ವಿವಿಧ ಸಂಸ್ಕೃತಿಗಳಿರುವ ಈ ಸಮಾಜವನ್ನು ಹಾಳುಗೆಡವಲು ಬಿಜೆಪಿಗೆ ಅವಕಾಶ ನೀಡುವುದಿಲ್ಲ: ಸೋನಿಯಾ ಗಾಂಧಿ

ಹೊಸದಿಲ್ಲಿ: ಪಕ್ಷದ ಸಂಘಟನೆಯಲ್ಲಿ ಎಲ್ಲಾ ಹಂತಗಳಲ್ಲಿಯೂ ಇಂದು ಒಗ್ಗಟ್ಟಿಗೆ ಕರೆ ನೀಡಿದ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ಈ ಉದ್ದೇಶವನ್ನು ಸಾಕಾರಗೊಳಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತಾವು ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆಯಲ್ಲಿ ಮಾತನಾಡಿದ ಸೋನಿಯಾ, ತಮ್ಮ ಮೇಲಿನ ಮಾತುಗಳ ಮೂಲಕ, ಜಿ23 ಎಂದೇ ಕರೆಯಲ್ಪಡುವ ಹಾಗೂ ಗಾಂಧಿ ಕುಟುಂಬದ ನಾಯಕತ್ವವನ್ನು ಸದಾ ಟೀಕಿಸುವ ಪಕ್ಷದ 23 ಭಿನ್ನಮತೀಯ ನಾಯಕರತ್ತ ತಮ್ಮ ಹಸ್ತ ಚಾಚಿದ್ದಾರೆಂದೇ ತಿಳಿಯಲಾಗಿದೆ.
"ಕಾಂಗ್ರೆಸ್ ಪಕ್ಷಕ್ಕೆ ಪುನಶ್ಚೇತನ ನಮಗೆ ಮಾತ್ರ ಮಹತ್ವದ್ದಾಗಿರದೆ ಪ್ರಜಾಪ್ರಭುತ್ವ ಮತ್ತು ಸಮಾಜಕ್ಕೂ ಅಗತ್ಯ" ಎಂದು ಅವರು ಹೇಳಿದರು.
"ಮುಂದಿನ ಹಾದಿ ಕಾಂಗ್ರೆಸ್ ಪಕ್ಷಕ್ಕೆ ಹಿಂದೆಂದಿಗಿಂತಲೂ ಹೆಚ್ಚು ಸವಾಲುಭರಿತವಾಗಿದೆ, ನಮ್ಮ ಶಕ್ತಿ ಸಾಮರ್ಥ್ಯ ಒರೆಗೆ ಹಚ್ಚಲ್ಪಟ್ಟಿದೆ, ಬೆದರಿಕೆಗಳು ಅಥವಾ ಇತರ ತಂತ್ರಗಾರಿಕೆ ನಮ್ಮನ್ನು ಮೌನವಾಗಿಸಲು ಸಾಧ್ಯವಿಲ್ಲ" ಎಂದು ಸೋನಿಯಾ ಹೇಳಿದರು.
"ನಮ್ಮ ವೈವಿಧ್ಯ ಸಂಸ್ಕೃತಿಯ ಸಮಾಜದಲ್ಲಿರುವ ಸಾಮರಸ್ಯಕ್ಕೆ ಹಾನಿಯುಂಟು ಮಾಡಲು ಬಿಜೆಪಿಗೆ ಅವಕಾಶ ನೀಡುವುದಿಲ್ಲ" ಎಂದು ಅವರು ಹೇಳಿದರು.







