಷ್ಚಕ್ರ ವಾಹನಗಳಿಗೆ ಮೀಸಲಿಡಲಾಗಿದೆ. ಇಲ್ಲಿ 300 ಚತುಷ್ಚಕ್ರ ವಾಹನಗಳನ್ನು ಇರಿಸುವ ಸಾಮರ್ಥ್ಯವನ್ನು ಹೊಂದಿದೆ. ಅಪ್ಲಿಕೇಶನ್-ಆಧಾರಿತ ಟ್ಯಾಕ್ಸಿ ಅಗ್ರಿಗೇಟರ್‌ಗಳು, ಪ್ರಿ-ಪೇಯ್ಡ್ ಏರ್‌ಪೊರ್ಟ್ ಟ್ಯಾಕ್ಸಿ ಸೇವೆಗಳು, ಖಾಸಗಿ ಮತ್ತು ಅಧಿಕೃತ ವಾಹನಗಳಿಗಾಗಿ ಪಾರ್ಕಿಂಗ್ ಜಾಗ ಕೂಡಾ ಇದರಲ್ಲಿ ಸೇರಿದೆ ಎಂದು ವಿಮಾನ ನಿಲ್ದಾಣದ ಪ್ರಕಟನೆ ತಿಳಿಸಿದೆ.







