ಮೈಸೂರು: ಸರ್ವ ಜನಾಂಗದ ಶಾಂತಿಯ ತೋಟದ ಉಳಿವಿಗಾಗಿ ಮಾನವ ಸರಪಳಿ

ಮೈಸೂರು: ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಮೈಸೂರಿನಲ್ಲಿ ಮಂಗಳವಾರ ಸರ್ವ ಜನಾಂಗದ ಶಾಂತಿಯ ತೋಟದ ಉಳಿವಿಗಾಗಿ ಮಾನವ ಸರಪಳಿ ನಡೆಸಿದರು.
ನಗರದ ಚಿಕ್ಕ ಗಡಿಯಾರದ ವೃತ್ತದಲ್ಲಿ ಜಮಾಯಿಸಿದ ಪ್ರಗತಿಪರರು, ಸಾಹಿತಿಗಳು, ಬುದ್ಧಿ ಜೀವಿಗಳು ಮತ್ತು ರಂಗಕರ್ಮಿಗಳು ಭಾಗವಹಿಸಿ ಪ್ರೀತಿ ಹಬ್ಬಲಿ, ದ್ವೇಷ ತೊಲಗಲಿ, ಮನುಷ್ಯ-ಮನುಷ್ಯರ ನಡುವೆ ಸೌಹಾರ್ದದ ಬಳ್ಳಿ ಹಬ್ಬಲಿ. ಕೋಮುವಾದ ತೊಲಗಲಿ, ಶಾಂತಿ ಸೌಹಾರ್ದ ನೆಲಸಲಿ ಎಂಬ ಘೋಷಣೆ ಮೊಳಗಿಸಿದರು.
ಇದೇ ವೇಳೆ ಹಿರಿಯ ಸಮಾಜವಾದಿ ಪ.ಮಲ್ಲೇಶ್ ಮಾತನಾಡಿ, ಸರ್ವಜನಾಂಗದ ಶಾಂತಿಯ ತೋಟವಾಗಿದ್ದ ಕನ್ನಡ ನಾಡಿನಲ್ಲಿ ಧರ್ಮದ ಭೂತ ನೃತ್ಯ ಆರಂಭವಾಗಿದೆ.ಹಿಂದೂ-ಮುಸ್ಲಿಮರ ನಡುವೆ ಕಂದಕ ತೋಡಿ, ರಾಜ್ಯದ ಸೌಹಾರ್ದಕ್ಕೆ ಬೆಂಕಿ ಇಡುವ ಕೆಲಸವನ್ನು ಸಂಘಪರಿವಾರ ಮತ್ತು ಹಿಂದೂತ್ವ ಸಂಘಟನೆಗಳು ವ್ಯವಸ್ಥಿತವಾಗಿಯೇ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿಜಾಬ್ ಮೂಲಕ ಆರಂಭಗೊಂಡ ಮುಸ್ಲಿಮರ ವಿರುದ್ಧದ ರಾಜಕೀಯದ ಪಘಡೆಯಾಟ, ಜಾತ್ರೆ-ಜನ ಜಂಗುಳಿಗಳಲ್ಲಿ ಅವರ ವ್ಯಾಪಾರ-ವಹಿವಾಟನ್ನು ನಿರ್ಬಂಧಿಸುವ ವರಗೆ, ಮಾಂಸ ಮಾರಾಟದ ಹಲಾಲ್ ತನಕ ಮುಂದುವರೆದಿದೆ. ಇಷ್ಟಕ್ಕೇ ಅವರು ಸುಮ್ಮನಾಗುತ್ತಿಲ್ಲ, ಇನ್ನೂರೈವತ್ತು ವರ್ಷಗಳ ಹಿಂದಿನ ಚರಿತ್ರೆಯನ್ನೇ ತಿರುಚುವ ಹಾಗೂ ತಮಗೆ ಬೇಕಾದಂತೆ ಹೊಸ ರೂಪ ನೀಡುವ ಮಟ್ಟಕ್ಕೂ ತಲುಪುತ್ತಿದ್ದಾರೆ. ಊರುಗಳಲ್ಲಿರುವ ಟಿಪ್ಪು ಸರ್ಕಲ್ ಗಳ ಹೆಸರನ್ನು ಬದಲಿಸುವ ಚಿಂತನೆಯೂ ಆರಂಭಗೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದು ಭಾರತ. ಇಲ್ಲಿರುವ ಎಲ್ಲರೂ ಭಾರತೀಯರು. ಜಾತಿಯಾಧಾರಿತವಾದ ಎಲ್ಲಾ ಧರ್ಮಗಳೂ ಅವರವರ ಮಂದಿರ-ಮಸೀದಿ- ಇಗರ್ಜಿಗಳಿಗಷ್ಟೇ ಸೀಮಿತವಾಗಬೇಕೆಂಬುದೇ ನಮ್ಮೆಲ್ಲರ ಆಶಯ. ನಾವೆಲ್ಲರೂ ಮೊದಲು ಮನುಷ್ಯರು. ಮಾನವೀಯತೆಯೇ ನಮ್ಮೆಲ್ಲರ ಮಹಾಧರ್ಮ . ಸಂವಿಧಾನವೇ ಈ ಮಣ್ಣಿನ ಸರ್ವಶ್ರೇಷ್ಠ ಗ್ರಂಥ ಎಂದು ಹೇಳಿದರು.
ಒಗ್ಗಟ್ಟಾಗಿ ಕೈ ಹಿಡಿದು ಸಾಗುತ್ತಿದ್ದ ಜಾಗದಲ್ಲೀಗ ಕಾಲನ್ನೆಳೆದು ಕೆಡವುವ ಪರಿಪಾಠ ಆರಂಭವಾಗಿದೆ. ಅಧಿಕಾರದ ದುರಾಸೆಯಲ್ಲಿ ಮುಳುಗಿರುವ ಪಕ್ಷ, ಸಂಘಟನೆ ಮತ್ತು ಧಾರ್ಮಿಕ ಸಂಘ-ಸಂಸ್ಥೆಗಳ ರಾಜಕಾರಣಿಗಳು ಹಾಗೂ ಕೇಸರಿಪೀಡಿತ, ಬಲಗಣ್ಣಿನಿಂದ ಮಾತ್ರವೇ ನೋಡುವ ಸ್ವತಂಘೋಷಿತ ಚಿಂತಕರು, ಕರ್ನಾಟಕದ ಹೊಂದಿಬಾಳುವ ಪರಂಪರೆಯನ್ನು ಒಡೆದುರುಳಿಸುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದರು.
ಇಂಥ ವೈಮನಸ್ಯದ ಸನ್ನಿವೇಶವನ್ನು ಹುಟ್ಟು ಹಾಕುತ್ತಿರುವ ಈ ಕೊಳಕು ಮನಸ್ಸುಗಳ ವಿರುದ್ಧ ಸಾಂಕೇತಿಕ ಪ್ರತಿಭಟನೆಯ ಜೊತೆಗೆ ಮೂಲಭೂತವಾದಿಗಳಾದ ಹಿಂದೂ ಮತ್ತು ಮುಸ್ಲಿಮರೂ ಸಹ, ವಿಧಾನಕ್ಕೆ ಬದ್ಧರಾಗಿ, ನಡೆ-ನುಡಿಗಳಲ್ಲಿ ಪಕ್ಕಾ ಭಾರತೀಯರಾಗಿ ಎಲ್ಲರ ಜೊತೆಗೂಡಿ ನಡೆಯಬೇಕೆಂಬ ಆಗ್ರಹದೊಂದಿಗೆ ಪ್ರಗತಿಪರ ಸಂಘಟನೆಗಳ ಒಕ್ಕೂಟ, ಮಾನವ ಸರಪಳಿಯ ಮೂಲಕ ಎಲ್ಲರೊಳಗೊಂದಾಗಿ ಬಾಳಬೇಕೆಂಬ ತನ್ನ ಸದಾಶಯವನ್ನು ವ್ಯಕ್ತಪಡಿಸುತ್ತಿದೆ ಎಂದು ಹೇಳಿದರು.
ಮೊದಲು ನಾವೆಲ್ಲರೂ ಮನುಷ್ಯರು, ಭಾರತೀಯರು, ಮಾನವೀಯತೆಯೇ ನಮ್ಮ ಮೂಲ ನೆಲೆಗಟ್ಟು ಎಂಬುದನ್ನು ಸಾರುವುದೇ ನಮ್ಮ ಉದ್ದೇಶ ಎಂದು ಹೇಳಿದರು.
ಚಿಕ್ಕಗಡಿಯಾರದ ಸುತ್ತಾ ದೊಡ್ಡ ಮಟ್ಟದಲ್ಲಿ ಮಾನವ ಸರಪಳಿ ನಡೆಸಿ ಸೌಹಾರ್ದದತೆಯ ಸಂದೇಶಗಳನ್ನು ಸಾರಿದರು.
ಇದೇ ವೇಳೆ, ರೈತ ಸಂಘದ ಹೊಸಕೋಟೆ ಬಸವರಾಜು, ಸ್ವರಾಜ್ ಇಂಡಿಯಾದ ಉಗ್ರನರಸಿಂಹೇಗೌಡ, ಪ್ರಗತಿಪರ ಚಿಂತಕ ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು, ಪತ್ರಕರ್ತ ಟಿ.ಗುರುರಾಜ್, ಹಿರಿಯ ರಂಗಕರ್ಮಿ ಬಸವಲಿಂಗಯ್ಯ, ಜನಾರ್ಧನ್ (ಜನ್ನಿ), ಕೃಷ್ಣಪ್ರಸಾದ್, ಪ್ರೊ.ಕಾಳಚನ್ನೇಗೌಡ, ಪಿಎಫ್ ಐ ನ ಕಲೀಂ, ಸೈಯದ್ ಕಲೀಂ, ನಾಸೀರ್, ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಎನ್.ಭಾಸ್ಕರ್, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೇತ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಂ, ದಸಂಸ ಮುಖಂಡರುಗಳಾದ ಬೆಟ್ಟಯ್ಯ ಕೋಟೆ, ಚೋರನಹಳ್ಳಿ ಶಿವಣ್ಣ, ಶಂಭುಲಿಂಗಸ್ವಾಮಿ, ಕೆ.ವಿ.ದೇವೇಂದ್ರ, ಕಲ್ಲಹಳ್ಳಿ ಕುಮಾರ್, ವಕೀಲ ಪುನೀತ್ ಎನ್, ಕಾಂತರಾಜು, ಪಿಯುಸಿಎಲ್ ನ ವಿ.ಲಕ್ಷ್ಮೀನಾರಯಣ್, ಸಾಹಿತಿ ರತಿರಾವ್, ನಾ.ದಿವಾಕರ, ರೈತ ಮುಖಂಡರುಗಳಾದ ಹೆಜ್ಜಿಗೆ ಪ್ರಕಾಶ್, ಸಿದ್ದಪ್ಪ, ಮಂಡಕಳ್ಳಿ ಮಹೇಶ್, ಕಾರ್ಮಿಕ ಮುಖಂಡ ರವಿ, ಸುನೀಲ್ ಸೇರಿದಂತೆ ಹಲವಾರು ಮಂದಿ ಭಾಗವಹಿಸಿದ್ದರು.






.jpeg)



