ಯುವ ಸಮುದಾಯಕ್ಕೆ ಡಾ. ಜಗಜೀವನರಾಮ್ ಜೀವನವೇ ಪಾಠ: ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ

ಮಂಗಳೂರು : ಸಣ್ಣಪುಟ್ಟ ಸಮಸ್ಯೆಗಳನ್ನೇ ದೊಡ್ಡ ಸಮಸ್ಯೆಯನ್ನಾಗಿ ಬಿಂಬಿಸುವ ಇಂದಿನ ಯುವ ಸಮುದಾಯಕ್ಕೆ ಡಾ.ಬಾಬು ಜಗಜೀವನರಾಮ್ ಅವರ ಜೀವನವೇ ಒಂದು ಪಾಠ. ಶಾಲಾ ಜೀವನದಿಂದಲೇ ಅಸಮಾನತೆ ವಿರುದ್ಧ ಹೋರಾಟ ಮಾಡಿರುವ ಅವರು, ಶಿಕ್ಷಣದಿಂದ ಸಮಾಜವೇ ಬದಲಾಗಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ಹೇಳಿದರು.
ದ.ಕ ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ ಮಹಾನಗರಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜರುಗಿದ ಹಸಿರು ಕ್ರಾಂತಿಯ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ್‌ರಾಮ್ ಅವರ ೧೧೫ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರ ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಿದ ಮಹಾನ್ ಚೇತನ. ದೇಶದ ಬಡವರು, ದೀನ ದಲಿತರು ಶೋಷಿತ ವರ್ಗದ ಸೇವೆಯಲ್ಲಿ ಜೀವನ ಮುಡುಪಾಗಿಟ್ಟಿದ್ದರು. ಕಾರ್ಮಿಕ ಕಾಯ್ದೆಗಳ ರೂವಾರಿ. ಬರಪರಿಸ್ಥಿತಿಯ ನಿರ್ವಹಣೆಯಲ್ಲಿ ಅವರ ನಡೆ ಇಂದಿಗೂ ಶ್ಲಾಘನೀಯ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ ಅಭಿಪ್ರಾಯಿಸಿದರು.
೧೯೬೦ರ ದಶಕದಲ್ಲಿ ದೇಶದಲ್ಲಿ ಕಾಡಿದ ಭೀಕರ ಬರಗಾಲದ ಸಮಯದಲ್ಲಿ ದೇಶದ ಕೃಷಿ ಸಚಿವರಾಗಿದ್ದ ಜಗಜೀವನ ರಾಮ್ ಅವರು ಹಸಿರು ಕ್ರಾಂತಿಯ ಮೂಲಕ ಆಹಾರ ಭದ್ರತೆ ಉಂಟಾಗುವಲ್ಲಿ ಪ್ರಮುಖ ಕಾರಣಕರ್ತರು. ಪಾಕಿಸ್ತಾನ ವಿರುದ್ಧದ ಯುದ್ಧದ ವೇಳೆ ರಕ್ಷಣಾ ಸಚಿವರಾಗಿ ಚಾಕಚಕ್ಯತೆಯಿಂದ ಕೆಲಸ ಮಾಡಿದ್ದರು ಎಂದು ಮುಖ್ಯಭಾಷಣಕಾರರಾಗಿದ್ದ ಮೀನುಗಾರಿಕಾ ಕಾಲೇಜು ಡೀನ್ ಡಾ.ಶಿವಕುಮಾರ್ ಮಗದ ಹೇಳಿದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ಸೋನವಣೆ ಹೃಷಿಕೇಶ್ ಭಗವಾನ್, ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಸಿದ್ದಲಿಂಗೇಶ ಬೇವಿನಕಟ್ಟಿ ಸ್ವಾಗತಿಸಿದರು. ಸಹಾಯಕ ನಿರ್ದೇಶಕಿ ಸುನೀತಾ ವಂದಿಸಿದರು.